ಪ್ರೀತಿಯ ಕುರುಹುಗಳ ಕುರಿತು...
ಹೊಚ್ಚ ಹೊಸ ಹಾಳೆಗಳು ಟೇಬಲ್ ಮೇಲಿದ್ದವು. ಯಾಕೋ ಆ ಹೊಸ ಬಿಳಿಯ ಹಾಳೆಗಳ ಮೇಲೆ ತಪ್ಪಿಲ್ಲದೆ ಬರೆಯಲು ನನ್ನ ಬಲಗೈ ಹಿಂದೆಮುಂದೆ ನೋಡುತ್ತಿತ್ತು. ಇಷ್ಟು ವರ್ಷಗಳ ಬದುಕೊಂದನು ತಪ್ಪು ಮಾಡದೆಯೆ ಬದುಕಿ ಬಂದೆನಾ ಅಂತ ನನ್ನನ್ನು ನಾನೇ ಪ್ರಶ್ನಿಸಿಕೊಂಡಿದ್ದೆ. ತಪ್ಪು ಮಾಡದೆಯೇ ಬದುಕೊಂದನು ಬದುಕಲು ಹಾಗು ಬರಹವೊಂದನು ಬರೆಯಲು ಸಾಧ್ಯವಿಲ್ಲ ಅನ್ನಿಸಿತು. ಬದುಕಿನಲ್ಲಿ ಗೊತ್ತಿದ್ದೋ ಗೊತ್ತಿಲ್ಲದೇನೋ ಪದೇ ಪದೇ ತಪ್ಪು ಮಾಡುತ್ತಾ, ಆ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಬದುಕೊಂದನು ಬದುಕುತ್ತಾ ಬಂದ ಬಗೆಯನ್ನು ಆ ಹಾಳೆಗಳ ಮೇಲೆ ಬರೆಯಬೇಕು ಅನ್ನಿಸಿತು. ನನ್ನ ಬದುಕೆಂದರೆ ನನ್ನ ಅಪ್ಪ, ಅಮ್ಮ, ತಮ್ಮ, ತಂಗಿ, ನನ್ನ ಗೆಳೆಯ, ಹಾಗು ಗೆಳತಿಯರು ಅಂದುಕೊಂಡಿದ್ದೇನೆ. ಸಂಬಂದಿಕರು ಯಾವತ್ತಿಗು ಒಂತರ ದೂರವಾಗೆ ಉಳಿದ ಕಾರಣ ಅವರ್ಯಾರನ್ನು ಕುರಿತು ಬರೆಯುವ ಬದಲು ನಾನು ಓಡಾಡಿದ ರಸ್ತೆಗಳ ಬಗ್ಗೆ, ಅಲ್ಲಿ ಸಿಕ್ಕ ಜನಗಳ ಬಗ್ಗೆ, ಹಾಗು ಊಟ ತಿಂಡಿಗಳ ಬಗ್ಗೆ ಬರೆಯಲು ಪ್ರಯತ್ನಿಸಿದ್ದೇನೆ. ಹಾಗೆ ನಾನು ಕಳೆದ ಮೂರ್ ನಾಲ್ಕು ವರ್ಷಗಳಲ್ಲಿ ಹೆಚ್ಚು ಹೊರಗೆ ಓಡಾಡಿದ್ದು, ಊಟ ಮಾಡಿದ್ದು, ಸುಮ್ಮನೆ ಕಾಲ ಕಳೆದಿದ್ದು ನನ್ನ ಗೆಳತಿಯ ಜೊತೆ ಆದ ಕಾರಣ ನನ್ನ ಗೆಳತಿ ಪ್ರತಿ ಪುಟಗಳಲ್ಲಿಯೂ ಸುಮ್ಮನಾದರು ಇದ್ದಾಳೆ ಅಂತ ನನ್ನ ಅನಿಸಿಕೆ. ಬದುಕಿನಲ್ಲಿ ಒಂದು ಹೆಣ್ಣಿನ ಪ್ರೀತಿಗಾಗಿ ಬಹುಶಃ ನಾನು ತುಂಬಾ ಪರಿತಪಿಸಿದವನು. ಆ ಪ್ರೀತಿ ಸಿಗದಿದ್ದಾಗ ಬಹಳ ರೊಚ್ಚಿಗೆದ್ದವನು ಹಾಗೆಯೇ ಮಂಕಾದವನು. ಆ ರೊಚ್ಚಿನ ಹಾಗು ಮಂಕಿನ ದಿನಗಳಲ್ಲೇ ಅನಿಸುತ್ತೆ ಹೊಸ ಬದುಕೊಂದನು ಬದುಕಲು ನಾನು ಬಯಸಿದ್ದು. ಈ ಲೇಖನದ ಶೀಷಿ೵ಕೆ ನೋಡಿ ನೀವು ಈ ಲೇಖನವನ್ನು ಓದುತ್ತಿರೋದರಿಂದ ನಿಮ್ಮ ಹೃದಯದಲ್ಲೂ ಪ್ರೀತಿಯ ಕುರುಹುಗಳಿವೆ ಅನ್ನೋದು ನನ್ನ ನಂಬಿಕೆ. ಹಾಗಿದ್ದಲ್ಲಿ ನನ್ನ ಈ ಪುಟ್ಟ ನೆನಪುಗಳ ಬರಹದ ಓದಿಗೆ ನಿಮಗೆ ಹೃದಯಪೂರ್ವಕ ಸ್ವಾಗತವನ್ನು ಬಯಸ್ತೇನೆ. ಪ್ರತಿ ಗುರುವಾರದ ಸಂಜೆಯೊಳಗೆ ಈ ಲೇಖನದ ಮುಂದಿನ ಭಾಗಗಳನ್ನು ನಿಮ್ಮ ಮುಂದೆ ಇಡುವ ಜವಾಬ್ದಾರಿ ನನ್ನದಾಗಲಿ. ಹ್ಯಾಪಿ ರೀಡಿಂಗ್.
 
 
1.ಪರಿಚಯ
ಈ ಪ್ರಪಂಚದಲ್ಲಿ ಒಂದು ಹುಡುಗ ಹುಡುಗಿ ಪರಿಚಯವಾಗೋಕೆ ಎಷ್ಟೊಂದು ದಾರಿಗಳಿವೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಹಾಗು ಇಂಟರ್ ನೆಟ್ ಬಂದ ಮೇಲಂತು ಪರಿಚಯಗಳನ್ನು ಇನ್ನು ಸುಲಭ ಮಾಡಿಸಿವೆ. ಮೂರ್ ನಾಲ್ಕು ವಷ೵ಗಳ ಹಿಂದೆ ನಾನು ನನ್ನ ಓದಿನ ಸಲುವಾಗಿ ಒಂದು ಸಣ್ಣ ಪೇಯಿಂಗ್ ಗೆಸ್ಟ್ ಸೇರಿದ್ದೆ. ಮೊದಲಾದರೆ ಓದುವ ಹುಡುಗರಿಗೆ ಅಂತ ನಗರಗಳಲ್ಲಿ ಹೆಚ್ಚಾಗಿ ಹಾಸ್ಟೆಲ್  ಗಳು ಇರುತಿದ್ದವು. ಈಗ ನಗರಗಳಿಗೆ ಓದುವ ಹುಡುಗರ ಜತೆಗೆ ದುಡಿಯುವ ಹುಡುಗ ಹುಡುಗಿಯರು ಬರುತ್ತಿರುವಾಗ ಮನೆಗಳನ್ನೆ ಹಾಸ್ಟೆಲ್ ಗಳ ಹಾಗೆ ಪರಿವತಿ೵ಸಿ ಓದುವ ಅಥವಾ ದುಡಿಯುವ ಹುಡುಗರಿಗೆ ಬಾಡಿಗೆಯ ತರಹ ಮನೆಗಳನ್ನು ನೀಡಿ ಹಣ ಮಾಡುವುದು ಈಗಿನ ಒಂದು ರೂಡಿ. ಹಾಗೆ ಹಾಸ್ಟೆಲ್ ತರಹ ಬೇರೆ ಜನಗಳ ಜತೆ ನಗರಗಳಲ್ಲಿ ಬದುಕಿದರೆ ಅದಕ್ಕೆ ಪೇಯಿಂಗ್ ಗೆಸ್ಟ್ ಅನ್ನುತ್ತಾರೆ ಅಂತ ನನಗೆ ಗೊತ್ತಾಗಿದ್ದು ನಾನು ಆ ಪೇಯಿಂಗ್ ಗೆಸ್ಟ್ ಎಂಬ ಹಾಸ್ಟೆಲ್ ಅನ್ನು ಸೇರಿದ ಮೇಲೆಯೆ. ನಾನಿದ್ದ ಆ ಸಣ್ಣ ರೂಮಿನಲ್ಲಿ ಸಾಲಾಗಿ ಐದು ಚಿಕ್ಕ ಚಿಕ್ಕ ಮಂಚಗಳಿದ್ದವು. ನನ್ನ ಜತೆಗೆ ವಾಸಿಸುತ್ತಿದ್ದುದು ಮೂರು ಜನ. ಒಬ್ಬ ನಾಗಲ್ಯಾಂಡಿನವನು, ಒಬ್ಬ ಸಿಕ್ಕಿಮ್ ನವನು ಹಾಗು ಇನ್ನೊಬ್ಬನ ಊರು ಯಾವುದು ಅಂತ ಗೊತ್ತಿಲ್ಲ. ಆದರೆ ಕಾಲ್ ಸೆಂಟರ್ ಒಂದರಲ್ಲಿ ಕೆಲಸಕ್ಕೆ ಹೋಗ್ತಾನೆ ಅಂತ ಗೊತ್ತಿತ್ತು.
 
ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡೊ ಅವನು ರಾತ್ರಿ ರೂಮು ಬಿಟ್ಟರೆ ಮತ್ತೆ ಬರುತ್ತಿದ್ದುದು ಬೆಳಿಗ್ಗೆಯೆ. ಬೆಳಿಗ್ಗೆ ಬಂದವನೆ ಮಲಗಿ ಬಿಡುತ್ತಿದ್ದ. ನಾನು ಬೆಳಿಗ್ಗೆ ರೂಮು ಬಿಟ್ಟರೆ ಲ್ಯಾಬಿನ ಕೆಲಸ ಮುಗಿಸಿ ರಾತ್ರಿ ರೂಮು ಸೇರುತ್ತಿದ್ದೆ. ಆದ್ದರಿಂದ ಅವನ ಜತೆ ಮಾತನಾಡಿದ್ದು ತುಂಬಾನೆ ಕಡಿಮೆ. ಮೊದಲಾದರೆ ಮನೆ ಮನೆಗು ಹೋಗಿ ಒಂದು ಕಂಪನಿಯ ವಸ್ತುಗಳನ್ನು ಮಾರಿದರೆ ಸೇಲ್ಸ್ ಮ್ಯಾನ್ ಅಂತ ಅನ್ನುತ್ತಿದ್ದರು. ಈಗ ಅದೆ ತರಹದ ದೊಡ್ಡ ದೊಡ್ಡ ಕಂಪನಿಯ ವಸ್ತುಗಳನ್ನು ಒಂದು ಕಾಲ್ ಸೆಂಟರ್ ನಲ್ಲಿ ಕುಳಿತು ಸುಮ್ಮನೆ ಫೋನ್ ಮಾಡಿ ಮಾರಿಬಿಡಬಹುದಾದ ಕೆಲಸವನ್ನು ಒಂದು ಪ್ರಕಾರದ ಕಾಲ್ ಸೆಂಟರ್ ಕೆಲಸ ಅಂತ ಕರೆಯಬಹುದೇನೋ? ಹಾಗೆಯೆ ನಮ್ಮ ಮೊಬೈಲ್ ನಲ್ಲಿ ಸಮಸ್ಯೆ ಬಂದಾಗ ತಕ್ಷಣ ಕಸ್ಟಮರ್ ಕೇರ್ ಗೆ ಫೋನ್ ಮಾಡಿದರೆ ನಮ್ಮ ಸಮಸ್ಯೆಗೆ ಪರಿಹಾರ ಸೂಚಿಸುವುದು ಅತ್ತಲಿನ ದನಿಯ ಕೆಲಸ ಇನ್ನೊಂದು ಪ್ರಕಾರದ ಕಾಲ್ ಸೆಂಟರ್ ಗೆ ಒಂದು ಉದಾಹರಣೆ. ವಿದೇಶಿ ಕಂಪನಿಗಳ ಪರವಾಗಿ ಕೆಲಸ ಮಾಡಿದರೆ ನಮ್ಮ ದೇಶದಲ್ಲಿ ಕುಳಿತು ವಿದೇಶಿಯರಿಗೆ ಫೋನ್ ಮಾಡಬೇಕಾದರೆ ಇಲ್ಲಿನ ಸಮಯ ಹಾಗು ಅಲ್ಲಿನ ಸಮಯ ಬೇರೆಯಾದುದರಿಂದ ಕಾಲ್ ಸೆಂಟರ್ ನಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಬೇಕಾದುದು ಸಹಜ. ಆ ಹುಡುಗ ಬಹುಶಃ ವಿದೇಶಿ ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದನೇನೋ?
 
ಕಾಲ್ ಸೆಂಟರ್ ಹುಡುಗನನ್ನು ಬಿಟ್ಟು ಇನ್ನುಳಿದ ಇಬ್ಬರಲ್ಲಿ ಸಿಕ್ಕಿಮ್ ನ ಆ ಹುಡುಗ ಒಬ್ಬ ಮಾಜಿ ಬಾರ್ಟೆಂಡರ್. ಬಾರ್ಟೆಂಡರ್ ಅಂದರೆ ಏನು ಅಂತ ಆ ಹುಡುಗನನ್ನು ನೋಡಿದ ಮೇಲೆಯೆ ನನಗೆ ಗೊತ್ತಾಗಿದ್ದು. ದೊಡ್ಡ ದೊಡ್ಡ ಬಾರ್ ಗಳಲ್ಲಿ ಮದ್ಯ ತುಂಬಿದ ಬಾಟಲ್ಲನ್ನು ಹಾಗು ಗ್ಲಾಸ್ಸನ್ನು ಗಾಳಿಯಲ್ಲಿ ಎಸೆದು ಒಂತರ ಮ್ಯಾಜಿಕ್ ಮಾಡುವ ರೀತಿ ಮ್ಯಾಜಿಕ್ ಮಾಡ್ತ ಬಂದ ಬಾರಿನ ಗಿರಾಕಿಗಳಿಗೆ ಮದ್ಯ ಸುರಿದು ಕೊಡುವ ಅಸಾಮಿಗೆ ಬಾರ್ಟೆಂಡರ್ ಅಂತಾರಂತೆ! ಆ ಹುಡುಗ ರಾತ್ರಿ ರೂಮು ಸೇರಿದರೆ ತಾನು ಕಲಿತಿರೊ ವಿಧ್ಯೆಯನ್ನು ಮರೆಯಬಾರದು ಅಂತ ಒಂದು ಕೈಯಲ್ಲಿ ನೀರು ತುಂಬಿದ ಬಾಟಲ್ಲನ್ನು, ಇನ್ನೊಂದು ಕೈಯಲ್ಲಿ ಒಂದು ಲೋಟವನ್ನು ಹಿಡಿದು ಗಾಳಿಯಲ್ಲಿ ಎಸೆದು ವಿವಿಧ ಭಂಗಿಯಲ್ಲಿ ಲೋಟಕ್ಕೆ ಮಧ್ಯ ಸುರಿಯುವ ಆಟ ಆಡ್ತಾ ಇದ್ದ. ಆ ಬಾರ್ಟೆಂಡರ್ ಕೆಲಸದ ಕಾರಣ ಬೇರೆಯದೆ ಪ್ರಪಂಚವನ್ನು ನೋಡಿ ಬಂದವನ ಹಾಗೆ ಅವನು ನನ್ನ ಕಣ್ಣಿಗೆ ಕಾಣುತ್ತಿದ್ದ.
 
ಆ ನಾಗಲ್ಯಾಂಡಿನವನು ನೋಡಿದರೆ ನಾಗಲ್ಯಾಂಡಿನವನಂತೆ ಕಾಣುತ್ತಿರಲ್ಲಿಲ್ಲ. ಅವನ ಹೆಸರು ಕೇಳಿದ ಮೇಲೆ ಅವನು ಬೆಂಗಾಳಿ ಅಂತಲೂ ಅವನ ತಾತ ಎಷ್ಟೋ ವರ್ಷಗಳ ಹಿಂದೆ ನಾಗಲ್ಯಾಂಡಿನಲ್ಲಿ ಹೋಗಿ ನೆಲೆಸಿದ ಅಂತಲೂ ಗೊತ್ತಾಯಿತು. ನಮ್ಮ ದೇಶದ ಈಶಾನ್ಯ ಭಾಗದಲ್ಲಿ ವಾಸಿಸುವ ಜನರಿಗೆ ಇಂಗ್ಲೀಷ್ ಹಾಡುಗಳು ಅಂದರೆ ತುಂಭಾ ಇಷ್ಟ ಅಂತ ಆ ಹುಡುಗನ ಇಂಗ್ಲೀಷ್ ಹಾಡುಗಳ ವ್ಯಾಮೋಹವನ್ನು ನೋಡಿ ತಿಳಿದಿದ್ದೆ. ನಾನು ಓದಲು ಕುಳಿತಿರುವಾಗ ಉಚ್ಚ ಕಂಠದಲ್ಲಿ ಅವನು ಇಂಗ್ಲೀಷ್ ಹಾಡುಗಳನ್ನು ಹಾಡಲು ಶುರು ಮಾಡಿದರೆ ನನಗೆ ಒಂದೊಂದು ಸಾರಿ ವಿಚಿತ್ರ ಸಿಟ್ಟು ಬರುತ್ತಿತ್ತು. ಯಾವ ಕೆಲಸಕ್ಕೂ ಹೋಗದೆ ಬೆಳಿಗ್ಗೆಯಿಂದ ರೂಮಿನಲ್ಲಿ ಮಲಗಿರುತ್ತಿದ್ದ ಈ ಇಬ್ಬರು ಹುಡುಗರು ರಾತ್ರಿ ಆಗುತ್ತಿದ್ದಂತೆ ಎಲ್ಲೋ ಮೂಲೆಯಲ್ಲಿ ಅವಿತಿಟ್ಟಿರುವ ಇಸ್ಪೀಟಿನ ಎಲೆಗಳನ್ನು ಹಿಡಿದು ಕುಳಿತರೆ ಮತ್ತೆ ಮಲಗುತ್ತಿದ್ದುದು ಮುಂಜಾನೆಯಲ್ಲೆ! ಆ ಹುಡುಗರು ಮಲಗುತ್ತಿದ್ದಂತೆ ನಾನು ರೆಡಿಯಾಗಿ ಎಂದಿನಂತೆ ಆ ದಿನವೂ ನನ್ನ ಲ್ಯಾಬಿಗೆ ಹೋಗಿದ್ದೆ. ಅದೇ ದಿನ ನಮ್ಮ ಲ್ಯಾಬ್ ಪಕ್ಕದ ಅಕ್ವಾಗಾರ್ಡ್ನಲ್ಲಿ ನೀರು ತುಂಬಿಸಿತೊಳ್ಳಲು ನೀರಿನ ಬಾಟಲಿನ ಜೊತೆಗೆ ಬಂದ ಅವಳನ್ನು ನಾನು ಬಹುಶಃ ಎರಡನೇ ಬಾರಿ ನೋಡಿದ್ದೆ.
                                                                                                                                                                                            (ಮುಂದುವರೆಯುವುದು.........)