ಮದುವೆಯಾಗಿ ಮಕ್ಕಳಾಗದ ಹೆಣ್ಣಿಗೆ
ಅತ್ತೆ ಮತ್ತು ಗಂಡನ ಕಾಟ
ಊರವರಿಂದ ಬಂಜೆ ಎಂಬ ಕಿರೀಟ...
ಒಮ್ಮೊಮ್ಮೆ ತಿಂಗಳು ಎರಡಾದರೂ
ಮನೆಯ ಹೊರಗೆ ಕೂರದ
ಆ ಮೂರು ದಿನಗಳ ನೆನೆದು ಒಳಗೊಳಗೆ ಖುಷಿ...
ಖುಷಿ ಖುಷಿಯಾಗಿಯೇ ಉಳಿಯದೆ
ಮತ್ತೆ ಮನೆಯಿಂದ
ಮನೆಯವರ ಮನದಿಂದ
ದೂರ ದೂರ ಕುಳಿತ ಅನುಭವ...
ಚುಚ್ಚು ಮಾತುಗಳ ಜೊತೆ
ನಿತ್ಯ ಜಗಳ, ಮನಸ್ತಾಪ
ನಡುವೆ ಗಂಡನಿಗೆ ಮತ್ತೊಂದು ಮದುವೆಯ ಪ್ರಸ್ತಾಪ....
ಮುನಿದು ಬ್ಯಾಗಿನಲಿ ಬಟ್ಟೆ ತುರುಕಿ
ಅಮ್ಮನ ಮನೆಗೆ ಬಂದಿದ್ದೇ
ವಾರ ತಿಂಗಳುಗಳೇ ಉರುಳಿದರೂ
ಕರೆಯಲು ಬಾರದ ಗಂಡನ ಮೇಲೆ
ಸುಮ್ಮನಾದರು ಸಿಟ್ಟು....
ನಾನಿಲ್ಲದಿದ್ದರೇನಂತೆ ಮತ್ತೊಬ್ಬಳು
ಒಂದಿಲ್ಲದಿದ್ದರೇನಂತೆ ಇನ್ನೊಂದು ಮದುವೆ
ಹೆಂಡತಿ ಬಿಟ್ಟ ಗಂಡನಿಗೆ ಹೆಣ್ಣು ಸಿಗುವುದು ಕಷ್ಟವೇ
ಹೆಣ್ಣು ಭ್ರೂಣವನ್ನು ಕೊಲ್ಲುವ ಈ ಜಗದೊಳಗೆ...
ಚಿಂತೆಗೊಂಡ ಅಪ್ಪ ಅಣ್ಣ ಅಮ್ಮನ ಕಂಡು
ಮುನಿಸು ಮರೆತು ಮತ್ತೆ ಗಂಡನ ಮನೆಗೆ ಬಂದು
ಯಾರೋ ಕೊಟ್ಟ ಹಸಿರು ಔಷದಿ ತಿಂದು
ವಾರ ಮಾಡಿ ಹತ್ತಾರು ದೇವರುಗಳ, ಆಸ್ಪತ್ರೆಗಳ
ದರುಶನ ಮಾಡಿ ದುಡ್ಡು ತೆತ್ತ ಮೇಲೆ
ಹೊಟ್ಟೆಯೊಳಗೆ ದೊಡ್ಡದಾಗಿದ್ದ ತತ್ತಿಗಳ ಗಂಟು
ಡಾಕ್ಟರರ ಔಷದಿಗೆ ಕರಗಿತ್ತು....
ದೇವರ ಕರುಣೆಯೋ ಹೆತ್ತವರ ಹರಕೆಯೊ
ಮತ್ತೆ ಮನೆಯ ಹೊರಗೆ ಕೂರದ ದಿನಗಳು ಬಂದು
ಮುಂಜಾನೆಯ ವಾಕರಿಕೆ ಶುರುವಾಗಿ
ಸ್ಕಾನಿಂಗ್ನ ಪುಟ್ಟ ಪರದೆಯ ಮೇಲೆ
ಮಿಡಿಯುವ ಎರಡು ಜೀವಗಳ ಕಂಡ ಕ್ಷಣ
ಮನ ತುಂಬಿ ಬಂದು ಕಣ್ಣೀರ್ಗರೆದು
ಮಕ್ಕಳಿಲ್ಲದವಳೆಂಬ ಕಿರೀಟವ ತೆಗೆದಿಟ್ಟು
ಅಮ್ಮನೆಂಬ ಮುಕುಟ ತೊಡುವ ಕನಸು ಕಂಡಿದ್ದೇ...
ವಾರಗಳು, ತಿಂಗಳುಗಳು ಕಳೆದಂತೆ
ಅತ್ತೆ ಮತ್ತು ಗಂಡನ ಸದ್ದಡಗಿ ಹೋಗಿ
ಅಮ್ಮನ ಮನೆಗೆ ಹಾರೈಕೆಗೆ ಬಂದಾಗ
ಮೌನವಾಗಿರುತ್ತಿದ್ದ ಮೊಬೈಲ್
ಗಂಡನ ಕರೆಗಳಿಂದ ಸುಮ್ಮನಾದರು ಸದ್ದು ಮಾಡತೊಡಗಿತ್ತು....
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (7)