___LINK_OPEN_ href="http://2.bp.blogspot.com/-PgvWjqC-_JI/TnRodaYrziI/AAAAAAAAAGk/x656DULFpy4/s1600/wat6.jpeg"___
ನಾನು ಅವನಂತಾಗಬೇಕು, ಇವನಂತಾಗಬೇಕು
ಅವನಂತೆ ಮಂತ್ರಿ ಇವನಂತೆ ರಾಜ ಮತ್ತೊಬ್ಬನಂತೆ ಇನ್ನೇನೊ
ಏನೆಲ್ಲ ಬೇಡಿದೆ, ಬಯಸಿದೆ
ಎಂದೂ ನಾನು ನಾನಾಗಬೇಕು ಎಂದು ಕೇಳಲೇ ಇಲ್ಲ!
ಮನೆ ಕಟ್ಟಿದೆ, ಪ್ರತಿಮೆ ನಿರ್ಮಿಸಿದೆ ಭೂತಾಯ
ಒಡಲ ಬಗೆದು ಕರಳನ್ನೆಲ್ಲ ಕಿತ್ತಿ ಎಸೆದೆ
ಕಾಡು ಕಡೆದು ನಾಡು ಕಟ್ಟಿದೆ
ನಿಸರ್ಗವಿದ್ದರೇನೆ ನಾಡು ಸ್ವರ್ಗ ಎಂದು ಅರಿಯಲೇ ಇಲ್ಲ!
ದಿನಗಟ್ಟಲೇ ಪೂಜೆ ಗೈದೆ, ಉಪವಾಸ ಮಾಡಿದೆ
ದೇವನೆ ನನಗೆ ಮುಕ್ತಿ ನೀಡು ಎನ್ನುತ
ಕೇತ್ರಗಳನ್ನೆಲ್ಲ ಸುತ್ತಿದೆ, ಆದರೆ ಸಂಕುಚಿತತೆಯ
ಬಂಧದಿಂದ ಮನವನೆಂದೂ ಮುಕ್ತಮಾಡಲೇ ಇಲ್ಲ!
ನಾನು ಹಿಂದು ನಾನು ಮಸಲ್ಮಾನ ನಾನು ಕ್ರಿಸ್ತ
ನನ್ನ ಧರ್ಮ ಮೇಲೆ, ನನ್ನ ಜಾತಿ ಮೇಲೆ
ಎಷ್ಟು ಕಚ್ಚಾಡಿದೆ, ಸಾಯಿಸಿದೆ, ಸಾಯುತ್ತಿರುವೆ
ನಾನೆಂಥ ಹುಚ್ಚ! ’ನಾ’ ಇದ್ದರೇನೆ ಇದೆಲ್ಲ ಎಂಬುದನ್ನೇ ಮರೆತೆ!
ಅವನ ಕಂಡರಾಗದು ಇವನ ಕಂಡರಾಗದು
ಅವನು ನಮ್ಮವನಲ್ಲ ಏನೆಲ್ಲ ಬೇಧ ಮಾಡಿದೆ
ಪ್ರತಿಕಣವೂ ಆತ್ಮಾರಾಮನ ನಿವಾಸ ಎಂಬ
ಸದ್ಗುರು ವಾಕ್ಯವನ್ನೇ ಮರೆತೆ!
ಏನೆಲ್ಲ ಮಾಡಿದೆ, ಏನೆಲ್ಲ ಆಡಿದೆ, ಏನೆಲ್ಲ ಆದೆ
ನಾನು ಮನುಷ್ಯನೆಂಬುದನ್ನೇ ಮರೆತೆ!!!
ಗುರುಶಿಷ್ಯ ( ರಾಘವೇಂದ್ರ ರಾಮಚಂದ್ರ ಗುಡಿ )
ಪ್ರತಿಕ್ರಿಯೆ (2)