ಇವತ್ತು ಮಾಮುಚ್ಚನ ಕೋಳಿ ಅಂಗಡಿಯಲ್ಲಿ ಒಂದಿಬ್ರು ಹೆಚ್ಚೇ ಇದ್ರು, ಆದ್ರಿಂದ ಮಾಮುಚ್ಚನ ಸ್ವರ ಸ್ವಲ್ಪ ಜೋರಾಗಿಯೇ ಕೇಳ್ತಿತ್ತು. ತನ್ನ ಮಾತು ಕೇಳ್ಲಿಕ್ಕೆ ಒಂದಿಬ್ರು ಇದ್ರೆ ಸಾಕು ಮಾಮುಚ್ಚ ತನ್ನ ಮಾತುಗಾರಿಕೆ ಪ್ರಾರಂಭಿಸುತ್ತಿದ್ರು. ಹಾಗಂತ ಅವ್ರ ಮಾತುಗಳನ್ನು ಕೇಳ್ಲಿಕ್ಕೆ ಯಾರೂ ಇಷ್ಟಪಡದ್ದೂ ಇಲ್ಲ. ಅವ್ರು ನರ್ಮದಿಂದ ಹೇಳುವ ಮಾತುಗಳು ಎಲ್ರನ್ನು ನಗಿಸ್ತಿತ್ತು ಮತ್ತು ಕೇಳಲು ಪ್ರೆರೇಪಿಸುತಿತ್ತು.

          ಕೇಳುವವರ ಸಂಖ್ಯೆಗನುಸಾರ ಮಾಮುಚ್ಚನ ಉತ್ಸಾಹ ಕೂಡ ಹೆಚ್ಚುತಿತ್ತು. ಮಾತಿನ ಮಧ್ಯೆ  ಮಾಮುಚ್ಚ  ತಂಙಳ್ರ ಬಗ್ಗೆ ಪ್ರಸ್ತಾಪಿಸುತ್ತಾರೆ "ಇವತ್ತು ಶುಕ್ರವಾರ ತಂಙಳ್ ಯಾಕೆ ಇನ್ನೂ ಬಂದಿಲ್ಲ?" ಎಂದು ತಂಙಳ್ ಬಾರದಿರುವುದನ್ನು ತಿಳಿಸುತ್ತಾರೆ.

                  ತಂಙಳ್ ಅಲ್ಲಿನವ್ರಿಗೆಲ್ಲ ಪರಿಚಿತರು. ಅವರು ತಂಙಳನ್ನು 'ಕಿಸೆ ತಂಙಳ್' ಎಂದು ಗುರುತಿಸ್ತಿದ್ರು. 'ಕಿಸೆ ತಂಙಳ್ ಬರ್ತಿದಾರೆ ' ಎಂದ್ರೆ ಎಲ್ರೂ ರಸ್ತೆಯಿಂದ ಸರಿದು ನಿಲ್ತಿದ್ರು. ಒಂದು ಕಡೆಗೆ ಹೊರಟವ್ರೂ, ಮುಂದೆ ತಂಙಳ್ ಇದ್ದಾರೆ ಎಂದ್ರೆ ಅಲ್ಲಿಂದ್ಲೇ ವಾಪಾಸ್ಸಾಗ್ತಿದ್ರು. ರಸ್ತೆಯಲ್ಲಿ ನಡೆದಾಡ್ತಿದ್ದವ್ರು, ಅಲ್ಲೇ ಪಕ್ಕದಲ್ಲಿರುವ ಅಂಗಡಿಗಳನ್ನೋ, ಅಡ್ದರಸ್ತೆಗಳನ್ನೂ ಆಶ್ರಯಿಸುತ್ತಿದ್ರು. ಪೊಲೀಸರು ಬರುವಾಗ ಕಳ್ಳರು ಅವಿತು ಕೊಳ್ಳುವ ಹಾಗೆ ಅವಿತುಕೊಳ್ಳುವುದೂ ಇತ್ತು. ಇದನೆಲ್ಲ ಮೊದ-ಮೊದಲು ನೋಡುವವ್ರು, ತಂಗಲ್ರಿಗೆ ಕೊಡುವ ಗೌರವ(!) ಅನ್ತ್ಕೊಳ್ತಿದ್ರು. ಆದ್ರೆ ಕಾರಣ ಬೇರೇ ಇತ್ತು; ತಂಗಲ್ರ ಮುಂದೆ ಯಾರಾದ್ರು ಹೋದ್ರೆ, ಅವರ ಕಿಸೆಯಲ್ಲಿರುವ ದುಡ್ದನೆಲ್ಲ ತಂಙಳ್ ದೋಚುತ್ತಿದ್ರು! ಮುಂದೆ ಬಂದವ್ರು ಶ್ರೀಮಂತನೆ ಆಗ್ಲಿ, ಬಡವನೇ ಆಗ್ಲಿ, ಅವನ ಕಿಸೆಯಲ್ಲಿರುವುದನ್ನು ತನ್ನ ಕಿಸೆಯಲ್ಲಿ ತುಂಬಿಸುತ್ತಿದ್ರು.

            "ಹೌದಲ್ವ ಅಸರ್ ಬಾಂಗ್ ಕೂಡ ಕೇಳಿತು.." ಅಸರ್ ಗೂ ಮೊದಲು ಬರ್ತಾರೆ ಎಂಬಂತೆ ಉಂಬುಚ್ಚ, ಮಾಮುಚ್ಚನ ಮಾತನ್ನು ಅನುಮೋದಿಸ್ತಾರೆ.

              "ತಂಗ ಬರದಿದ್ರೆ ಶುಕ್ರವಾರಕ್ಕೆ ಒಂದು ಉಸಾರ್ ಇರುವುದಿಲ್ಲ" ಕಾಕುಟ್ಟಿಕ್ಕ ಯಾನೆ ಕಾದರ್ ಕುಟ್ಟಿಕ್ಕನ ಮಾತು ಊರಿಗೆ ತಂಙಳ್ ಇನ್ನೂ ಬಂದಿಲ್ಲ ಎಂಬುದನ್ನು ಪೇಟೆಯನ್ನು ಗಮನಿಸಿದ್ರೆ ಗೊತ್ತಾಗುತ್ತೆ ಎಂಬುದನ್ನು ಸಾರುತಿತ್ತು.

          "ಏನು ಹುಷಾರ ಅಂದ್ರೆ ಹಣ ಕಡಿಯುವುದಾ?" ಯುವ ತಲೆಮಾರಿನ ಫಾಸಿಲ್ ಗೆ ತಂಗಲ್ ಬಗ್ಗೆ ಆಕ್ಷೇಪ ಇದ್ದ ಹಾಗಿತ್ತು.

       "ಅದು.... ಹಾಗಲ್ಲ ಫಾಸಿ, ಅವ್ರೊಮ್ಮೆ ಬಂದು ಹೋದ್ರೆನೇ ಸಮಾಧಾನ ಸಿಗುವುದು" ಕಾಕ್ಕುಟ್ಟಿಕ್ಕ ತನ್ನ ಮಾತನ್ನು ತಿದ್ದಿದ.

        ಕಾಕ್ಕುಟ್ಟಿಕ್ಕನ ಮಾತು ನಿಜವಿತ್ತು. ತಂಗಲ್ ಬಂದು ಹೋದಾಗಲೇ ಎಲ್ಲರೂ ಉಸ್ಸೆಂದು ಉಸಿರು ಬಿಡುತ್ತಿದ್ರು, ಅದುವರೆಗೆ ಅವ್ರಲ್ಲಿ ನೆಮ್ಮದಿ ಇರ್ತಿರ್ಲಿಲ್ಲ. ಎಲ್ರಿಗೂ ತಮ್ಮ ಮುಂದೆ ತಂಙಳ್ ಬಂದು ಬಿಟ್ರೆ ಎಂಬ ಭಯವಿರ್ತಿತ್ತು.

            "ಕಾಕ್ಕುಟ್ಟಿಕ್ಕ ಹೇಳಿದ್ದೂ ನಿಜ, ತಂಗಲ್ ಎಲ್ಲಾದರು ಎದ್ರಿಗೆ ಸಿಕ್ಕಿಬಿಟ್ರೆ ಅವ್ನು ದಿವಾಳಿನೇ..!" ಕಾಕ್ಕುಟ್ಟಿಕ್ಕನ ಮಾತಿಗೆ ಮಾಮುಚ್ಚ ಕೂಡ ಬೆಂಬಲ ಸೂಚಿಸಿದ್ರು.

        "ಅದ್ಕೆ ಹಣ ಕದ್ದರೂ  ಅಂತ ಕೇಸು ಕೊಡಬೇಕು" ಫಾಸಿಲ್ ಆಕ್ರೋಶಿತನಾಗಿದ್ದ.  ಎಲ್ರೂ ಮೌನವಾಗಿದ್ದು ನೋಡಿ, ಇಳಿ ವಯಸ್ಸಿನ ಮಾಯಿನಾಕ ತನ್ನ ನಡುಗುವ ಸ್ವರದಲ್ಲಿ"  ತಂಗಳನೆಲ್ಲ ಹಾಗೆ ಹೇಳ್ಬಾರ್ದು ಪಾಪ ಆಗ್ತದೆ." ಎಂದು ಉಪದೇಶಿಸ್ತಾರೆ.

         "ತಂಙಳ್ ಅಂತೇಳಿ ಎನ್ಬೇಕಾದರು ಮಾಡ್ಬಹುದು  ಅಂತಾನ?" ಉಂಬುಚ್ಚ ಫಾಸಿಲ್ ನ ಪಕ್ಷವಾಗಿದ್ರು.

       ನೋಡು ಉಂಬು , ತಂಗಲ್ ಅಂದ್ರೆ ಮಹಮ್ಮದ್ ಪೈಗಂಬರ ಕುಟುಂಬದವರು, ಅವ್ರು ಏನಾದ್ರು ಮಾಡಿದ್ರೆ ಅದು ಒಳ್ಳೆಯದಕ್ಕೆ ಆಗಿರ್ತದೆ" ಹೇಳುವುದು ಕಷ್ಟವಾದ್ರೂ, ಧಾರ್ಮಿಕ ವಿಚಾರವಾಗಿ ಹೇಳೋ ಪರಿಪಾಟ ಮಾಯಿನಾಕನದ್ದು.

     "ಹೌದೌದು, ಇದುವರೆಗೆ ತಂಗಳ ಮುಂದೆ ಬಿದ್ದವ್ರಲ್ಲಿ ಹೆಚ್ಚಿನವರು ಸಂಪಾದಿಸಿದ್ದು ಹರಾಂನ ದುಡ್ಡು!" ಮಾಮುಚ್ಚನ ಮಾತಿನಲ್ಲಿ ವ್ಯಂಗ್ಯವಿತ್ತು.

      "ಈ ಕಿಸೆ ತಂಙಳ್ ನಿಜವಾಗಿಯೂ ತಂಙಳಾ ?" ತುಂಬಾ ಹೊತ್ತು ತಲೆಯಲ್ಲಿದ್ದ ಯೋಚನೆಯನ್ನ್ನು ಕಾಕ್ಕುಟ್ಟಿಕ್ಕ ಮುಂದಿಟ್ಟರು.

   ಆ ಬಗ್ಗೆ ಊರಿನವರಿಗೆಲ್ಲ ಗೊಂದಲವಿತ್ತ್ತು. ಬಹಳ ವರ್ಷಗಳ ಹಿಂದೆ ಒಬ್ಬ ತಂಗಲ್ ದೂರದ ಕೇರಳದಿಂದ ಅಲ್ಲಿಗೆ ಆಗಾಗ ಬರ್ತಿದ್ರು. ಎಲ್ರೂ ಗೌರವದಿಂದ ಸತ್ಕರಿಸ್ತಿದ್ರು ಕೂಡ. ತನ್ನನ್ನು ಕರೆದವರ ಮನೆಯಲ್ಲಿ ಉಂಡು, ದುಃಆ ಮಾಡಿ, ರಾತ್ರಿಯಾನ್ನು ಮಸೀದಿಯಲ್ಲಿ ಕಳೆದು, ಕೇರಳಕ್ಕೆ ಹಿಂತಿರುಗುತಿದ್ರು. ಹೆಂಡ್ತಿ ಕುಟುಂಬ ಇಲ್ಲದ ಅವ್ರು, ವಯಸ್ಸಾದಾಗ ತನ್ನ ಸಹಾಯಕ್ಕೆಂದು ಒಬ್ಬ ಹುಡುಗನನ್ನು ಕರ್ಕೊಂಡು ಬರ್ತಿದ್ರು. ಅವನು ತನ್ನ ದತ್ತು ಪುತ್ರ ಎಂದೂ ಕೆಲವರಲ್ಲಿ ಹೇಳಿದ್ದರು. ಅವರ ಮರಣಾ ನಂತರವೂ ಆ ಹುಡುಗ ಊರಿಗೆ ಆಗಾಗ ಬರುತಿದ್ದ. ಮುಂದೆ ತಾನು ತಂಙಳ್ ಎಂದು ಹೇಳತೊಡಗಿದ. ಕ್ರಮೇಣ ಆ ಹುಡುಗ ತನ್ನ ಕೃತ್ಯದಿಂದಾಗಿ ಕಿಸೆ ತಂಙಳ್ ಎಂದು ಅಪಕೀರ್ತಿ ಹೊಂದಿದ. ಇದು ದೀರ್ಘಕಾಲದ ಘಟನೆಯಾದ್ದರಿಂದ  ಯಾರಲ್ಲೂ ಸ್ಪಷ್ಟ ಉತ್ತರವಿರಲಿಲ್ಲ.

       "ನಿಮ್ಗೊತ್ತ ಮಾಯಿನಾಕ?" ತನ್ನ ಕಡೆ ಬಂದಿದ್ದ ಪ್ರಶ್ನೆಯನ್ನು ಮಾಮುಚ್ಚ ಮಾಯಿನಾಕರ ಕಡೆ ತಿರುಗಿಸಿದ್ರು,

        "ಇಲ್ಲ , ನಾನು  ಈ ಊರಿಗೆ ಬರುವಾಗ್ಲೆ ಅವರನ್ನು ತಂಙಳ್ ಅಂತ ಕರೀತಿದ್ರು". ಮಾಯಿನಾಕರ ಮಾತಿಗೆ ಎಲ್ರೂ ಅವ್ರ ಮುಖವನ್ನೇ ದಿಟ್ಟಿಸುತಿದ್ರು.

        ಉಂಬುಚ್ಚ ಮಾತು ಪ್ರಾರಂಭಿಸಿ "ಇತ್ತೀಚೆಗೆ ಅವರದ್ದು ವಿಪರೀತ ಆಗ್ತಾ ಉಂಟು" ಎಂದರು.

          "ಮೊನ್ನೆ ಆ ಹುಡುಗನ ಐವತ್ತುರ್ಪಾಯಿ ಕಸಿದರು ಅಂತ ಬೀಪಾತುಮ್ಮ ಶಾಪ ಹಾಕಿದ್ರು..." ಮಾಮುಚ್ಚನ ಮಾತಿಗೆ ನಗಬೇಕೋ ಗಂಭೀರವಾಗಬೇಕೋ ಗೊತ್ತಾಗ್ತಿರಲಿಲ್ಲ.

           "ಎಲ್ರ ಶಾಪದಿಂದ್ಲೇ ಅವ್ರಿಗೆ ಏನಾದ್ರು ಆಗ್ತದೆ" ಕಾಕ್ಕುಟ್ಟಿಕ್ಕನ ಮಾತಿಗೆ ಎಲ್ರೂ, ಹೌದಿರಬಹುದೆಂದು ತಲೆಯಾಡಿಸಿದರು.

          ಅಷ್ಟರಲ್ಲಿ ಯಾರೋ "ಕಿಸೆ ತಂಗ ಬರ್ತಿದ್ದಾರೆ ಎನ್ನುವುದನ್ನು ಕೇಳಿ ಎಲ್ರೂ ರಸ್ತೆಯ ಕಡೆ ಇಣುಕಿದ್ರು.

              ಎಲ್ರ ಕಣ್ಣುಗಳು ಮೌನವಾಗಿ ತಂಙಳನ್ನೇ ಗಮನಿಸ್ತಿತ್ತು. ತಂಗಲ್ ಮಾಮುಚ್ಚನ ಕೋಳಿ ಅಂಗಡಿ ಬಳಿ ತಲುಪಿದ್ದಾರೆ ಅನ್ನುವಷ್ಟರಲ್ಲಿ, ರಿಕ್ಷಾದಲ್ಲಿ ಬಂದ ಯಾರೋ ಅವ್ರ ಎದುರಿಗೆ ಇಳಿದರು. ಎಲ್ರೂ ಒಮ್ಮೆ ಮುಖ-ಮುಖ ನೋಡಿದರು ಅದು ಅಂಚ ಉರುಫ್ ಹಂಝ ಆಗಿತ್ತು. ಅಂಚ ಗಾಳದಲ್ಲಿದ್ದ ತುತ್ತು ತಿಂದ ಮೀನಿನಂತಾದ. ಒಮ್ಮೆ ಬಲಕ್ಕೆ ಒಮ್ಮೆ ಎಡಕ್ಕೆ ತಿರುಗಿ, ನೇರವಾಗಿ ತಂಙಳ್ ಮುಂದೆ ಸ್ತಬ್ಧವಾಗಿಬಿಟ್ಟ. ಮುಖವನ್ನೊಮ್ಮೆ ನೋಡಿದ ತಂಙಳ್, ಕಿಸೆ ಖಾಲಿಯಾಗಿರುವುದನ್ನು ಕಂಡು ಕೈಯ ಕಡೆ ನೋಡುತ್ತಾ "ಏನದು?" ಎಂದರು. ನಡುಗುವ ಕೈಗಳು ಅದನ್ನು ಅಡಗಿಸುವ ಪ್ರಯತ್ನ ಮಾಡಿದರೂ, ತಂಙಳ್ ರ ಕೈ ಆ ಕಡೆ ಬರುವುದನ್ನು ಕಂಡು ಬಲ ಬಿಡಬೇಕಾಯಿತು. ಚೆಂದದ ಆ ಕಟ್ಟನ್ನು ಕೈಗೆತ್ತಿ ಬಿಚ್ಚ ತೊಡಗಿದರು. ನೋಡುತ್ತಿದ್ದವರೆಲ್ಲ ಅದನ್ನು ಕಂಡು ಎದೆಗೆ ಕೈ ಇಟ್ಟರು. ಅದು ನೂರು ರೂಪಾಯಿಗಳ ನೋಟಿನ ಕಟ್ಟಾಗಿತ್ತು.

                  ಕಟ್ಟನ್ನು ಬಿಚ್ಚುತ್ತಿದ್ದಂತೆ ಸಣ್ಣಬೆರಳನ್ನು ನೇವಿಸುತ್ತಾ "ನನ್ನ ಮಗಳ ಮದುವೆಗೆಂತ.." ಅಂಚ ಹೇಳಿದ. ತಂಙಳ್ ಅರ್ಧದಷ್ಟನ್ನು ತೆಗೆದು ತನ್ನ ಸೊಂಟಕ್ಕೂ, ಉಳಿದದ್ದನ್ನು ಅಂಚನ ಕಿಸೆಗೂ ಇಟ್ಟು 'ಎಲ್ಲ ಸರಿಯಾಗುತ್ತದೆ' ಎಂದು ಹರಸಿದರು. ಅಂಚನ ಮುಖ ಇನ್ನಷ್ಟು ಬಾಡಿತು. ಬಾಯಿ ತೆರೆಯಲು ದೈರ್ಯ ಬಾರದೇ ಹೇಳುವುದನ್ನು ಮನಸಿನಲ್ಲೇ ಗೊಣಗುತ್ತಿದ್ದ. ಅಂಚನ ಮುಖ ಗಮನಿಸಿದ ತಂಙಳ್ "ನಾನು ದುಃಆ ಮಾಡ್ತೇನೆ ಎಲ್ಲಾ ಸರಿಯಾಗೇ ನಡೀತದೆ" ಎನ್ನುತ್ತಾ, ಕೈ ಎತ್ತಿ "ರಬ್ಬೆ ಸಯ್ಯದ್ ಕುಟುಂಬದ ಹೆಸರಲ್ಲಿ  ಬೇಡುತ್ತೇನೆ. ಈ ಬಡ ಗುಲಾಮನ ಎಲ್ಲಾ ಮುರಾದುಗಳನ್ನೂ ಹಾಸಿಲ್ ಮಾಡು"(ಏನು ಬಯಸುತ್ತಿದ್ದಾನೋ ಅದನ್ನು ಈಡೇರಿಸು) ಎಂದು ಪ್ರಾರ್ಥಿಸಿ, ಮರು ಮಾತನಾಡದೆ ರಸ್ತೆ ದಾಟಲು ಮುಂದೆ ಬಂದ್ರು. ಅರೆ ಕ್ಷಣದಲ್ಲಿ ತಂಙಳ್ ಕಾರೊಂದಕ್ಕೆ ಡಿಕ್ಕಿಯಾಗಿ ರಸ್ತೆ ಬದಿಗೆ ಎಸೆಯಲ್ಪಟ್ರು. ಜನರೆಲ್ಲಾ ಸುತ್ತುವರೆಯುವಷ್ಟರಲ್ಲಿ ನೆತ್ತರ ಸ್ನಾನ ಮಾಡಿದಂತಾಗಿತ್ತು. ಅಂಚ ನಿಂತಲ್ಲೇ ಯೋಚನೆಯಲ್ಲಿದ್ದ. ಮಾಮುಚ್ಚ ತಂಙಳ್ ರಿಂದ ಬಿಸಾಡಲ್ಪಟ್ಟ ದುಡ್ಡನ್ನು ಕೈಗಿತ್ತಾಗ ಎಚ್ಚರಗೊಂಡು ಜನರ ಗುಂಪಿನ ಕಡೆ ನೋಡಿ ಒಳಗೊಳಗೇ ರೋಧಿಸಿದ "ತಾನು ತಂಙಳ್ ಒಬ್ಬರ ಮರಣವನ್ನು ಬಯಸಬಾರದಿತ್ತು". 

ಅನ್ಯಭಾಷಾ ಪದಗಳು :

ಅಸರ್ಬಾಂಗ್-ಸಂಜೆ ಮಸೀದಿಯಿಂದ ಮೊಳಗುವ ಕರೆ

ಹರಾಂ-ನಿಷಿದ್ದ

ದುಃಆ-ಪ್ರಾರ್ಥನೆ

ರಬ್ಬೆ-ದೇವನೆ

ಸಯ್ಯದ್ ಕುಟುಂಬ-ಪ್ರವಾದಿಯವರ ಕುಟುಂಬ.