ನೆನ್ನೆ ಮೊನ್ನೆ Death Valley ಯನ್ನು ನೋಡಿ ಬಂದ ಮೇಲೆ, ಅಲ್ಲಿ ನಕ್ಷತ್ರಗಳು ಚೆಲ್ಲಿದ ರಾತ್ರಿಯಾಕಾಶ, ಬಣ್ಣ ಬಣ್ಣದ ಬೆಟ್ಟ ಸಾಲಿನಲ್ಲಿ ಸೂರ್ಯೋದಯ ಸೂರ್ಯಾಸ್ತಗಳ ಚೆಲುವನ್ನು ಕಂಡಾಗ ಹೊಳೆದ ಕೆಲವು ಭಾವಗಳು – ಕುಸುಮ ಷಟ್ಪದಿಯಲ್ಲಿ ಹೊಸೆದ ಎರಡು ಪದ್ಯಗಳು:
ಹಲ್ಲು ಕಡಿಸುವ ಚಳಿಯ
ಸೊಲ್ಲನಡಗಿಪ ಕುಳಿರ
ಕಲ್ಲು ತುಂಬಿದ ಹಾದಿ ಮರೆಸುವಂತೆ
ಚೆಲ್ಲಿ ಹರಿದಿವೆ ಬಾನ
-ಲೆಲ್ಲೆಲ್ಲು ತಾರೆಗಳು
ಮಲ್ಲೆ ಬನದಲಿ ಕೋಟಿ ಹೂಗಳಂತೆ!
ಬೇಸರವ ಕಳೆಯಲಿಕೆ
ನೇಸರುದಯದ ಚಂದ
ಹಸನಾದ ನೋಟಗಳ ಸಾಲೆ ಇರಲು
ಹಸಿರು ಸಿಗದಿರಲೇನು?
ಬಿಸಿಲ ಧಗೆಯಿರಲೇನು?
ಹೆಸರು ಸಾವಿನಕಣಿವೆ ಸರಿಯಲ್ಲವು!
-ಹಂಸಾನಂದಿ
ಕೊ: ಗೆಳೆಯ ___LINK_OPEN_target="_blank" href="http://nannabaraha.blogspot.com/"___ಮಂಜುನಾಥ ಕೊಳ್ಳೇಗಾಲ ಅವರು ನೀಡಿದ ಸಲಹೆಗಳಿಗೆ ಧನ್ಯವಾದಗಳು!
ಕೊ.ಕೊ. ಯುಎಸ್‍ಎ ಯಲ್ಲಿ ಅತಿ ಬಿಸಿಲು ಝಳವಿರುವ, ಅತಿ ತಗ್ಗಾದ (ಸಮುದ್ರ ಮಟ್ಟಕ್ಕಿಂತ ೨೮೨ ಅಡಿ ಕೆಳಗೆ) ಮತ್ತೆ ಅತಿ ಕಡಿಮೆ ಮಳೆ ಬೀಳುವ ಪ್ರದೇಶ ಕ್ಯಾಲಿಫೋರ್ನಿಯಾದ ಡೆತ್ ವ್ಯಾಲಿ. ಚಿತ್ರ ಕೃಪೆ - ನನ್ನ ಸ್ಯಾಮ್ಸಂಗ್ ಗ್ಯಾಲಕ್ಸಿ ಫೋನ್
ಚಿತ್ರಗಳ ವಿವರ (ಮೇಲಿನಿಂದ ಕೆಳಕ್ಕೆ) - ದೊಡ್ಡದಾಗಿ ನೋಡಲು ಚಿತ್ರಗಳ ಮೇಲೆ ಚಿಟಕಿಸಿ:
೧) ಡಾಂಟೆಯ ನೋಟ - ಸುಮಾರು ಆರು ಸಾವಿರ ಅಡಿಯೆತ್ತರದಿಂದ ಕಾಣುವ ಡೆತ್ ವ್ಯಾಲಿಯ ನೋಟ
೨) ಸ್ಟೋವ್ ಪೈಪ್ ವೆಲ್ಸ್ ಹಳ್ಳಿ
೩) ಗೋಲ್ಡನ್ ಕ್ಯಾನ್ಯನ್
೪) ಬ್ಯಾಡ್ ವಾಟರ್ ಬೇಸಿನ್ - ಡೆತ್ ವ್ಯಾಲಿಯ ಅತಿ ತಗ್ಗು ಪ್ರದೇಶ. ಚಿತ್ರದ ಮೇಲೆ ಚಿಟಕಿಸಿದಾಗ, ಕಲ್ಲು ಬಂಡೆಯ ಗೋಡೆಯ ಮೇಲೆ ಬಿಳಿ ಪಟ್ಟಿಯ ಮೇಲೆ ಸಮುದ್ರ ಮಟ್ಟವನ್ನು ಗುರುತಿಸಿ ತೋರಿಸಿದೆ
೫)ಬ್ಯಾಡ್ ವಾಟರ್ ಬೇಸಿನ್ ನಲ್ಲಿ ಉಪ್ಪು ಹರಳುಗಟ್ಟಿದ ನೆಲ
೬) "ಚಿತ್ರಕಾರನ ಬಣ್ಣದ ತಟ್ಟೆ" - Artist's Palette ಎಂಬ ಹೆಸರುಳ್ಳ ಜಾಗವೊಂದು
ಕೊ.ಕೊ.ಕೊ:___LINK_OPEN_target="_blank" href="http://en.wikipedia.org/wiki/Death_Valley"___ Death Valley, California ಬಗ್ಗೆ ಹೆಚ್ಚಿನ ಮಾಹಿತಿ, ವಿಕಿಪೀಡಿಯಾದಲ್ಲಿ
ಪ್ರತಿಕ್ರಿಯೆ (2)