ಭಾರತೀಯ ಪುರಾಣಗಳಲ್ಲಿ, ದೇವಿ ದೇವತೆಗಳ ಕಲ್ಪನೆಗಳಲ್ಲಿ ತನ್ನದೇ ಆದ ವಿಶೇಷ ಅರ್ಥ ಪಡೆದಿರುವ ದೈವಿಕ ವಿಷಯಗಳನ್ನು ಕಾಣಬಹುದಾಗಿದೆ. ವಿಕಾಸವಾದವನ್ನು ನಿರೂಪಿಸುವ ದಶಾವತಾರ ಮತ್ತೂ ಸ್ಥಿತಪ್ರಜ್ಞ ಕೃಷ್ಣ ಇದಕ್ಕೆ ಮಹತ್ತರವಾದ ಉದಾಹರಣೆಯಾದರೆ ಇನ್ನೊಂದು ಸಂಕೀರ್ಣ ಉದಾಹರಣೆ ಶಿವ ಮತ್ತು ಶೈವ ಕಲ್ಪನೆಗಳದ್ದು. ಇಂತಹ ಪರಿಕಲ್ಪನೆಗಳು ಇನ್ನೂ ಮುಂದಿನ ಹಂತಕ್ಕೆ ಹೋಗಿ ಅರ್ಧನಾರೀಶ್ವರವೆಂಬ ಅದಮ್ಯ ಕಲ್ಪನೆ ಜನ್ಮ ತಾಳುತ್ತದೆ.

ಪರಿಕಲ್ಪನೆ - ಪುರಾಣ

ಬದುಕಿನ ಹರಿವು ಎರಡು ಮೂಲಭೂತ ತತ್ವಗಳಿಂದ ಮುನ್ನಡೆಯುತ್ತಿದೆ. ಪುರುಷ ತತ್ವ ಮತ್ತು ಸ್ತ್ರೀ ತತ್ವ(ಸ್ತ್ರೈಣತ್ವ). ಪುರುಷನನ್ನು ಶಿವನನ್ನಾಗಿಯೂ ಸ್ತ್ರೀಯನ್ನು ಪಾರ್ವತಿಯನ್ನಾಗಿಯೂ ಕಾಣಲಾಗುತ್ತದೆ. ಪಾರ್ವತಿ ಎನ್ನುವುದಕ್ಕಿಂತ ಶಕ್ತಿ ಎನ್ನುವುದು ಹೆಚ್ಚು ಅರ್ಥಪೂರ್ಣ. ಆದರೆ ಅರ್ಧನಾರೀಶ್ವರದಲ್ಲಿ ಈ ಎರಡು ಪರಿಕಲ್ಪನೆಗಳು ಒಂದೇ. ಇದರರ್ಥ ಪುರುಷ ಬೇರೆಯಲ್ಲ ಪ್ರಕೃತಿ/ಶಕ್ತಿ ಬೇರೆಯಲ್ಲ. ಒಂದು ಇರುವುದರಿಂದಲೇ ಇನ್ನೊಂದು ಇರುವುದು. ಪುರುಷ ಪ್ರಕೃತಿ ಒಂದೇ ಆದರೆ ಅದರಲ್ಲಿ ಭಿನ್ನತೆಯಿಲ್ಲ. ಆದ್ದರಿಂದ ಅದ್ವೈತ ಸಿದ್ಧಾಂತವನ್ನೂ ಅರ್ಧನಾರಿಶ್ವರ ರೂಪಕ್ಕೆ ಅನ್ವಯಿಸಬಹುದು. ಎಲ್ಲಿ ಪುರುಷನಿರುತ್ತಾನೋ ಅವನೊಂದಿಗೆ ಶಕ್ತಿಯೂ ಇರುತ್ತಾಳೆ.

  ಪಾರ್ವತಿಯ ಮನವಿಯ ಮೇರೆಗೆ ತನ್ನ ದೇಹದ ಅರ್ಧ ಭಾಗದವರೆಗೆ ಆವರಿಸಲು ಬಿಟ್ಟು ಅರ್ಧನಾರೀಶ್ವರ ರೂಪ ತಾಳಿದ ಶಿವ ಎಂದು ಒಂದು ಕಥೆ ಹೇಳುತ್ತದೆ. ಹಾಗೆಯೇ ಸ್ತ್ರೀ ಅಸ್ತಿತ್ವದ/ಪೂಜೆಯ ಕುರಿತು ಭೃಂಗಿ ಋಷಿಯ ವಿಚಾರವನ್ನು ಬದಲಾಯಿಸಲು ಶಿವ ಪಾರ್ವತಿ ಒಂದಾಗಿ ದರ್ಶನ ನೀಡಿದರು ಎಂದೂ ಹೇಳಲಾಗುತ್ತದೆ. ತನ್ನ ದೇಹದಲ್ಲಿ ಇನ್ನೊಂದು ಸ್ವರೂಪಕ್ಕೆ ಸ್ಥಳವನ್ನೀಯುವುದು ಸಮಾನತೆಯ ದೃಷ್ಟಿಯಿಂದಲೂ ಸಾಂಸಾರಿಕ ದೃಷ್ಟಿಯಿಂದಲೂ ಮಹತ್ತರ ಅಂಶ.

ಜನಪದ

ಜನಪದದಲ್ಲಿಯೂ ಇಂತಹ ಕಲ್ಪನೆಗಳನ್ನು ಕಾಣಬಹುದಾಗಿದೆ. ಅದರಲ್ಲೂ ಜುಮಾದಿ ಎಂಬ ಭೂತದ ತಲೆ ಪುರುಷನದ್ದಾಗಿದ್ದು, ದೇಹ ಸ್ತ್ರೀಯದ್ದಾಗಿದೆ. ಜುಮಾದಿಯನ್ನೇ ಧೂಮಾವತಿ ಎಂದೂ ಕೆಲವೆಡೆ ಆರಾಧಿಸುತ್ತಾರೆ. ಧೂಮಾಸುರನ ಹಾವಳಿ ಹೆಚ್ಚಾದಾಗ ಪಾರ್ವತಿ ಮತ್ತೂ ಶಿವ ಭೂಮಿಗೆ ಬರುತ್ತಾರೆ. ಆದರೆ ಪಾರ್ವತಿಯ ಹಸಿವು ನೋಡಲಾರದೆ ಶಿವ ತನ್ನನ್ನೇ ತಿನ್ನಲು ಹೇಳುತ್ತಾನೆ. ಪಾರ್ವತಿಗೆ ಕೇವಲ ಕುತ್ತಿಗೆಯವರೆಗೆ ಮಾತ್ರ ತಿನ್ನಲಾಗುತ್ತದೆ. ಈ ರೂಪವನ್ನು ಜುಮಾದಿ ಎಂದು ಕರೆದು ತುಳುನಾಡಲ್ಲಿ ದೈವವಾಗಿ ಆರಾಧಿಸಲಾಗುತ್ತದೆ. ಇದೇ ಮರ್ಲು ಜುಮಾದಿ, ಕಾಂತಾರ ಜುಮಾದಿಯಾಗಿಯೂ ಪೂಜಿಸಲ್ಪಡುತ್ತದೆ.

ಮಾನಸಿಕ ನೆಲೆಯಲ್ಲಿ

'ಪ್ರತಿಯೊಂದು ಮನಸ್ಸೂ ಅರ್ಧನಾರೀಶ್ವರ' ಎಂಬ ಮಾತನ್ನು ನೇಮಿಚಂದ್ರರು ತಮ್ಮ ಒಂದು ಲೇಖನದಲ್ಲಿ ಹೇಳುತ್ತಾರೆ. ಪ್ರತಿಯೊಬ್ಬ ಪುರುಷನೂ, ಮಹಿಳೆಯೂ ಅರ್ಧನಾರೀಶ್ವರ! ಪ್ರತಿಯೊಂದು ಮನಸ್ಸೂ ತನ್ನಷ್ಟಕ್ಕೆ ಒಂದು ಸ್ತ್ರೀ ತತ್ವವನ್ನು ಮತ್ತು ಪುರುಷ ತತ್ವವನ್ನು ಒಳಗೊಂಡಿರುತ್ತದೆ. ಮೆದುಳನ್ನು ಪುರುಷ ತತ್ವವೆಂದೂ, ಹೃದಯವನ್ನು ಸ್ತ್ರೀ ತತ್ವವೆಂದೂ ಗುರುತಿಸುತ್ತಾರೆ. ಭಾವನಾತ್ಮಕ ವಿಷಯಗಳನ್ನು ಸ್ತ್ರೀ ತತ್ವವೆನ್ನಲಾಗುತ್ತದೆ. ಇವು ಹೃದಯಕ್ಕೆ ಸಂಬಂಧಿಸಿರುವುದರಿಂದ ಮತ್ತು ಹೃದಯ ದೇಹದ ಎಡಬದಿಯಲ್ಲಿ ಇರುವುದರಿಂದ ಅರ್ಧನಾರೀಶ್ವರನ ಬಲ ಭಾಗ ಪುರುಷವಾಗಿದ್ದು ಎಡ ಭಾಗ ಸ್ತ್ರೀ ಆಗಿದೆ. ಭಾವನಾತ್ಮಕವಾದ ವರ್ತನೆಗಳು ಕೆಲವು ಪುರುಷರಲ್ಲಿ ಹೆಚ್ಚು ಕಾಣತೊಡಗುತ್ತವೆ. ಕೆಲವು ಹುಡುಗಿಯರು ಗಂಡುಬೀರಿಯಾಗಿರುತ್ತಾರೆ. ಇವರ ಸ್ವಭಾವದಲ್ಲಿ ಪುರುಷ ತತ್ವದ ಅಂಶ ಮತ್ತೂ ಸ್ತ್ರೀ ತತ್ವದ ಅಂಶಗಳ ಹೆಚ್ಚುಕಡಿಮೆಯಿರುವಿಕೆ ಈ ಸ್ವಭಾವಕ್ಕೆ ಕಾರಣ ಎಂದು ಹೇಳಬಹುದು. 
 

ಶಿವನ ಒಂದು ಅವತಾರವೆಂದು ಪರಿಗಣಿಸಲಾಗುವ ಅರ್ಧನಾರೀಶ್ವರ ಕೇವಲ ಒಂದು ಸಾಧಾರಣ ರೂಪವಾಗದೇ ತನ್ನೊಳಗೆ ಸುಂದರವಾದ ಕಲ್ಪನೆಯನ್ನು ಒಳಗೊಂಡಿದೆ. ಹೆಚ್ಚಿನ ಭಾರತೀಯ ದೈವಿಕ ಕಲ್ಪನೆಗಳೂ ಅಷ್ಟೇ. ಆದರೆ ವಿಷಯದ ತಳಕ್ಕೆ ಇಳಿಯದೇ ಮೇಲ್ಪದರದಲ್ಲಿ ದೇವದೇವಿಯರ ವಿಷಯದಲ್ಲಿ ಹೊಡೆದಾಡುತ್ತಾ ಈ ಹೊಡೆದಾಡುವ ಸಂಸ್ಕೃತಿ ಇನ್ನೂ ಮುಂದುವರಿದಿರುವುದು ವಿಷಾದನೀಯ. 

ಚಿತ್ರ: http://ardhanarishvara.net/hindu-gods-Ardhanarishvara-Shiva-Shakti-andybear.jpg

ಮೊದಲ ಭಾಗ:  http://sampada.net/%E0%B2%B5%E0%B3%88%E0%B2%B0%E0%B3%81%E0%B2%A7%E0%B3%8D%E0%B2%AF-%E0%B2%B8%E0%B3%8D%E0%B2%B5%E0%B2%AD%E0%B2%BE%E0%B2%B5-%E0%B2%85%E0%B2%A8%E0%B3%8D%E0%B2%AF%E0%B3%8B%E0%B2%A8%E0%B3%8D%E0%B2%AF-%E0%B2%B8%E0%B2%82%E0%B2%B8%E0%B2%BE%E0%B2%B0