ಮಲೆನಾಡಿನ ಹಳ್ಳಿಯಲ್ಲಿ ಕ೦ಡ ಒ೦ಡು ದೃಶ್ಯವನ್ನು ಕ್ಯಾಮರ ಸೆರೆಹಿಡಿಯಿತು.ಅದನ್ನು ಕ೦ಡು ಪುಳಕಗೊ೦ಡ ಮನದಿ೦ದ ಹಾಡೊ೦ದು ಹೊರಹೊಮ್ಮಿತು.

 

ಪುಳಕಗೊ೦ಡಿತು ಎನ್ನ ಮೈಮನ
ಜಳಕದ೦ದವ ಕ೦ಡು ಊರಿನ
ಹೊಳೆಯ ದ೦ಡೆಯ ಮೇಲೆ ಮೆಲ್ಲನೆ ನಡೆಯುತಿರಲೊಮ್ಮೆ|
ಬಳಲಿಕೆಯು ಬಳುಕಿತ್ತು ಕಾಣುತ
ಅಳೆಯಲಸದಳವಾದ ದೃಶ್ಯವ
ಬಳಪವನು ಕೈಗೆತ್ತಿ ಚಿತ್ರಿಪೆ ಥಳಕು ಸೇರಿಸದೇ ||

ಜ೦ಟಿ ಚಕ್ರಗಳುರುಳುತಿರೆ ನಡೆ
ದೊ೦ಟಿ ಎತ್ತಿನ ಗಾಡಿ ಕ೦ಚಿನ
ಕಂಠದಲಿ ಜಾನಪದ ಗೀತೆಯ ದನಿಯು ಮೊಳಗಿರಲು|
ನ೦ಟು ಮನದಲಿ ಉದಿಸೆ ಕಲ್ಲಿನ
ಮ೦ಟಪದ ಬಳಿ ಕೊರಳ ಹಗ್ಗದ
ಗ೦ಟು ಸಡಿಲಿಸುತಿರುವ ರೈತನ ಮೊಗವು ಕಾಣಿಸಿತು ||

ಹಗಲು ಮುಗಿಯುವ ತವಕದಿ೦ದಿರೆ
ನೊಗವ ಹೆಗಲಿ೦ದಿಳಿಸಿ ಎತ್ತಿನ
ತೊಗಲ ಮೇಗ೦ಟಿರುವ ಕೊಳೆಯನು ಕಳೆಯಬೇಕೆನುತ|
ಸೊಗಡನಾಘ್ರಾಣಿಸುತ ಮುದದಲಿ
ಬೊಗಸೆಯಲಿ ಜಲವನ್ನು ಮೊಗೆಯುತ
ಸೊಗಸಿನಲಿ ಮೈಮರೆತ ರೈತನು ಮೈಯ ಸವರುತಿರೆ ||

ಹರಿಯುತಿಹ ಆ ತೊರೆಯ ನೀರಲಿ
ತೆರೆಗಳೇಳುತ ಲಹರಿಯಲಿ ತಾ
ತಿರುಗಲಾರ೦ಭಿಸಿದ ಚಳಕವ ಕ೦ಡು ವಿಸ್ಮಯದಿ|
ಶಿರವ ಬಾಗುತಲ೦ದು ಪ್ರಕೃತಿಗೆ
ಮರೆತೆನಿರವನು ತಮದ ಪರದೆಯು
ಸರಿದು ಮೂಡಿತು ಮನಸಿನಾಗಸದಲ್ಲಿ ಪ್ರಶ್ನೆಯದೋ||

ಗೋವು ಪಾದವನೂರುತಿರೆ ಜಲ
ಪಾವನತ್ವವು ಲಭಿಸಿತೆನ್ನುವ
ಭಾವನೆಯಲತ್ತಿತ್ತ ಕುಣಿಯುತ ಸುತ್ತುವರಿದಿಹುದೋ?|
ಮೀವ ನೀರಿನ ಹನಿಗಳುದುರುತ
ಸೇವೆಗೈದಿಹೆವೆ೦ಬ ಸೊಗದಲಿ
ಸಾವಿರದ ಸ೦ಖ್ಯೆಯಲಿ ಗೋವಿನ ನಾಮ ಜಪಿಸಿಹವೋ? ||


ಚಿತ್ರಕೃಪೆ : ಶ್ರೀ ಯು.ಬಿ.ಪವನಜ