-೧-
ಕುಚೇಲನ ನಡಿಗೆಯಲ್ಲಿ ಈ ಹಿಂದೆಂದೂ ಕಾಣದಂತಹ ವೇಗವಿತ್ತು. ಶೆಣೈ ಮಾಸ್ತರ ಅಂಗಡಿಯಲ್ಲಿ ಸಾಲದ ಎಕೌಂಟಿನಲ್ಲಿದ್ದ ಬ್ಯಾಲೆನ್ಸಿಗೆ ಭಡ್ತಿ ಕೊಡಿಸಿದ್ದರಿಂದ ಕೈಗೆ ಬಂದಿದ್ದ ಬೀಡಿ ಅವನ ಬಾಯಿಯಲ್ಲಿ ಕುಳಿತು ನಿರಾತಂಕವಾಗಿ ಹೊಗೆ ಬಿಡುತ್ತಿತ್ತು. ಬೀಡಿಯ ಹೊಗೆ ಕುಚೇಲನ ಮೆದುಳೊಳಗೆ ವ್ಯಾಪಕವಾಗಿ ಹಬ್ಬಿ ಅವನ ನರನಾಡಿಗಳಲ್ಲೆಲ್ಲಾ ಹೊಸ ಚೈತನ್ಯವನ್ನು ತುಂಬಿದ್ದರಿಂದ ಮನಸ್ಸೆಲ್ಲಾ ಹಗುರಾಗಿ ವ್ಯಗ್ರಗೊಂಡಿದ್ದ ಮುಖದಲ್ಲಿ ಕಂಬನಿ ಜಿನುಗುಟ್ಟಿತು. ಕ್ಷಣ ಮಾತ್ರ, ಕಿವಿ ನಿಮಿರಿತು. ಏನೋ ಸದ್ದು! ಮತ್ತದೇ ಹೆಜ್ಜೆಗಳ ಶಬ್ದ. ಕೇಳಿಸಿತೋ ಅಥವಾ ಭ್ರಮಿಸಿದನೋ. ಯಾರಿರಬಹುದು ಮಟ ಮಟ ಮಧ್ಯಾಹ್ನದ ಈ ಹೊತ್ತಿನಲ್ಲಿ? ತಿರುಗಿ ನೋಡಿದರೆ ಯಾರೂ ಇಲ್ಲ. ಹೆಜ್ಜೆ ಮುಂದಿಟ್ಟರೆ ಪುನಃ ಬರಬರ ಸದ್ದು. ಪುನಃ ಹಿಂದೆ ನೋಡಿದರೆ ಯಾರೂ ಇಲ್ಲ. ಕುಚೇಲನ ಎದೆಯಲ್ಲಿನ ಹೃದಯ ಢವಗುಡತೊಡಗಿತ್ತು. ಒಮ್ಮೆ ಪದ್ಮಳ ನೆನಪಾದರೂ ಅವಳು... ಹೇಗೆ... ಇರಲಿಕ್ಕಿಲ್ಲ ಎಂದೆನಿಸಿತು.

ಮನೆ ಮುಟ್ಟುವವರೆಗೂ ಕುಚೇಲನಿಗೆ ತನ್ನೆರಡು ಕಿವಿಗಳು ಹಿಂಬಾಲಿಸುತ್ತಿದ್ದ ಹೆಜ್ಜೆಗಳ ವರದಿ ಕೊಡುತ್ತಿದ್ದುದರಿಂದ ಅವನ ಭಯ ಹೆಚ್ಚಾಯಿತು. ಭಯಪೀಡಿತನಾಗಿ ಮನೆಯ ಮೂಲೆಯಲ್ಲಿ ವಾಸಹೂಡಿ ಅಲ್ಲೇ ಮುದುಡಿ ಮಲಗಿದನು.
’ಏ ಕುಚೇಲ, ಬೇಟೆಗೆ ಹೋಗ್ವಾ.. ಬರ್ತೀಯಾ?’ ಜಗದೀಶನ ಧ್ವನಿ ಮನೆಯ ಹೊರಗಿನಿಂದ ಕೇಳಿದರೂ ಕೇಳದಂತೆ ಅನ್ಯ ಮನಸ್ಕನಾಗಿ ಮುಖ ಮುಚ್ಚಿ ಮಲಗಿಕೊಂಡ. ಜಗದೀಶ ಬಿಡುವವನೇ? ಬಾಗಿಲು ತೆಗೆದುಕೊಂಡು ’ಏನೋ ಏನಾಯ್ತೋ.. ಯಾಕೆ ಗರ ಹಿಡ್ದೋರ ತರ ಇದ್ದಿಯಾ?’ ಎಂದ. ಕುಚೇಲನಿಗೆ ಒಮ್ಮೆ ಎರಡು ಮೂರು ದಿನಗಳಿಂದ ಕೇಳುತ್ತಿದ್ದ ಗೆಜ್ಜೆಗಳ ಶಬ್ದದ ಬಗ್ಗೆ ಹೇಳಬೇಕೆನಿಸಿದರೂ ಬೇಡವೆಂದೆನಿಸಿ ’ಏನಿಲ್ಲ.. ಹೀಗೇ..’ ಎಂದು ತಲೆ ತಗ್ಗಿಸಿದ. ’ಬರ್ತೀಯಾ, ಕೊರಗ್ರೆಲ್ಲಾ ಹೋಗಿ ಆಯ್ತು. ನಾಗಪ್ಪನೂ ಅವ್ರ ಜೊತೆ ಹೋದ. ನಾವು ತೊಳಲ್ಕೆಯಾಚೆ ಹೋಗೋಣ’ ಎಂದ. ತೊಳಲ್ಕೆ ಎಂದ ತಕ್ಷಣ ಕುಚೇಲ ಬೆವರಿದ. ’ಬೇಡ.. ಅಲ್ಲಿಗೆ ಬೇಡ ಹೋಗುವುದು.. ನೀನು ಬೇಕಿದ್ರೆ ಹೋಗು ನಾನು ಬರಲ್ಲ’ ಎಂದ. ’ಸರಿ ಬಿಡು, ಇಲ್ಲೇ ವಾದ್ರಾಜರ ಕಾಡಿಗೆ ಹೋಗೋಣ.. ಹೊಲದ ಬದಿಯಲ್ಲಿ ಅವರ ಮನೆಯ ಕೋಳಿಗಳು ಸಿಕ್ರೆ ಎತ್ತಾಕೊಂಡು ಬರೋಣ’ ಎಂದ ಜಗದೀಶ ನಗುತ್ತಾ. ಅವನ ಮಾತಿಗೆ ಗಮನ ಕೊಡದೆ ಕುಚೇಲ ’ತೊಳಲ್ಕೆ ಅಷ್ಟು ಒಳ್ಳೆಯ ಜಾಗ ಅಲ್ಲ ಅಲ್ವಾ?’  ’ಅಯ್ಯೋ ನೀನೇ ಹೀಗೇಳಿದ್ರೆ ಹೇಗೆ. ಭೂತ ಪ್ರೇತ ಏನೂ ಇಲ್ಲ ಅಂತ ನೀನೇ ಹೇಳಿದ್ದಿಯಲ್ಲ. ಈಗ ಬರ್ತೀಯೋ ಇಲ್ವೋ..?’ ಎಂದು ಕುಚೇಲನನ್ನು ಎಬ್ಬಿಸಿಕೊಂಡು ಹೋದ.

ಶಿಕಾರಿ ಎಂದರೆ ಜಗದೀಶನಿಗೆ ಪಂಚಪ್ರಾಣ. ಅಪರೂಪಕ್ಕೊಮ್ಮೆಯಾದರೂ ಕಾಡುಹಂದಿ ಸಿಕ್ಕರಂತೂ ಅವನ ಖುಶಿಗೆ ಎಲ್ಲೆಯಿಲ್ಲ. ಕಾಡುಹಂದಿಯನ್ನು ಹಿಡಿಯಲು ಸುಲಭವಾಗುವಂತೆ ಕೋವಿಯೊಂದನ್ನು ತೆಗೆದುಕೊಳ್ಳಬೇಕೆಂದು ಕಾಬ್ರಾಲರಿಗೆ ಮೂರು ನಾಲ್ಕು ತಿಂಗಳಿನಿಂದ ಮಸ್ಕಾ ಹಾಕುತ್ತಿದ್ದಾನೆ. ಅವರಂತೂ ಇವನಿಂದ ಹಣ ತೆಗೆದುಕೊಂಡು ಈಗ ಲೈಸನ್ಸು, ಅಪ್ರೂವಲ್ಲು, ಪೋಲೀಸು ಅಂತ ನೂರೆಂಟು ನೆಪ ಹೇಳುತ್ತಿದ್ದಾರೆ. ಎದುರು ಮಾತಾಡಲು ಇವನಿಗೆ ಧೈರ್ಯವಿಲ್ಲ. ಮಾತಾಡಿದರೂ ಇವನದೇ ಹಲ್ಲು ಮುರಿಯುವುದು ಎಂದು ಅರಿತಿದ್ದರಿಂದ ಅವರ ಅಂಗಡಿಗೆ ಹೋಗಿ ಹಲ್ಲು ಕಿಸಿಯುತ್ತಾ ಇರುವುದು ಊರಿನ ಸಾಮಾನ್ಯ ದೃಶ್ಯಗಳಲ್ಲಿ ಒಂದು. ಈಗಲೂ ಚೀಲದಲ್ಲಿ ಕುಣಿಕೆ, ಕತ್ತಿ, ದೊಣ್ಣೆ ಎಲ್ಲವನ್ನೂ ತೆಗೆದುಕೊಂಡು ಬಂದಿದ್ದರೂ ಕೋವಿಯೊಂದಿದ್ದರೆ ನೂರೆಂಟು ಆನೆಯ ಬಲ ಬಂದಿರೋದು ಎಂದು ಮರುಗುತ್ತಿದ್ದಾನೆ ಮತ್ತು ಕಾಬ್ರಾಲರಿಗೆ ಶಾಪ ಹಾಕುತ್ತಿದ್ದಾನೆ.

ಕಾಡಿನೊಳಗೆ ಬರುತ್ತಿದ್ದಂತೆ ಅಲ್ಲಿ ವಿಚಿತ್ರವಾದ ನಿಶ್ಶಬ್ದವಿರುವಂತೆ ಕುಚೇಲನಿಗೆ ಅನಿಸಿತು. ಜಗದೀಶ ಮೆಲ್ಲನೆ ದೊಣ್ಣೆ ಹಿಡಿದುಕೊಂಡು ಮುಂದುವರಿಯುತ್ತಿದ್ದ. ’ಝಲ್ಲ್...’ ಎದೆನಡುಗಿಸುವಂತಹ ಶಬ್ದ ಅವನಿಗೆ ಕೇಳಿತು. ಜಗದೀಶನನ್ನು ನೋಡಿದ. ಅವನ್ನು ಮೆಲ್ಲನೆ ಪೊದೆಯೊಂದರ ಇನ್ನೊಂದು ಬದಿಯತ್ತ ಸಾಗಿದ್ದ. ಆಗಲೇ ಪುರ್ರೆಂದು ಕಾಡುಕೋಳಿಯೊಂದು ಕುಚೇಲನ ಬಳಿ ಬಂತು. ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದ ಕೋಳಿಯನ್ನು ಕಂಡು ದಿಗ್ಭ್ರಾಂತನಾಗಿ ಕುಚೇಲ ಮರಗಟ್ಟಿ ನಿಂತ. ಜಗದೀಶ ಬೊಬ್ಬೆಯಿಟ್ಟರೂ ಕುಚೇಲ ಕೋಳಿಯನ್ನು ಹಿಡಿಯಲೂ ಹೋಗಲಿಲ್ಲ, ನಿಂತಲ್ಲಿಂದ ಅಲುಗಾಡಲೂ ಇಲ್ಲ. ತಾನು ಹಾರಿ ಹಿಡಿಯಬೇಕೆಂದು ಯೋಚಿಸಿದ ಜಗದೀಶ ಕಳೆದ ಸಲ ಹೀಗೇ ಹಾರಿ ಬೆನ್ನು ಉಳುಕಿಸಿಕೊಂಡು ಮೂರು ದಿನ ಒದ್ದಾಡಿದ್ದು ನೆನಪಾಗಿ ಸುಮ್ಮನಾದ. ’ಝಲ್..’ ಪುನಃ ಉಂಟಾದ ಸದ್ದಿನೊಂದಿಗೆ ಯಾರೋ ಹಿಂದಿನಿಂದ ಹೋದಂತೆ ಅನಿಸಿತು. ’ಜಗ್ಗೂ, ಯಾರೋ ನನ್ನ ಹಿಂದಿರುವಂತಿದೆ’ ಎಂದ. ಜಗದೀಶ ಸುತ್ತಲೂ ನೋಡಿ, ’ಇಲ್ಲಪ್ಪ, ಯಾರೂ ಇಲ್ಲ ಇಲ್ಲಿ, ಸುಮ್ನೆ ಕಿರಿಕಿರಿ ಮಾಡ್ಬೇಡ’ ಅವನಿಗೆ ಪಾಲಿಗೆ ಸಿಕ್ಕಿದ್ದ ಕೋಳಿಯನ್ನು ತಪ್ಪಿಸಿಹೋಗಲು ಅನುವು ಮಾಡಿದ ಇವನ ಮೇಲೆ ಸಿಕ್ಕಾಪಟ್ಟೆ ಸಿಟ್ಟು ಬಂದಿತ್ತು. "ಜಗ್ಗೂ, ಯಾಕೋ ಹೆದ್ರಿಕೆಯಾಗ್ತಿದೆ ನಂಗೆ, ನಾ ಮನೆಗೆ ಹೋಗ್ತೀನಿ’ ಎಂದು ತನ್ನ ಮನೆಯತ್ತ ನಡೆದ. ಇದರಿಂದ ಬೇಸತ್ತು ಜಗದೀಶ, ’ಬರದಿದ್ರೆ ಕೂತ್ಕೋ, ನಾನೊಬ್ನೇ ಸಾಕು’ ಎಂದು ಮುನ್ನಡೆಯಲು ಯತ್ನಿಸಿದರೂ ಧೈರ್ಯ ಸಾಕಾಗದೆ ವಾಪಾಸ್ ಬಂದ. ರಾತ್ರಿ ತನ್ನ ಹೆಂಡತಿಯ ಅದೇ ಸಪ್ಪೆ ಪುನರ್ಪುಳಿಯ ಸಾರಿನಿಂದ ತನ್ನ ಗುಡಾಣವನ್ನು ತುಂಬಿಸಿಕೊಳ್ಳಬೇಕೆಂದು ಅರಿವಾಗಿ ಕಾಬ್ರಾಲರೊಂದಿಗೆ ಕುಚೇಲನನ್ನೂ ಹಳಿಯತೊಡಗಿದ.

-೨-
ಕಥೆ ಮುಂದುವರಿಸುವ ಮೊದಲು ಓದುಗರಿಗೆ ವಿಚಿತ್ರವಾಗಿ ಕಂಡಿರಬಹುದಾದ ತೊಳಲ್ಕೆ ಎಂಬ ಸ್ಥಳದ ಕುರಿತಾಗಿ ಬರೆಯಬೇಕಾಗಿದೆ. ’ತೊಳಲ್ಕೆ’ ಎಂಬ ಶಬ್ದ ವಿಚಿತ್ರವೂ ಹೌದು, ಪೊದೆಗಳಿಂದಾವೃತವಾದ ಆ ಸ್ಥಳ ನಿಗೂಢವೂ ಹೌದು. ಈ ಶಬ್ದದ ಉಗಮ ಮತ್ತು ಆ ಸ್ಥಳ ಪುನಾರಿನ ಬುದ್ದಿಜೀವಿಗಳಿಗೆ ಸಾಕಷ್ಟು ತೊಂದರೆ ಇದೆ. ಇದರ ಬಗ್ಗೆ ಕಲ್ಪಿತ ಇತಿಹಾಸವಿದು - ’ಹಿಂದೆ ತುಳುನಾಡನ್ನು ಆಳುತ್ತಿದ್ದ ಆಳುಪ ವಂಶದ ಅರಸು ಬಂಕಿದೇವ ಇಲ್ಲಿಗೆ ಶಿಕಾರಿಗೆ ಬರುತ್ತಿದ್ದನಂತೆ, ಹಾಗೆ ಬಂದಾಗ ಬಾಯಾರಿದರೆ ಕುಡಿಯಲು ಪುಷ್ಕಿರಿಣಿಯೊಂದನ್ನು ಕಟ್ಟಿಸಿದನಂತೆ’. ತೊಳಲುಕೆರೆ ಎನ್ನುವ ಪದವೂ ಇದಕ್ಕೆ ಪುಷ್ಟಿ ಕೊಡುವುದರಿಂದ ಇದಕ್ಕೆ ಹೆಚ್ಚಿನ ತೂಕವಿದೆ. ಆದರೆ ಯಾವ ರೀತಿಯಿಂದ ನೋಡಿದರೂ ಕೆರೆಯಂತೆ ಕಾಣದ ಅಷ್ಟು ಆಳದ ಕೂಪವೊಂದನ್ನು ಪುಷ್ಕಿರಿಣಿ ಎಂದರೆ ಹೇಳಿದವನಿಗೆ ಮರುದಿನವೇ ಕನ್ನಡಕ ತೊಡಿಸಬೇಕಾದೀತು. ಒಂದು ವೇಳೆ ಇದೆಲ್ಲಾ ಸಾಧಿತವಾಗಿ ಇದಕ್ಕೆ ಐತಿಹಾಸಿಕ ಸ್ಪರ್ಶವೊಂದು ಬಂದರೆ ಇದು ತುಳುನಾಡಿನ ಇತಿಹಾಸದ ಪುಟಗಳಲ್ಲಿ ಸೇರಿ ಇಲ್ಲಿ ಸ್ವಲ್ಪ ಅಭಿವೃದ್ಧಿ ನಡೆದು ಜನ ಇಲ್ಲಿ ಬಂದು ಸಾಯುವುದು ತಪ್ಪುತ್ತಿತ್ತು. ಆದರೆ ಯಾವುದೂ ಹಾಗೆ ಆಗಲಿಲ್ಲವಾದ್ದರಿಂದ ತೊಳಲ್ಕೆ ಸೂಸೈಡ್ ಪಾಯಿಂಟ್ ಆಗಿ ಕುಖ್ಯಾತವಾಗಿದೆ. ಎಷ್ಟರ ಮಟ್ಟಿಗೆ ಕುಖ್ಯಾತವೆಂದರೆ ಊರಲ್ಲಿ ’ತೊಳಲ್ಕೆಗೆ ಹೊಗ್ತೀನಿ’ ಎಂದು ಮಕ್ಕಳೆಲ್ಲಾ ಅಮ್ಮನವರನ್ನು ಬ್ಲಾಕ್ ಮೇಲ್ ಮಾಡಲು ಬಳಸುತ್ತಿದ್ದಾರೆ. ಆದರೆ ಇದರೊಂದಿಗೆ ಇಲ್ಲಿ ಸಾಯುವ ಜನರ ಆತ್ಮಗಳು ಈ ಸ್ಥಳದ ಆಸು ಪಾಸು ಸವಾರಿ ನಡೆಸುತ್ತವೆ ಎಂದೂ ಸುದ್ದಿಯೊಂದು ಹರಡಿತ್ತು. ಮಧ್ಯರಾತ್ರಿ ಅಲ್ಲಿಂದ ಹೆಣ್ಣು ಮಕ್ಕಳ ಆಕ್ರಂದನ ಕೇಳ್ತದಂತೆ. ಇದರಿಂದ ಅದು ಜನವಸತಿಯಿಂದ ದೂರವಾಗಿ ದೊಡ್ಡ ದೊಡ್ಡ ಪೊದೆಗಳಿಂದಾವೃತವಾಗಿ ಹಗಲಲ್ಲೂ ಭಯ ಹುಟ್ಟಿಸುವ ಸ್ಥಳವಾಗಿದೆ.

ಕುಚೇಲ ಕೂಡ ಅದರಾಚೆಯಿಂದಲೇ ಬಂದು ಮುದುಡಿ ಕುಳಿತಿದ್ದ. ಆದರೆ ದೆವ್ವ, ಭೂತಕ್ಕೆಲ್ಲಾ ಹೆದರುವ ಆಸಾಮಿ ಅಲ್ಲ ಅವನು. ಅವೇನಾದರೂ ಇದ್ದರೆ ನೋಡಿಯೇ ಬಿಡುತ್ತೇನೆ ಎಂದು ಅಮಾವಾಸ್ಯೆಯ ರಾತ್ರಿಯಿಡೀ ತೊಳಲ್ಕೆಯ ಆಸುಪಾಸಿನಲ್ಲಿ ಕಳೆದು ಜನರ ದೃಷ್ಟಿಯಲ್ಲಿ ಹೀರೋ ಆಗಿಯೂ ಮಂತ್ರವಾದಿ ಆಗಿಯೂ ರೂಪಾಂತರ ತಾಳಿದ್ದ. ಆದರೂ ಮತ್ತೆ ಯಾರೂ ಆಚೆ ಕಡೆಗೆ ತಲೆ ಹಾಕಿರಲಿಲ್ಲ. ಸದ್ಯಕ್ಕೆ ಕಾಡಿನಿಂದ ಮರಳಿ ಬಂದ ಆತನ ಮನಸ್ಸು ಬೇರೆ ವಿಷಯಗಳತ್ತ ಹೊರಳದೆ ಕೇವಲ ಗೆಜ್ಜೆಯ ಸದ್ದುಗಳ ಸುತ್ತವೇ ತಿರುಗತೊಡಗಿತು. ಅವನಿಗೆ ಆ ಗೆಜ್ಜೆ ಪದುಮಳ ಕಾಲಿನ ಗೆಜ್ಜೆ ಎಂದೇ ಅನಿಸಲು ಕಾರಣ ಅದರ ಧ್ವನಿ. ಮನೆಯಲ್ಲಿ ಆಕೆ ಆಚೆ ಈಚೆ ಹೋಗುವಾಗ ಬರುವ ಸದ್ದು, ಅದೇ ಆ ಗೆಜ್ಜೆಗಳು! ಸಂಶಯವೇ ಇಲ್ಲ, ಆದರೆ ಅವಳು.. ಅವಳು.. ಕುಚೇಲನ ಸರ್ವಾಂಗಗಳೂ ಕಂಪಿಸತೊಡಗಿದವು. ಹೆದರಿಕೆಯಿಂದ ಕುಳಿತಿದ್ದವನಿಗೆ ಒಮ್ಮೆ ಪದ್ಮ ಕಾಣಿಸಿಕೊಂಡಳು. ಅವಳು ಒಮ್ಮೆಯೇ ಬಂದು ಕುತ್ತಿಗೆ ಹಿಡಿದಂತಾಯಿತು, ಉಸಿರು ಬಿಗಿಗಟ್ಟಿದ ನಂತರ ತಾನು ’ಸತ್ತೆ’ ಎನ್ನುವ ಭಾವ ಉಂಟಾದಾಗ ಕುಚೇಲ ಎದ್ದು ನಿಂತ. ’ಉಳ್ಳಾಳ್ತಿ.. ಕಾಪಾಡಮ್ಮಾ’ ಎಂದು ದೇವಿಗೆ ಮೊರೆಯಿಟ್ಟು ಒಲೆಯ ಬದಿಯಲ್ಲಿದ್ದ ಐದು ತೊಟ್ಟೆ ಸಾರಾಯಿಯನ್ನು ಸುರಿದುಕೊಂಡ. ಕೆನೆವ ಹುಚ್ಚು ಮನಸ್ಸಿನ ವಿವಿಧ ರೂಪಗಳಿಗೆ ಅಜ್ಞಾತನಾದ ಕುಚೇಲ ಎಂದಿನಂತೆ ಮುದುಡಿ ಮಲಗಿದ.       

-೩-

’ಏ ಕುಚೇಲ, ಮುತ್ತಿನಂತ ಹೆಂಡ್ತಿ ಸಿಕ್ಕಿದ್ದಾಳೆ. ಇನ್ನಾದ್ರೂ ಆ ಸೀನನ ಸಹವಾಸ ಬಿಡು. ಒಳ್ಳೆ ಮನುಷ್ಯ ಆಗು’
’ಮದ್ವೆ ಹೇಗಾದ್ರೂ ಆದಿ. ಇನ್ನಾದ್ರೂ ಮನೆ ಕಡೆ ಸೊಲ್ಪ ಗಮನ ಕೊಡು, ಭಿಕಾರಿಯಂತೆ ಬೀದಿ ಬೀದಿ ಅಲೀಬೇಡ’ ನೆರೆಯವರ ಉಪದೇಶಗಳನ್ನು ಕೇಳಿ ಕೇಳಿ ಕಿವುಡಾಗಿದ್ದ ಕಿವಿಗಳು ಶಾಶ್ವತವಾಗಿ ತನ್ನ ಶಕ್ತಿ ಕಳೆದುಕೊಳ್ಳುವುದು ಬೇಡವೆಂದು ಕುಚೇಲ ಕಳೆದ ಎರಡು ವಾರದಿಂದ ಮನೆ ಬಿಟ್ಟು ಕದಲಿದ್ದೇ ಇಲ್ಲ, ಒಂಥರಾ ಅದು ನೆಪ ಕೂಡ ಹೌದು! ಕುಚೇಲ ಮದುವೆಯಾಗಿದ್ದ. ಪದ್ಮಳ ಪ್ರೀತಿ, ಹೊಸದಾಗಿ ಮದುವೆಯಾದ ಕಳೆ ಅವನ ಬದುಕನ್ನು ತುಂಬಾ ಬದಲಾಯಿಸಿತ್ತು. ಪದ್ಮಳ ಪ್ರೀತಿ ಕಲ್ಲಿನ ಅವನ ಎದೆಯನ್ನು ಅವನಿಗೆ ಗೊತ್ತಿಲ್ಲದೇ ಕರಗಿಸಿತ್ತು. ಅವನಿಗೆ ಅರಿವೂ ಮೂಡದಂತೆ ಅವನ ಚಟಗಳೆಲ್ಲಾ ಒಂದೊಂದಾಗಿ ಮರೆಯಾಗತೊಡಗಿದವು. ಸೀನನ ದೇಸಿ ಸಾರಾಯಿ, ಎಲ್ಲಪ್ಪಣ್ಣನ ಗುಟ್ಕಾ, ಬೀಡಿ.. ಎಲ್ಲವೂ! ಸಾರಾಯಿಯ ಘಾಟು ಮತ್ತು ಬೀಡಿಯ ಹೊಗೆ ಪದ್ಮಳಿಗೆ ಆಗಿ ಬರುತ್ತಿರಲಿಲ್ಲ ಎನ್ನುವ ಕಾರಣಕ್ಕೆ ಅವನ್ನು ಬಿಟ್ಟರೂ ಜಗದೀಶನೊಂದಿಗೆ ಶಿಕಾರಿಗೆ ಹೋಗಲು ಏನೂ ತೊಂದರೆಯಿರಲಿಲ್ಲವಾದ್ದರಿಂದ ಕುಚೇಲನಿಗೆ ತನ್ನ ಸಮಯ ಹರಣ ಮಾಡಲು ಉಳಿದ ಏಕೈಕ ಕಾರ್ಯಕ್ರಮ ಅದೇ ಆಗಿತ್ತು. ಇದು ಮದುವೆಯಾಗಿ ಎರಡು ಮೂರು ವರ್ಷಗಳು ಕಳೆದವು. ಈ ನಡುವೆ ಕುಚೇಲನ ಮನೆಯ ಸುತ್ತ ತೋಟವೊಂದು ಸೃಷ್ಟಿಯಾಗಿ ತರಕಾರಿಗಳು ಬೆಳೆಯತೊಡಗಿ, ಹೂವುಗಳು ಅರಳಿ ಮನೆಯು ಮನೆಯಾಗಿ ಕಾಣತೊಡಗಿ ಊರಿನವರೆಲ್ಲಾ ಮೂಗಿನ ಮೇಲೆ ಬೆರಳಿಟ್ಟರು.

ಒಳ್ಳೆಯದಿರಲಿ ಕೆಟ್ಟದಿರಲಿ ಎಲ್ಲದಕ್ಕೂ ಕೊನೆಯಂತೂ ಇದ್ದೇ ಇರುತ್ತದೆ. ಕುಚೇಲನ ಗ್ರಹಗತಿ ಹಾಳಾಯಿತೋ, ಊರಿನವರ ದೃಷ್ಟಿ ಬಿತ್ತೋ, ಸೀನನ ಶಾಪ ತಾಗಿತೋ ಒಂದು ದಿನ ಕುಚೇಲ ತೂರಾಡುತ್ತಾ ಮನೆ ಬಾಗಿಲಿಗೆ ಬಂದಾಗ ಅಲ್ಲಿಯರೆಗೆ ಅಸ್ತಿತ್ವದಲ್ಲಿದ್ದ ಬದುಕೊಂದು ಪುನಃ ತನ್ನ ಅಸ್ತಿತ್ವಕ್ಕಾಗಿ ತಡಕಾಡಬೇಕಾದ ಕಾಲ ಬಂತು. ಏನಾಯಿತು ಎಂದು ಊರಿನವರಿಗಾಗಲೀ ಪದ್ಮಳಿಗಾಗಲೀ ಅರ್ಥವೇ ಆಗಲಿಲ್ಲ. ಕುಚೇಲನಿಗೆ ತನ್ನ ಹೆಂಡತಿಯ ನಡತೆಯ ಮೇಲೆ ಅನುಮಾನವಿರಲಿಲ್ಲ, ಎರಡು ವರ್ಷಗಳಲ್ಲಿ ಮಕ್ಕಳಾಗಲಿಲ್ಲ ಎಂಬ ಚಿಂತೆಯೂ ಇರಲಿಲ್ಲ. ಆದರೂ ಹೀಗೆ ಏನೂ ಕಾರಣವಿಲ್ಲದಿರುವುದೇ ಅವನ ನೆಮ್ಮದಿ ಕೆಡಿಸತೊಡಗಿತು. ಇವಳೇನೋ ಮಾಟ ಮಾಡಿದ್ದಾಳೆ ಎಂದು ಮೊದಲ ಬಾರಿ ಅನಿಸಿದ್ದು ತನ್ನ ಗತವೈಭವವನ್ನು ನೆನಪಿಸಿಕೊಂಡಾಗ. ಒಬ್ಬ ಹೀರೋ ಆಗಿದ್ದ ನಾನು ಹೀಗಾಗಲು ನನ್ನ ಮೇಲೆ ಏನೋ ಮಾಟ ಮಾಡಿರಲೇಬೇಕು ಎಂಬ ಸಂಶಯ ಅವನಿಗೆ ತಲೆಗೆ ಹತ್ತುತ್ತಿದ್ದಂತೆಯೇ ಮತ್ತೆ ಸೀನನ ಸಾರಾಯಿ ಅಂಗಡಿಯತ್ತ ಮುಖ ಹಾಕಿದ. ತನ್ನ ಪ್ರೀತಿಯನ್ನು ದುರುಪಯೋಗಪಡಿಸಿಕೊಂಡಳೆಂದು ಸೀನನೊಡನೆ ಗೋಳಿಟ್ಟ. ಕುಚೇಲನ ಈ ಮನಸ್ಥಿತಿಯ ಬಗ್ಗೆ ಗೊತ್ತಿರದಿದ್ದ ಪದ್ಮ ಪಾಂಡು ಭಂಡಾರಿಯನ್ನು ಭೇಟಿಯಾಗಿ ಇದೆಲ್ಲದರ ಪರಿಹಾರಾರ್ಥವಾಗಿ ತಾಯಿತವೊಂದನ್ನು ಮಾಡಿಕೊಂಡು ಬಂದಳು. ಅದನ್ನು ತನ್ನ ಕರಿಮಣಿಯೊಂದಿಗೆ ಸುತ್ತಿಹಾಕಿದರೆ ತನ್ನ ಗಂಡ ಸರಿಯಾಗುತ್ತಾನೆ ಎಂದು ನಂಬಿ ಪ್ರತಿದಿನವೂ ದೇವಸ್ಥಾನಕ್ಕೆ ಹೋಗತೊಡಗಿದಳು. ಆದರೆ ಕುಚೇಲನ ವರ್ತನೆಯಲ್ಲಿ ಏನೂ ವ್ಯತ್ಯಾಸ ಕಾಣದಿದ್ದರೂ ಅವನ ಬದಲಾದ ಮನಸ್ಥಿತಿಯಿಂದ ಎಲ್ಲರ ನೆಮ್ಮದಿ ಹಾಳಾಯಿತು ಹಾಗೆಯೇ ಸೀನನಿಗೆ ಒಳ್ಳೆಯ ವ್ಯಾಪಾರವಾಯಿತು. ಬದಲಾದ ಈ ಪರಿಸ್ಥಿತಿಗಳಲ್ಲಿ ಪದ್ಮ ಹೊಲಿಗೆ ಕೆಲಸ ಕಲಿತು ಸದಾಶಿವನ ’ಸ್ಟೈಲ್ ಟೈಲರ್ಸ್’ ಸೇರಿಕೊಂಡಳು.

ಸ್ಟೈಲ್ ಟೈಲರ್ಸ್ ಊರಿನ ಏಕೈಕ ಹೊಲಿಗೆ ಅಂಗಡಿಯಲ್ಲದಿದ್ದರೂ ಸದಾಶಿವನ ಕೆಲಸವನ್ನು ಎಲ್ಲರೂ ಮೆಚ್ಚುತ್ತಿದ್ದರಾದ್ದರಿಂದ ಅವನಿಗೆ ಒಳ್ಳೆಯ ವ್ಯವಹಾರ. ಹುಡುಗಿಯರ ವಿಷಯದಲ್ಲಿ ಸ್ವಲ್ಪ ಸಲಿಗೆ ತೆಗೆದುಕೊಂಡು ಮುಂದುವರಿಯುತ್ತಿದ್ದ ಅವನ ಬಗ್ಗೆ ದಂತಕಥೆಯೊಂದು ಸೃಷ್ಟಿಯಾಗಿತ್ತು. ಅವನೊಬ್ಬ ಚಪಲ ಚನ್ನಿಗರಾಯನಂತೆ. ಮೊದಲು ಸುಳ್ಯದಾಚೆ ಎಲ್ಲೋ ಟೈಲರಿಂಗ್ ಮಾಡ್ಕೊಂಡಿದ್ನಂತೆ, ಅದರ ನಂತರ ಮಂಗಳೂರಲ್ಲೂ ದೊಡ್ಡ ಬಿಸಿನೆಸ್ಸು ತೆರೆದು ಎಲ್ಲಾ ಕಳಕೊಂಡು ಇಲ್ಲಿ ಜಮೀನು ಇದೆ ಎಂದು ಬಂದು ಈಗ ಇಲ್ಲೇ ತಳವೂರಿದ್ದಾನೆ. ಅವನ ಈ ಪುರಾಣಗಳನ್ನು ಅಲ್ಲಿ ಇಲ್ಲಿ ಕೇಳಿದವರು ಇವನು ಯಾವಾಗ ಕಾಲು ಕೀಳುತ್ತಾನೆ ಎಂಬುದರ ಅರಿವಿಲ್ಲದಿದ್ದರಿಂದ ಅವನಲ್ಲಿ ಹೊಲಿಗೆಗೆ ಬಟ್ಟೆ ಕೊಟ್ಟರೂ ಪ್ರತಿದಿನ ಬಂದು ಯೋಗಕ್ಷೇಮ ವಿಚಾರಿಸಿ ಹೋಗುತ್ತಿದ್ದರು. ಅವನ ಸ್ವಭಾವದಿಂದ ಹಳ್ಳಿಯಲ್ಲಿ ಏನೂ ವಿಶೇಷವಾದದ್ದು ಬಂದೊದಗದಿದ್ದರೂ ಎಲ್ಲಾ ಗಂಡಂದಿರು ತಮ್ಮ ಹೆಂಡತಿಯರನ್ನು ಹದ್ದುಬಸ್ತಿಯಲ್ಲಿಡಲು ಯತ್ನಿಸುತ್ತಿರುವುದು ಒಂದು ಸಾಂಕ್ರಾಮಿಕ ರೋಗದಂತೆ ಹರಡಿತ್ತು. ಆದರೆ ಇದೆಲ್ಲದರ ಬಗ್ಗೆ ಅವಜ್ಞೆ ತಾಳಿ ಅವನೊಡನೆ ಕೆಲಸಕ್ಕೆ ಸೇರಿದ ಪದ್ಮಳ ಬಗ್ಗೆ ಅವನಿಗೆ ವಿಪರೀತ ಗೌರವ, ಹಾಗೆಯೇ ಒಂದು ರೀತಿಯ ಪ್ರೀತಿ ಕೂಡ. ಒಂದು ರೀತಿಯ ಹಿತಕರವಾದ ಭಾವನೆ ಪದ್ಮಳಲ್ಲೂ ಅವನ ಬಗ್ಗೆ ಮೂಡಿತ್ತು. ಸಮಯ ಸಿಕ್ಕಾಗಲೆಲ್ಲಾ ಅವಳ ಬಳಿ ಕೂರುತ್ತಿದ್ದ ಸದಾಶಿವನ ಅಭ್ಯಾಸದಿಂದ ಊರಿನ ಜನರಲ್ಲಿ ಪದ್ಮಳ ನಡತೆಯ ಬಗ್ಗೆ ಶಂಕೆಯಾಗಿ ಕಿವಿಯಿಂದ ಕಿವಿಗೆ ಕಥೆಗಳು ಹರಡತೊಡಗಿದವು.

-೪-

ಸದಾಶಿವ ತನ್ನ ಅಂಗಡಿ ಮುಚ್ಚಿ ಪರಾರಿಯಾದದ್ದು ಅದೇ ದಿನ ಪದ್ಮ ಕಾಣೆಯಾದದ್ದು ಹೇಳುವವರ ಬಾಯಿಗೆ ನೀರೂರಿಸುವ ಕಥೆಯಾಗಿ ಕೇಳುವವರ ಕಿವಿಗೆ ಆಸ್ವಾದವನ್ನು ನೀಡಿತು. ಎಲ್ಲರೂ ಕುಚೇಲನ ಬಗ್ಗೆ ಕರುಣೆ ತೋರಿಸೋರೇ. ಇದ್ಯಾವುದಕ್ಕೂ ಪ್ರತಿಕ್ರಿಯಿಸದ ಕುಚೇಲ ಮೌನವಾಗಿರುತ್ತಿದ್ದ. ಅವನ ಕಣ್ಣುಗಳು ಕೆಂಪಗಾಗುತ್ತಿದ್ದವು. ಅವನಿಗೆ ನಿದ್ದೆ ಬರುತ್ತಿಲ್ಲ ಎಂದು ಹೇಳುತ್ತಿದ್ದ. ಮನೆಯಿಂದ ಹೆಚ್ಚಾಗಿ ಹೊರಗೆ ಬರುತ್ತಲೇ ಇರಲಿಲ್ಲ. ಎಲ್ಲರಿಂದ ದೂರವಾಗುತ್ತಿದ್ದ ಅವನ ಈ ಚರ್ಯೆ ಪದ್ಮ ಕೈ ಕೊಟ್ಟಿದ್ದರಿಂದ ಎಂದು ಎಲ್ಲರೂ ಅಂದುಕೊಂಡು ಅವನನ್ನು ಅವನಷ್ಟಕ್ಕೆ ಬಿಟ್ಟರು. ಜಗದೀಶನಿಗೂ ಇದರಿಂದ ತುಂಬಾನೇ ಬೇಸರವಾಗಿ ತನ್ನ ತಲೆಯಲ್ಲಿ ಮೆದುಳು ಇದೆಯೆಂದು ತೋರಿಸಲು ಪೋಲೀಸ್ ಸ್ಟೇಶನ್ನಿಗೆ ಹೋಗಿ ಕಂಪ್ಲೇಂಟು ಕೊಟ್ಟು ಬಂದ. ಅವನ ಪ್ರಕಾರ ಪದ್ಮ ಸದಾಶಿವನೊಂದಿಗೆ ಹೋಗಿದ್ದಾಳೆ ಎನ್ನುವುದು ಖಚಿತವಿಲ್ಲವಾದ್ದರಿಂದ ಬೇರೆ ಏನಾದರೂ ಆಗಿದೆ, ಅದನ್ನು ಹುಡುಕಲೇ ಬೇಕು! ಇದನ್ನು ಕುಚೇಲನಿಗೆ ಹೇಳಿದ್ದರೂ ಚಿಂತೆಯಿರಲಿಲ್ಲ. ಹೀಗೆ ಹೇಳದಿದ್ದರಿಂದ ಸ್ಟೇಶನ್ನಿಂದ ಹೇಳಿಕೆ ಬಂದಾಗ ಕುಚೇಲ ಕಂಗಾಲಾದ. ಕುಚೇಲ ತಾನಾಗಿ ಕಂಪ್ಲೇಂಟು ಕೊಡದಿದ್ದುದು ಸಹಜವಾಗಿ ಎಸ್.ಐ ಕೋದಂಡನ ಗಮನಕ್ಕೆ ಬಂದು ಬಕ್ಕತಲೆಯಲ್ಲಿ ಕುಚೇಲನ ಮೇಲೆ ಸಂಶಯ ಬಂದಿತ್ತು. ಕುಚೇಲ ಎಷ್ಟೂ ಬೇಡವೆಂದರೂ ಕೇಳದ ಪೇದೆ ಮತ್ತು ಅಲ್ಲೇ ಇದ್ದ ಜಗದೀಶನ ಒತ್ತಾಯಕ್ಕೆ ಮಣಿದು ಪೋಲೀಸ್ ಸ್ಟೇಶನ್ನಿಗೆ ಹೋದ. 

ಎಸ್.ಐ ಕೋದಂಡ ಹಳೇ ಹುಲಿಯಾದರೂ ಬುದ್ಧಿ ತುಂಬಾ ತೀಕ್ಷ್ಣ. ಸ್ಟೇಶನ್ನಿನಲ್ಲಿ ತಡವರಿಸಿ ಮಾತಾಡುತ್ತಿದ್ದ ಕುಚೇಲನನ್ನು ಕಂಡು ಅವನ ಗುಮಾನಿ ಹೆಚ್ಚಾಯಿತು. ಅವನ ಕಣ್ಣುಗಳಲ್ಲಿ ಕಂಡ ವಿಕ್ಷಿಪ್ತತೆ, ಬೆವರುತ್ತಿದ್ದ ಮುಖ ಅವನ ತಲೆಯೊಳಗೆ ಸಿಗರೇಟಿನ ಸುರುಳಿಗಳಂತೆ ಸುತ್ತತೊಡಗಿದವು. ಯಾವುದಕ್ಕೂ ಊರಿಗೆ ಹೋಗುವುದು ಒಳ್ಳೆಯದು ಎಂದುಕೊಂಡು ಅವನಿಂದ ಸ್ಟೇಟ್‍ಮೆಂಟ್ ಬರೆಸಿಕೊಂಡು ಯಾವುದೇ ಕಾರಣಕ್ಕೂ ಊರು ಬಿಡಬಾರದೆಂದು ಆಜ್ಞಾಪಿಸಿದ.

ಎಲ್ಲಪ್ಪಣ್ಣನ ಅಂಗಡಿಯಿಂದ ಎಳನೀರು ಕುಡಿದುಕೊಂಡು ಬರುತ್ತಿರುವಾಗ ಅಲ್ಲಿಯವರೆಗೆ ಸರಿಯಿದ್ದ ಕುಚೇಲ ಇದ್ದಕ್ಕಿದ್ದಂತೆ ಬದಲಾದಂತೆ ಜಗದೀಶನಿಗೆ ಅನಿಸಿತು. ’ಏನಾಯ್ತೋ ನಿಂಗೆ, ಎಲ್ಲಪ್ಪಣ್ಣನ ಸಿಹಿಯಾಳ ಕುಡ್ದು ಮತ್ತೇರಿತೋ...’ ’ಶ್ಶ್’ ಕುಚೇಲ ಅವನ ಮಾತನ್ನು ಅರ್ಧದಲ್ಲೇ ನಿಲ್ಲಿಸಿದ. ಹೌದು ಪುನಃ ಸದ್ದು. ಹಿಂದೆ ತಿರುಗಿ ನೋಡಿದ. ಖಾಲಿ ರೋಡು ಭಣಗುಡುತ್ತಿತ್ತು. ’ನಿಂಗೆ ಗೆಜ್ಜೆ ಸದ್ದು ಕೇಳ್ತದೇನೋ’ ’ಏನೋ ನಿಂದು ರಾಗ, ಗೆಜ್ಜೆನೂ ಇಲ್ಲ, ತಾಳನೂ ಇಲ್ಲ. ನಡಿ!’
’ನೀನೇನ್ ಕಿವುಡನಾ? ನಂಗೆ ಕೇಳ್ಸೋ ಶಬ್ದ ನಿಂಗೆ ಯಾಕೆ ಕೇಳ್ಸಲ್ಲ. ಕೇಳು ಸರಿಯಾಗಿ ಕೇಳು.. ’ ಹಾದಿಯಲ್ಲಿ ಹೋಗುವವರು ಬಗ್ಗಿ ಹಿಂದೆ ಹಿಂದೆ ನೋಡಿ ನಡೆಯುತ್ತಿದ್ದ ಕುಚೇಲನನ್ನು ನೋಡುತ್ತಿರುವುದನ್ನು ಕಂಡ ಜಗದೀಶನಿಗೆ ಮಾನ ಉಳಿಸಿಕೊಳ್ಳೋದು ಮುಖ್ಯ ಎಂದು ಅರಿವಾಗಿ ಅವನನ್ನು ಎಳೆದುಕೊಂಡು ನಡೆದ.
 
ಕೋದಂಡ ಆವತ್ತು ಸಾಯಂಕಾಲವೇ ಪುನಾರಿಗೆ ಬಂದು ಮೊದಲು ಸದಾಶಿವನ ಮೊಬೈಲು ನಂಬರ್ ಹುಡುಕಿ ಅವನಿಗೆ ಕರೆಮಾಡಿದ. ಅವನು ಮಂಡ್ಯಕ್ಕೆ ಹೋಗಿದ್ದಾನೆಂದೂ ಒಂದು ತಿಂಗಳು ರಜೆ ಹಾಕಿದ್ದನೆಂದೂ, ಪದ್ಮಳ ಬಗ್ಗೆ ಕೇಳಿದಾಗ ಅವಳಿಗೆ ರಜೆ ಕೊಟ್ಟಿದ್ದನೆಂದೂ ತಿಳಿದು ಬಂತು. ಅವನನ್ನು ತಕ್ಷಣ ಊರಿಗೆ ಬಂದು ಸಿಗಲು ಹೇಳಿದ. ಇದರಿಂದ ಕೋದಂಡನಿಗೆ ಕುಚೇಲನ ಮೇಲಿದ್ದ ಸಂಶಯ ಖಚಿತತೆಯನ್ನು ಪಡೆಯಿತು. ಇಬ್ಬರು ಪೇದೆಗಳು ಪದ್ಮ ಮನೆಗೆ ಹೋಗುತ್ತಿದ್ದ ದಾರಿಯನ್ನು ಅನುಸರಿಸುತ್ತಾ ಹೇಗೋ ಪದ್ಮಳ ದೇಹವನ್ನು ತೊಳಲ್ಕೆಯ ಬಾವಿಯೊಳಗೆ ಪತ್ತೆ ಮಾಡಿದರು. ಅದು ಗುರುತಿಸಲೂ ಸಾಧ್ಯವಾಗದಷ್ಟು ಕೊಳೆತು ಹೋಗಿತ್ತು. ಶವವನ್ನು ಎತ್ತಿಸಿ ಪಂಚನಾಮೆಗೆ ಕಳುಹಿಸಿ ಊಹಿಸಿದಕ್ಕಿಂತಲೂ ಸುಲಭವಾಗಿ ಪರಿಹಾರವಾದ ಕೇಸಿನಿಂದ ತನ್ನ ಬೆನ್ನು ತಟ್ಟಿಕೊಂಡ ಕೋದಂಡ. ಪೇದೆಗಳ ಬೆನ್ನನ್ನೂ ತಟ್ಟಿದ. ಕುಚೇಲನನ್ನು ನಾಳೆ ನೋಡಿಕೊಂಡರಾಯಿತು ಎಂದುಕೊಂಡ. ಅವನಿಗೆ ಒಟ್ಟಾರೆ ಸಂಪೂರ್ಣ ಸನ್ನಿವೇಶವು ಹಾಸ್ಯಾಸ್ಪದವಾಗಿ ಕಾಣತೊಡಗಿತು, ಮಡದಿಗೆ ಈ ವಿಚಿತ್ರ ಕಥೆಯನ್ನು ಹೇಳಬೇಕೆಂದುಕೊಂಡು ಸೀದಾ ಮನೆಗೆ ಹೋದ. 

-೫-
ಕುಚೇಲನ ಕೈಯಲ್ಲಿದ್ದ ಕೊಡಲಿ ಮತ್ತು ಅವನ ಕಣ್ಣುಗಳಲ್ಲಿದ್ದ ವ್ಯಗ್ರತೆಯನ್ನು ಯಾರಾದರೂ ಕಂಡಿದ್ದರೆ ಅಲ್ಲೇ ತಲೆ ಸುತ್ತಿ ಬೀಳೋರು. ಆದರೆ ಶನಿವಾರದ ಆ ಮಧ್ಯಾಹ್ನದ ಹೊತ್ತು! ಊರಿಗೆ ಊರೇ ಮನೆಯಲ್ಲಿ ಬಿದ್ಕೊಂಡಿರುತ್ತದೆ.  ಸದಾಶಿವನ ಅಂಗಡಿ ಮುಚ್ಚಿದ್ದನ್ನು ಕಂಡು ಮನೆಯತ್ತ ಹೆಜ್ಜೆ ಹಾಕಿದ. ಎಂದಿಗಿಂತ ಎರಡು ಪಟ್ಟು ಹೆಚ್ಚೇ ಕುಡಿದಿದ್ದ ಕುಚೇಲನ ಬುದ್ಧಿ ಸ್ಥಿಮಿತದಲ್ಲಿ ಇರಲಿಲ್ಲ. ಕಾಡಿನ ದಾರಿಯಾಗಿ ಮನೆಗೆ ಬರುತ್ತಿದ್ದಂತೆ ಪದ್ಮ ಕಂಡಳು. ಕಟ್ಟಿಗೆ ಒಟ್ಟು ಮಾಡುತ್ತಿದ್ದ ಅವಳು ಇವನ ಕಣ್ಣಿಗೆ ಸದಾಶಿವನಿಗ ಕಾಯುತ್ತಿರುವಂತೆ ಕಂಡಳು. ’ಏನೇ.. ರಂಡೆ’ ಎಂದು ಜುಟ್ಟು ಹಿಡಿದು ಹಿಗ್ಗಾ ಮುಗ್ಗ ಎಳೆದ. ಪದ್ಮಳಿಗೆ ಏನೊಂದೂ ಅರ್ಥವಾಗಲಿಲ್ಲ. ’ನಂಗೇ ಮೋಸ ಮಾಡ್ತೀಯಾ, ನಂಗೆ ಮಾಟ ಮಾಡ್ತೀಯಾ! ನಿನ್ನಿಂದಾಗಿ ಹಾಳಾಗಿದ್ದು ಎಲ್ಲಾ ಇವತ್ತೇ ಕೊನೆಯಾಗತ್ತೆ, ನೋಡ್ತಾ ಇರು’ ಎಂದು ಅವಳನ್ನು ದೂಡಿ, ಕೈಯಲ್ಲಿದ್ದ ಕೊಡಲಿಯನ್ನು ಬೀಸಿದ. ಕ್ಷಣ ಮಾತ್ರ, ’ಅಮ್ಮಾ..’ ಎಂಬ ಚೀತ್ಕಾರವೊಂದು ಕಾಡಿನ ವಿವಿಧೆಡೆಗಳಲ್ಲಿ ಮಾರ್ದನಿಸಿತ್ತು. ಮೈಯೆಲ್ಲಾ ರಕ್ತಸಿಕ್ತವಾಗಿತ್ತು. ರಕ್ತದ ಓಕುಳಿಯನ್ನು ನೋಡಿದ ಕುಚೇಲನ ಮೈಯಲ್ಲಿ ಹಿಡಿದಿದ್ದ ಭೂತ ಅವನನ್ನು ಬಿಟ್ಟುಬಿಡ್ತು. ಶರಾಬಿನ ನಶೆ ನಿಮಿಷ ಮಾತ್ರದಲ್ಲಿ ಇಳಿದು ರಕ್ತವನ್ನು ಕಂಡು ತಲೆ ಸುತ್ತಿ ಬಿದ್ದ.

ಕುಚೇಲನಿಗೆ ಎಚ್ಚರವಾದಾಗ ಕತ್ತಲೆಯಾಗಿತ್ತು. ಅವನಿನ್ನೂ ನಡುಗುತ್ತಿದ್ದ. ಆದರೆ ಇಲ್ಲಿಂದ ಹೋಗಲೇಬೇಕು, ಇದನ್ನೂ ಇಲ್ಲಿ ಬಿಡುವ ಹಾಗಿಲ್ಲ. ಏನು ಮಾಡುವುದು ಎಂದು ಯೋಚಿಸಿದಾಗ ಹೊಳೆದದ್ದು ತೊಳಲ್ಕೆ. ಸುಮಾರು ಅರ್ಧ ಕಿಲೋ ಮೀಟರು ಅವಳ ದೇಹವನ್ನು ಎತ್ತಿಕೊಂಡು ಬಾವಿಗೆ ಎಸೆದು ಪುನಃ ಅಲ್ಲೇ ಕುಸಿದ. ಕ್ಷಣ ಮಾತ್ರ.. ಅವಳ ದನಿ ಕೇಳಿತು. ಮತ್ತೆ ಜೋರಾಗಿ ಚೀತ್ಕರಿಸಿದ ಧ್ವನಿ,
’ಅಮ್ಮಾ...’
ಧಿಗ್ಗನೆ ಕುಚೇಲ ಎಚ್ಚೆತ್ತ. ’ಯಾರು?’ ಎಂದು ಬಾಗಿಲ ಬಳಿ ಬಂದ. ಯಾರೂ ಇರಲಿಲ್ಲ. ಬಾಗಿಲು ಹಾಕಿ ತಿರುಗಿದರೆ ದೊಡ್ದದೊಂದು ಛಾಯೆ ಗೋಡೆಯಲ್ಲಿ ಮೂಡಿತ್ತು. ಏನೂ ಇಲ್ಲ, ನನ್ನದೇ ನೆರಳು ಎಂದು ಕುಚೇಲ ಸಮಾಧಾನಿಸಿಕೊಂಡರೂ ಮರುಕ್ಷಣ ಪುನಃ ಚೀತ್ಕಾರ ’ಅಮ್ಮಾ..’ ಕುಚೇಲನಿಗೆ ಭಯವಾಗತೊಡಗಿತು. ಒಲೆಯ ಸಮೀಪ ಹೋಗಿ ಸಾರಾಯಿ ತೊಟ್ಟೆ ಏನಾದರೂ ಇದೆಯೇ ಎಂದು ನೋಡಿದ ಆದರೆ ಎಲ್ಲಾ ಖಾಲಿಯಾಗಿತ್ತು. ಮನೆಯ ಹಿಂದೆ ಯಾರೋ ಓಡಿ ಹೋದ ಹಾಗೆ ಆಯಿತು. ಈಗ ಅವನಿಗೆ ಹೊರಗೆ ಹೋಗಲು ಧೈರ್ಯ ಬರಲಿಲ್ಲ. ಮೇಲಿಂದ ಮಡಕೆಯೊಂದು ಕೆಳಗೆ ಬಿತ್ತು. ಇವನಿಗೆ ಅದರ ನಂತರದ ಬೆಕ್ಕಿನ ಮಿಯ್ಯಾಂ ಕೇಳಲಿಲ್ಲ. ಪುನಃ ತಿರುಗಿ ನೋಡಿದ ಗೋಡೆಯ ಮೇಲಿರುವುದು ತನ್ನದೇ ಛಾಯೆ ಎಂದು ಅರಿವಾದರೂ ಅದು ಭಯಾನಕವಾಗಿ ಕಾಣುತ್ತಿತ್ತು. ಆಗಲೇ ಕೇಳಿತು ಗೆಜ್ಜೆಯ ಸದ್ದು, ಹಿಂದೆ ಯಾರೋ ಕಿರಿಚಿದಂತೆ.. ಅದರ ನಂತರ ಅಟ್ಟಹಾಸ, ಪ್ರತಿ ಘಳಿಗೆಯೂ ಬದಲಾಗುತ್ತಿದ್ದ ರೂಪಗಳು ಅವನ ಮೈ ನರಗಳನ್ನೆಲ್ಲಾ ಅಮುಕಿ ಬಿಡುತ್ತಿದ್ದವು. ಮಲಗಬೇಕೆಂದುಕೊಂಡರೂ ನಿದ್ದೆಯೂ ಅವನ ಸನಿಹಕ್ಕೆ ಸುಳಿಯಲಿಲ್ಲ. ಬೆದರುತ್ತಾ ಬೆದರುತ್ತಾ ಕುಚೇಲ ಅಳತೊಡಗಿದ. ಮನೆ ಬಿಟ್ಟು ಹೊರಗೋಡಿದ. ಕತ್ತಲ ರಾತ್ರಿ, ಎಲ್ಲೆಲ್ಲೋ ಹೋದ. ಹೋದಲ್ಲೆಲ್ಲಾ ಅವನಿಗೆ ಅದೇ ಅನುಭವಗಳು ಆಗತೊಡಗಿದವು.      

-೬-
ರಾತ್ರಿಯಿಡೀ ನಿದ್ದೆಯಿರದೆ ಕುಚೇಲನ ಕಣ್ಣುಗಳು ಕೆಂಪಡರಿದ್ದವು. ತಲೆ ತುರಿಸಿ ಕೂದಲು ಕೆದರಿ ಹೋಗಿತ್ತು. ಬಟ್ಟೆಯಲ್ಲಾ ಮಣ್ಣು ಅದರ ಮೇಲೆ ಮೈಯಿಂದ ಸಾರಾಯಿ ಮಿಶ್ರಿತ ವಿಚಿತ್ರ ವಾಸನೆ. ಕೋದಂಡ ಕುಚೇಲನ ಮನೆಗೆ ಹೊರಟಿದ್ದವ ಶೆಣೈ ಮಾಸ್ತರ ಅಂಗಡಿಯಲ್ಲಿ ಎಳನೀರು ಕುಡಿಯುತ್ತಿದ್ದ. ಕಾರ್ಕಳದಿಂದ ಪುನಾರಿಗೆ ಬರಬೇಕೆಂದರೆ ಉರಿಗೆ ಜೀವ ಅರ್ಧವಾಗಿರುತ್ತದೆ. ಏನೆಂದರೂ ವಿಚಾರಣೆಗೆ ಹೋಗುವುದಲ್ಲ ಎಂದು ಶೆಣೈ ಮಾಸ್ತರ ಬಳಿ ಹೇಳುತ್ತಿದ್ದಂತೆ ಕುಚೇಲ ಓಡೋಡಿ ಬಂದ.
’ಮಾಸ್ಟ್ರೇ.. ಅವಳಿಗೆ ಹೇಳಿ ನನ್ನ ಬೆನ್ನ ಹಿಂದೆ ಬರೋದು ಬೇಡಾಂತ. ಇನ್ಸ್ ಪೆಕ್ಟ್ರೇ.. ನೀವಾದ್ರೂ ಹೇಳಿ’ ಇದ್ದಕ್ಕಿದ್ದಂತೆ ಒಕ್ಕರಿಸಿದ ಈ ದೃಶ್ಯದಿಂದ ಮಾಸ್ತರಿಗೂ, ಕೋದಂಡನಿಗೂ ಮಾತುಗಳೇ ಹೊರಡಲಿಲ್ಲ. ’ಅಯ್ಯೋ.. ಯಾರಾದ್ರೂ ನನ್ನ ಕಾಪಾಡಿ.. ನೀನ್ಯಾಕೆ ನನ್ನ ಬೆನ್ನ ಹಿಂದೆ ಬಿದ್ದಿದ್ದಿ.. ಪ್ರಾಣ ತೆಕ್ಕೋಳ್ತೀಯಾ ತೆಗೋ. ಆದ್ರೆ ಬೆನ್ ಹಿಂದೆ ಬರ್ಬೇಡ’ ಅಳುತ್ತಿದ್ದ ಕುಚೇಲ ಒಮ್ಮೆಲೆ ನಿಂತ. ಮೆಲ್ಲನೆ ಬಗ್ಗಿ ಬೆಣಚು ಕಲ್ಲುಗಳನ್ನು ಎತ್ತಿಕೊಂಡ. ಒಮ್ಮೆಯೇ ಹಿಂದೆ ಎಸೆಯತೊಡಗಿದ. ಒಂದು ಕಲ್ಲಿಂದ ಕೋದಂಡ ತಪ್ಪಿಸಿಕೊಂಡರೂ ಉಳಿದ ಕಲ್ಲುಗಳಿಂದ ಮಾಸ್ತರ ಅಂಗಡಿಯ ಗಾಜುಗಳು ಉಳಿಯಲಿಲ್ಲ. "ಏ.. ನಿಲ್ಲೋ ಅಲ್ಲಿ, ರಾಸ್ಕಲ್’  ಸಿಟ್ಟಿನಿಂದ ಕೋದಂಡ ಹೇಳಿದ. ಕುಚೇಲ ಇನ್ನೂ ಮುಂದೆ ಹೋಗಿ, "ನಾನು ನಿನ್ನ ಕೊಲೆ ಮಾಡಿಲ್ಲ.. ಬೇಕೂಂತ ಮಾಡಿಲ್ಲ" ಎಂದು ಬೊಬ್ಬೆಯಿಡುತ್ತಾ ಮಾಸ್ತರು ಮತ್ತು ಕೋದಂಡ ನೋಡುತ್ತಿರುವಂತೆಯೇ ಓಡತೊಡಗಿದ.. ಓಡುತ್ತಲೇ ಇದ್ದ.  

[ಪಿ.ಯು.ಸಿಯಲ್ಲಿದ್ದಾಗ ಬರೆದಿದ್ದ ಕಥೆ. ಇದು ಮೂರನೇ ವರ್ಶನ್ :)]