ತಾರೆಗಳೊಡನೆ ಮಾತಾಡುವೆನು 

ಹೇಳುವೆನು ಅವರಿಗೆ 

ಯಾರಿಗೂ ತಿಳಿಸದ ರಹಸ್ಯಗಳನು
 
ಚಂದಿರನ ನೋಡಿ ನಸುನಗುವೆನು
ಅವನ ಮುಖ ನೋಡಿದಂತಾಗಿ
ನಸುನಾಚುವೆನು  
 
ಕೆಂಪೇರಿದ ಮುಖವ ನೋಡಿ 
ಮುಸ್ಸಂಜೆಯ ಮುಗಿಲುಗಳು 
ಪರಿಹಾಸ್ಯವ ಮಾಡುವವು 
 
ಹುಸಿ ಕೋಪಗೊಂಡು ಮುಂಗುರುಳಿನಲಿ
ಆಡುವೆನು; ಮತ್ತದೇನೋ ನೆನಪಾಗಿ 
ಮಂದಹಾಸ ಬೀರುವೆನು 
 
ಕನಸಿನಲಿ ಬರುವ 
ಅವನ ಸುಂದರ ಮುಖವ
ನೋಡಲು ಕಾಯುತಿರುವೆನು 
 
ಈ ಮುಸ್ಸಂಜೆಯಲಿ, 
ಬದುಕಿನ ಸುಂದರ 
ಕನಸುಗಳ ಹೆಣೆಯುತಿರುವೆನು 


ನನ್ನ ಕನಸುಗಳಲ್ಲಿ ರಂಗನು
ತುಂಬುವ ಕುಂಚವನು 
ಅವನಿಗೇ ಕೊಟ್ಟಿರುವೆನು


ಅವನು ಬಿಡಿಸುವ ಮನೋಹರ ಚಿತ್ರಕೆ 
ಭಾವವ ನಾನೇ ತುಂಬುವೆನು 
ಅವನಿಗೇ ಅರ್ಪಣೆ ಮಾಡುವೆನು !!!


- ಪ್ರಮಿತ