ಪಿಸುಮಾತಿನಲಿ ಇಂಪಾದೊಂದು
ದನಿಯಲಿ ವಚನವನಿತ್ತಿದ್ದೆ
ಅಗಲದೆ ಇರುವೆನು ಇನ್ನೆಂದೆಂದೂ
ಯುಗಯುಗಗಳೂ ನಿನ್ನ ಜೊತೆಗಿರುವೆ
ಉಲ್ಲಾಸದ ಉತ್ಸಾಹದ ಭಾವವು
ನನ್ನನು ಆವರಿಸಿತ್ತಾ ವೇಳೆ
ನಿನ್ನ ಸ್ಪರ್ಶದಲೇ ಮೂಲೋಕವನ್ನೂ
ಅನುಭವಿಸಿದ್ದೆನು ಆ ವೇಳೆ
ಉದ್ಯಾನದ ಸೌಂದರ್ಯಕೆ ಸೋತೆ
ಹೂಗಳನೆಲ್ಲವನೆತ್ತಿಟ್ಟೆ
ಆರಾಧನೆಗಾಗಿಟ್ಟವನ್ನೆಲ್ಲಾ
ಎದ್ದಿರೆ ಕಣ್ಮುಂದೆ ಕಾಣದಾದೆ
ಕಂಪನು ಪಸರಿಸಿ ಮೂಲೋಕದಲೂ
ಮಾಯವೇ ಆದುವು ಹೂವುಗಳು
ಎಂದೂ ಸಾಯದು ಮನಸ್ಸಿನ ಭಾವ
ನನ್ನದೇ ಆದೊಂದು ಲೋಕದೊಳು
ನೀನಿಲ್ಲದೆ ಮನ ಬರಿಬರಿದಾಯಿತು
ತಾರೆಗಳಿಲ್ಲದ ಆಗಸದಂತೆ
ಕಾರಣವರಿತೂ ಅರಿಯದ ಹಾಗೆ
ಕಾಲವ ಕಾಯುತ್ತ ನಿರುಕಿಸಿದೆ
ಏನನು ಮಾಡಲಿ ನಾನೀ ಹೊತ್ತು
ಎನ್ನುತ ಯೋಚಿಸಿ ಮೂಹೊತ್ತು
ನಾನೇ ನನ್ನನು ಕಳೆದುಕೊಂಡಿರಲು
ಗಾಯದ ಬರೆಗಳು ಮಾಸದೆ ಇರಲು
ಪಯಣವ ಬೆಳೆಸಿದೆ ಕಡಲಿನ ಕಡೆಗೆ
ನೆನಪಿನ ಮೂಟೆಯ ಹೊತ್ತೊಯ್ದೆ
ಕಣ್ಣಿನ ಹನಿಯನು ಸುರಿಯಲು ಬಿಟ್ಟು
ಕಡಲಿನ ಆಳವನಳೆಯಲು ಯತ್ನಿಸಿದೆ
ಏಕಾಂಗಿತನ ಕಾಡುತಲಿರಲು
ಪ್ರಣಯದ ಭಾರವು ಇಳಿಯದಿರೆ
ಕನವರಿಕೆಯಲಿ ದಿನಗಳ ಕಳೆದೆ
ಬದುಕಿನ ಪುಟಗಳ ಮರೆಯಲು ಯತ್ನಿಸಿದೆ
ಕಾರಣವನು ನೀನೂ ಅರಿಯೆ
ಕಾಣದೆ ಕಾಲದ ಗತಿಯನ್ನೂ
ಈ ಪಯಣವ ನೀನೂ ಅರಿಯೆ
ಪಯಣದೆ ಕ್ರಮಿಸಿದ ದೂರವನ್ನೂ
ನಿನ್ನಂದವನೂ ಮೀರಿಸುವಂಥ
ಚೆಲುವಿನ ಬೊಂಬೆಯ ನಾ ಕಂಡೆ
ಬೆಳುದಿಂಗಳನ್ನೇ ಮೊಗೆಮೊಗೆದೀವ
ಚೆಲುವನು ಹುಣ್ಣಿಮೆ ಇರುಳಿನೊಳು
ಬತ್ತಿದ ಸಾರಕೆ ಹೊಸದನು ಊಡಿಸಿ
ಹೊಸ ದೊಂದಿಯ ಹೊತ್ತಿಸುವಂಥ
ಇಂದಿನವರೆಗೂ ಕಾಣದಿದ್ದಂಥ
ಪ್ರಣಯದ ಸೆಲೆಯನು ನಾ ಕಂಡೆ
ಕೊನೆಯಿರದಂಥ ಪ್ರೇಮವೊಂದಿರದು
ಎನ್ನುವ ಕಲ್ಪನೆ ಕೊನೆಯಾಯ್ತು
ಕಡಲಿನ ಆಳವು ಎಣಿಕೆಗೆ ಸಿಗದು
ಎಂಬುದು ಕೊನೆಗೂ ಅರಿವಾಯ್ತು
ಪಯಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!