ಬೆಂಗಳೂರಿನಲ್ಲಿ ಕಳೆದ ವಾರ ನಡೆದ ಡಾ.ರಾ.ಗಣೇಶರ ಶತಾವಧಾನ ನೋಡಿದ ನಂತರ ಮನದಲ್ಲಿ ಮೂಡಿ ಬಂದೆರಡು ಪದ್ಯಗಳು:
ಚೆಲ್ಲಿರಲು ಹೂವುಗಳು ಆಗಸದಿ ಭರದಿಂದ
ಮಲ್ಲೆ ಸಂಪಿಗೆ ಜಾಜಿ ಪಾರಿಜಾತಗಳು
ಸೊಲ್ಲ ಹೆಣ್ಣೇ ಬುವಿಗೆ ರಾಗ ರೂಪವನು ತಾ
-ಳಿಲ್ಲಿ ಬಂದಿಹಳೆಂಬ ಬೆರಗು ತರಿಸಿ!
(ಅವಧಾನ ಮುಗಿದ ನಂತರ ಹೂಮಳೆ ಸುರಿದಾಗ , ಮನಸಿನಲ್ಲಿ ಮೂಡಿದ ಭಾವವಿದು)
ಮದ್ಯಪಾನಕು ಪದ್ಯಪಾನಕು ಭೇದವೊಂದೇ ಅಕ್ಕರ
ವಿದ್ಯಮಾನವ ಕೇಳಿರೈ ಬಲು ವೈಪರೀತ್ಯವು ನಿಚ್ಚಳ
ಮದ್ಯಪಾನವ ಮಾಡಿದರೆ ನಶೆಯಿಳಿವುದೊಂದೇ ಹೊತ್ತಿಗೆ
ಪದ್ಯಪಾನಕೆ ತೊಡಗಿಬಿಟ್ಟರೆ ಕೊನೆಯೆಕಾಣದು ಮತ್ತಿಗೆ !
-ಹಂಸಾನಂದಿ
ಕೊ: ರಾಗ: ರಾ.ಗಣೇಶ್ ; ಸೊಲ್ಲ ಹೆಣ್ = ಮಾತಿನ ದೇವತೆ, ನುಡಿದೇವಿ, ಸರಸ್ವತಿ
ಕೊ.ಕೊ: ಶತಾವಧಾನ ಆದಮೇಲೆ, ಅದನ್ನು ಆಯೋಜಿಸಿದ ಪದ್ಯಪಾನ http://www.padyapaana.com/ ಹಲವರಿಗೆ ಹೊಸದಾಗಿ ಪರಿಚಿತವಾಗಿದ್ದರಿಂದ, ಮರುದಿನ ಆ ವೆಬ್ ಸೈಟ್ ನ ಸರ್ವರ್ ಬಂದ ಜನರ ಪ್ರವಾಹವನ್ನು ತಡೆಯಲಾಗದೇ ತೊಂದರೆಗೊಳಗಾಗಿತ್ತು. ಆಮೇಲೆ ಸರಿಪಡಿಸಿದ್ದಾರೆನ್ನಿ.. ಆ ಸಂದರ್ಭದಲ್ಲಿ ಹೊಳೆದ ಪದ್ಯವಿದು.
ಪ್ರತಿಕ್ರಿಯೆ (3)