ಮನೆಗೆ ಬಂದ ಚಿಟ್ಟೆಗಳು ವಿಳಾಸ ಹುಡುಕುತ್ತಾ ಹಾರಿಹೋದವು ಸಾಕಿ
ಕಳೆ ಬೆಳೆದ ಅಂಗಳವ ಕಂಡು ಮಿಡುಕುತ್ತಾ ಹಾರಿಹೋದವು ಸಾಕಿ.
ಬಿಕ್ಕುತ್ತಾ ಅಲೆಯುತ್ತವೆ ಖಾಲಿ ಮನದ ಕನಸುಗಳು ನೆನಪಲಿ
ಅದೆಷ್ಟೋ ನೆಲಕಚ್ಚಿದ ಹನಿಗಳು ಕೆದಕುತ್ತಾ ಹಾರಿಹೋದವು ಸಾಕಿ.
ಈ ಮಣ್ಣಲ್ಲಿ ನೀನಾಡಿ ಬೆಳೆದ ಹೆಜ್ಜೆಗಳು ಬೆಳೆದಿವೆ ನನ್ನೊಂದಿಗೆ
ಬದಲಾದ ವಿಳಾಸಕ್ಕೆ ಪತಂಗಗಳು ತಡಕುತ್ತಾ ಹಾರಿಹೋದವು ಸಾಕಿ.
ಗೂಡಿಗೊಂದು ನೆಲೆಯನ್ನರಸುತ್ತಾ ಹೊರಟ ಅವಶ್ಯಕತೆಗಳಿದ್ದವು
ನಂಬಿಕೆಯ ಕೊರಗಿಂದ ಒಲವುಗಳು ದುಡುಕುತ್ತಾ ಹಾರಿಹೋದವು ಸಾಕಿ.
ನಿನ್ನ ಬಯಕೆಗಳ ಹೊಸೆಯಲು ರುಣವಿರಲಿಲ್ಲ ಅಂದುಕೊಂಡು ಸುಮ್ಮನಿರುವೆ
ನಿನ್ನ ಮನೆಬಾಗಿಲಿಗೆನ್ನ ನಿಟ್ಟುಸಿರುಗಳು ಎಡತಾಕುತ್ತಾ ಹಾರಿಹೋದವು ಸಾಕಿ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!