ಭುವಿಯ ಜೀವ ಸಂಕುಲಕ್ಕೆ

ಹರುಷ ಧಾರೆ ಎರೆಯುವಂತೆ

ವರ್ಷವಾಗಲಿ,

ಬದುಕು ಹರ್ಷವಾಗಲಿ


ಚಳಿಯ ಗಾಳಿ ತಣ್ಣಗಾಗಿ

ಬಿಸಿಲ ಬೇಗೆ ಹೊಸಿಲು ದಾಟಿ

ಕೋಟಿ ಹನಿಯು ಒಂದುಗೂಡಿ

ವರುಣರಾಗ ಹಾಡುವಂಥಾ

ವರ್ಷವಾಗಲಿ,

ಬದುಕು ಹರ್ಷವಾಗಲಿ


ತುಳುಕಿ,ಬಳುಕಿ,ನಾಟ್ಯವಾಡಿ

ಜೀವನದಿಯು ಹರಿಯಲಿ

ಕೊಳೆಯ ತೊಳೆದುಕೊಂಡ ಭೂಮಿ

ಹಸಿರ ಸೀರೆ ಧರಿಸಲಿ

ವರ್ಷವಾಗಲಿ,

ಬದುಕು ಹರ್ಷವಾಗಲಿ


ಕಪ್ಪುಮೋಡ,ಮಿಂಚು,ಗುಡುಗು

ನಡುವೆ ಕುಳಿರ್ಗಾಳಿಯು

ಚಿಟಕು ಪಟಕು ತಾಳದಲ್ಲಿ

ಧರಣಿ ಗರ್ಭ ಧರಿಸಲಿ

ವರ್ಷವಾಗಲಿ,

ಬದುಕು ಹರ್ಷವಾಗಲಿ


ಬಿಸಿಲಗವಿಯ ಒಳಗೆ ಇದ್ದ

ಕವಿಯು ರವಿಯ ನೋಡಲಿ

ಸೂರ್ಯಕಿರಣ ಮಳೆಯ ತೂರಿ

ಸಪ್ತವರ್ಣ ಬಾಗಲಿ

ವರ್ಷವಾಗಲಿ,

ಬದುಕು ಹರ್ಷವಾಗಲಿ



ತಾಯಿ ಅಮೃತಧಾರೆಯಿಂದ

ಮಗುವ ಹಸಿವು ಹಿಂಗಲಿ

ಕಾವ್ಯ ವರ್ಷಧಾರೆಯಿಂದ

ಕವಿಯ ಕೃಷಿಯು ಚಿಗುರಲಿ

ವರ್ಷವಾಗಲಿ,

ಬದುಕು ಹರ್ಷವಾಗಲಿ