ಹಳೆಯ ಬಟ್ಟೆಯ ಕಳಚುವೆನು, ಆಗಿದೆ ಬಲು ಭಾರ
ಬೆವರಿನಿಂದ ತೊಯ್ದಿದೆ, ಧೂಳಿನಿಂದ ಕೂಡಿದೆ
ಆದರೂ ಕಳಚುವ ಮೊದಲು ನೂರು ಬಾರಿ ಯೋಚಿಸುತ್ತೇನೆ
"ಹೊಸದೊಂದು ಬಟ್ಟೆಯು ನನ್ನ ಅಳತೆಗಿದೆಯೇ?!"
ಎಂಬ ಅನುಮಾನ.....ಭಯ ಕಾಡುತ್ತದೆ
ಹಳೆಯದನ್ನು ಸಾಬೂನಿನಿಂದ ತಿಕ್ಕಬೇಕೆಂದರೂ
ನೀರಿಲ್ಲ......ಸಿಕ್ಕರೂ ಗಡಸು
ಬಾರದು ನೊರೆ, ತೊಳೆಯದು ಕೊಳೆ
ನೀರೊಳಗದ್ದಿದ್ದೇ ಒಂದು ಸಾಧನೆ
ಹೊಲಸು ತೊಲಗಿತೆಂಬ ಭಾವನೆ
ಜೋರಾಗೊಮ್ಮೆ ಝಾಡಿಸಲು ಉದುರುವ ತುಂತುರು ಹನಿಗಳು
ಗಾಳಿಯ ಜೊತೆಗೂಡಿ ಮೈ ಮುತ್ತಿಕ್ಕಿದರೆ
ಗೊಮ್ಮಟನಂತಿರುವ ದೇಹ ಒಂದರೆಕ್ಷಣ "ಝುಂ"
ಬಿಸಿಲಿಗೆ ಒಡ್ಡುವೆ ಮೈಯ್ಯನ್ನು
ಅದರೊಂದಿಗೇ ಒಣಗಿಸುವೆನು ಹಿಂಡಿದ ಬಟ್ಟೆಯನ್ನು
ಅಲ್ಲಿಯವರೆಗೂ ನಾನು "........." ಹಾಗೆಯೇ
ನಗುತ್ತಾರೆ ನನ್ನ ನೋಡಿ
ಮುಖ ಸಿಂಡರಿಸುತ್ತಾರೆ ಏನೆಲ್ಲವನ್ನು ನೋಡಿ
ನಗುವವರು ತಂದು ಕೊಡುತ್ತಾರೆಯೇ?
ಸಿಂಡರಿಸುವವರು ನನ್ನ ಮೈ ಮುಚ್ಚುತ್ತಾರೆಯೇ?
ನೀರಿನ ಕೊಳದಿಂದ ಹಾಗೆಯೇ ಬಂದಿದ್ದ ಆರ್ಕಿಮಿಡಿಸ್
ಅವನೊಬ್ಬ ಮಹಾನ ವಿಜ್ಞಾನಿಯಾದ
ಎಲ್ಲವನ್ನೂ ತೊರೆದು ನಿಂತ ಬಾಹುಬಲಿ
ವಿಖ್ಯಾತ ಗೊಮ್ಮಟನಾದ
ಹೊಸ ಬಟ್ಟೆ ಬರುವವರೆಗೂ ಹಳೆಯದನ್ನೇ ತೊಡುವೆ
ಹಳೆಯದನ್ನು ತೊಳೆದು ಒಣಗಿಸುವವರೆಗೂ ಹಾಗೆಯೇ ಇರುವೆ
ಬತ್ತಲೆಯ ಕುರಿತು ಎನಗಿಲ್ಲ ಚಿಂತೆ
ತಾಯಿಯ ಒಡಲಿನಿಂದ ಹೊರಬಂದಿದ್ದೂ
ಮತ್ತು
ಕೊನೆಗೊಮ್ಮೆ ಹೋಗುವುದೂ ಹಾಗೆಯೇ ಅಲ್ಲವೇ?
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!