ಮುಸುಕೊಳಗೆ ಕಣ್ ಬಿಟ್ಟು 

ಮಲಗಿದ್ದೇನೆ, ಕನಸಿನಲಿ ನೀ 

ಬಂದಾಗ ತಬ್ಬಿ ಮುದ್ದಾಡುವ ಎಂದು. 

ಸನಿಹ ಬಾರೇ ಸಂಗಾತಿ - ಸೋತುಹೋಗಿದ್ದೇನೆ.

ಹಸಿ ಹಸಿ ಪ್ರೀತಿಯ ಚಿಗುರ ಚಿವುಟಿ 

ಮರೆತುಬಿಡು ಎಂದೆಯಲ್ಲಾ? ಮರೆತರೂ ಮರೆತ 

ನೆನಪು ಮರೆತಿದ್ದನ್ನು ನೆನಪಿಸುವುದಿಲ್ಲವೇನೆ 

ವಂಚಿಸಬೇಡ; ನಿನ್ನ ಮಿನುಗು ಕಂಗಳಿಗೆ ಸೋತುಹೋಗಿದ್ದೇನೆ.

ಬಾಳಿದ ಬಾಳು ನೀರಸವೆನಿಸಿದರೆ 

ಬಾಳಲಿರುವ ಬಾಳಿನ ಗತಿಯೇನೆ ಗೆಳತಿ?

ನನ್ನೊಡಲ ನೂಕಿ ದೂರಾಗಬೇಡ, 

ನಿನ್ನೊಲವ ಬಲೆಯಲಿ ಸೋತುಹೋಗಿದ್ದೇನೆ.

ಕನಸೆಲ್ಲ ಕಮರಿ, ಸೊಗಸೆಲ್ಲ ಸೊರಗಿ 

ಬದುಕು ಬರಡಾಗೊ ಹಾದಿಯಲ್ಲಿ ಒಸರಾಗಿ ನಿಂತಿವೆ 

ನಿನ್ನ ಸವಿನೆನಪುಗಳ ಕಂತೆ. ಅವುಗಳನೆ ಹೊದ್ದು ಮಲಗಿರುವೆ, 

ಮತ್ತೆ ಬಂದು ಕಾಡಬೇಡ; ಸೋತುಹೋಗುತ್ತೇನೆ.