ಮಾಳಿಗಿ ಮ್ಯಾಲ ಕುಂತು

“ಕಾವ್ ಕಾವ್” ಅಂತ ಒದರ್ತಿತ್ತು ಒಂದ ಕಾಗಿ

ಈಗ ಹೋಗ್ತದೇನ,ಆಗ ಹೋಗ್ತದೇನಂದ್ರ

ಹೋಗವಲ್ತು ಕರೀ ಕಾಗಿ,

ಹಂಗೇ ಒಂದೇ ಸವನಿ ಕಿರಿಕಿರಿ ಅದರ್ದು,

ಹುಶ್ ಅಂದ್ರ ಆ ಕುಂಬಿ,

ಹಳ್ಳಾ ಒಗದರ ಈ ಕುಂಬಿ,

ಹಾರವಲ್ತು..ಹೋಗವಲ್ತು

“ಸುಮ್ನ ನನ್ನ ತಲಿ ಯಾಕ ತಿಂತ್ಯೊ ಕಾಗಣ್ಣ ?

ಜಲ್ದಿ ಹೋಗೋ,ಈಗರೇ ನಂಗ ಮೂಡ್ ಬಂದೈತಿ”

“ಎಷ್ಟರೇ ಹೈರಾಣ ಆಗ್ತಿಯಪಾ,

ಯಾ ಹುಡಿಗಿನ ನೋಡಿ ಬಂದ್ಹೇಳ,

ಯಾ ಕೋಗಿಲೆ ಹಾಡೂದ ಕೇಳಿದ್ದಿ ಹೇಳ,

ಯಾ ನದೀದು ಜುಳು ಜುಳು ಹರಿವು ಕಿವ್ಯಾಗ ಬಿತ್ತು,

ಯಾ ಕಾಡಿನ್ಯಾಗ ಅಡ್ಡ್ಯಾಡಿ ಗುಡ್ಡಾ ಏರಿ ಹೇಳ,

ಎಂಥಾ ಮೂಡ್‍ರೇ ನಿಂಗ ಬಂದೈತಿ ಅದರೇ ಹೇಳ ?”

“ನಿನ್ನ ಸವಾಲಿಗಿ ಉತ್ತರಾ ಕೊಡ್ಲಿಕ್ಕಿ

ನಂಬಲ್ಲಿ ಟೈಮಿಲ್ಲಾ, ಹಂಗೇ ಮನಸ್ಸಿಲ್ಲಾ,

ಈಗ ಇದ್ದ ಮೂಡ್ ಮುಂದಿರಂಗಿಲ್ಲ,

ನಿನ್ಹಂಗ ನಾ ಖಾಲಿ ಕುಂತಿಲ್ಲ,

ನಂಗ ಇನಾ ಭಾಷಣಾ ಬರೆಯೋದದ”

“ಎಲ್ಲಿ ಹೋಗಿ ಏನ ಉದ್ಘಾಟನಾ ಮಾಡಂವಿದ್ದಿ?

ಮದಲ ಛಂದಂಗೆ ಗಡ್ಡಾ ಬೋಳಸಗೋ,

ಮೈ ಮ್ಯಾಲಿನ ಹೊಲಸ ಅರಿವಿ ಹಸನ ಮಾಡಕೋ,

ಜಳಕಾ ಮಾಡ್ತ್ಯೋ…ಇಲ್ಲಾ ಹಂಗೇ ಹೋಗ್ತ್ಯೋ!”

“ಏ ಈಗರೇ ಕೋಗಿಲೆ ಹಾಡಿ ಹೋಯ್ತು,

ಗುಲಾಬಿ ಹೂ ಅರಳಿ ನಕ್ತು,

ಅದರ್ದೇ ಮೂಡ್‍ನ್ಯಾಗ ಕುಂತು

ಒಂದ ಪದ್ಯಾ ಬರೀಬೇಕಂದ್ರ,

ಕವಿಗೋಷ್ಠಿಗೆ ಹೋಗಿ ಉದ್ಘಾಟನಾ ಮಾಡಿ

ಅಧ್ಯಕ್ಷ ಭಾಷಣಾ ಮಾಡ್ಬೇಕಂದ್ರ,

ನಿಂದೊಳ್ಳೆ ಕಿರಿಕಿರಿ ಆಯ್ತಲ್ಲೋ ಮಾರಾಯಾ”

“ಅವೇ ನೋಡಿ..ಅದೇ ಬರ್ದು

ಮಂದಿ ತಲಿ ಯಾಕರೇ ಕೊರಿತ್ಯೋ,

ನಂಗ ನೋಡ....ನನ್ನ ಬಣ್ಣಾ ನೋಡ,

ಹಂದಿ ತನ್ನ ಮರಿ ಜೋಡಿ ಮಾಡು ಪ್ರೀತಿ ನೋಡ,

ರಾತ್ರಿ ಗೂಗಿ ಒದರೂದು ನೋಡ,

ಹೆಣ್ಣಾಳ ಕೂಲಿ ಮಾಡ್ಕೋಂತೆ ಕೂಸಿಗಿ ಹಾಲ ಕುಡ್ಸುದು ನೋಡ,

ಹೊಸಾ ಮೂಡ್ ತಗೋಂಡ ಬಾ..ಹೋಗ ಒಳಗ,

ಹೊಸಾ ಪದ್ಯಾ ಬರಕೊಂಡ ಬಾ,

ಹೌದಂತೀನಿ ಆಗ ನೀನು ಒಬ್ಬ ಕವಿ ಅಂತ.

ಚಿತ್ರ ಕೃಪೆ: ಗೂಗಲ್ ಇಮೇಜ‌