ಇನ್ನಿರುಳು ಕಳೆದು

ನಮಗಾಗಿ ಮುಂಜಾವು

ಬಂದೀತೆಂಬ ಭರವಸೆಯ ಬೆಳಕು..

 

ಉರಿಸಿಟ್ಟ ದೀಪ

ನಾಳೆಗಳ ಸೀಳಿ

ಉರಿದೀತೆಂಬ ಭರವಸೆಯ ಬೆಳಕು..

 

ಸೂರ್ಯನೊಡಲು

ಅನುದಿನವು ದಹಿಸಿ

ಲೋಕವೆಲ್ಲ ಬೆಳಗೀತೆಂಬ ಭರವಸೆಯ ಬೆಳಕು..

 

ಕಾದಿರುಳ ಕಾಡಿನಲಿ  

ಹುಣ್ಣಿಮೆಯ ಹೊನಲು

ಹರಿದೀತೆಂಬ ಭರವಸೆಯ ಬೆಳಕು..

 

ತೊಟ್ಟಿಲ ಕಂದಮ್ಮ

ಪುಟ್ಟ ನಡೆ ಇಟ್ಟು

ಜಗವನೇ ಬೆಳಗೀತು - ಭರವಸೆಯ ಬೆಳಕು..

- ಡಿಪಿಶ್ರೀ ದೈತೋಟ