ಮಂಜಲ್ಲೇ ಮುಳುಗಿರುವ ಮುಂಜಾವಿನಲ್ಲೂ
ಸೊಂಪಾದ ಸೋನೆ ಸುರಿಯುವ ಸಂಜೆಯಲ್ಲೂ
ನಿಶ್ಶಬ್ದ ನಿಂತಿರುವ ನಡುರಾತ್ರಿಯಲ್ಲೂ
ಕಾಡುವುದು ನಿನ್ನದೇ ಮೊಗವು
ಎಳೆಬಿಸಿಲನೆರಚುತಿಹ ಉದಯರವಿಯಲ್ಲೂ
ಬಿಳಿಬೆಳಕ ಬೀರುತಿಹ ಬೆಳದಿಂಗಳಲ್ಲೂ
ನಸುನಗುತ ನಲಿಯುತಿಹ ನಕ್ಷತ್ರದಲ್ಲೂ
ಕಾಣುವುದು ನಿನ್ನದೇ ನಗುವು
ಮಳೆಯ ಮುನ್ಸೂಚನೆಯ ಮಂದ ಮಾರುತವೂ
ದುಂಬಿಗಳ ದಂಡುಗಳ ಸೆಳೆಯುತಿಹ ಹೂವೂ
ಘಮಘಮಿಪ ಅತ್ತರೂ, ಅರೆದ ಸಿರಿಗಂಧವೂ
ಸೂಸುತಿದೆ ನಿನ್ನದೇ ಕಂಪು
ಧೋ! ಎಂದು ಭರದಿಂದ ಧರೆಗಿಳಿವ ಝರಿಯಲ್ಲೂ
ದಿನಕೆ ಸ್ವಾಗತಗೈವ ಹಕ್ಕಿಯಿಂಚರದಲ್ಲೂ
ತೊದಲುತ್ತ ನುಡಿವ ಎಳೆಮಗುವಿನ ಸ್ವರದಲ್ಲೂ
ಇದೆ ನಿನ್ನ ದನಿಯದೇ ಇಂಪು
ಎದುರ ದೃಶ್ಯಗಳೆಲ್ಲ ನಿನ್ನ ನೆನಪನೆ ಬರಿಸೆ
ಮನವು ನಿನ್ನಯ ಮೊಗವ ಮರೆವ ಪರಿಯೆಂತು
ಈ ನನ್ನ ತುಡಿತಗಳನೊಮ್ಮೆ ಆಲಿಸಬೇಕು
ನೀನು ನನ್ನೆದುರಲ್ಲಿ ನಿಂದು
ನೀ ನನ್ನ ಮಾತಲಡಗಿಹ ಭಾವಗಳನರಿತು
ತುಸು ನಕ್ಕು ನಾಚುತ್ತಲೊಪ್ಪಿಗೆಯ ಕೊಡಲು
ಬಹುಕಾಲದಿಂದೆನ್ನ ಎದೆಯ ತುಂಬಿಹ ಭಾವ
ಲಹರಿಗೂ ಸಾರ್ಥಕ್ಯವಂದು
- ರಂಜಿತ್ ಭಿಡೆ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!