ಮರೆಯಲಾಗದ ದಿನಗಳ ನಾ ಬರೆಯಲಾರದೆ ಹೋದೆನು।
ನೆನಪಿನ ಗೋಪುರದೊಳು ಮನವು ಹುಡುಕಿದೆ ಮುದವನು॥
ಎದೆ ತುಂಬಿ ಹೊರಹೊಮ್ಮಿದೆ ಸುಮಧುರ ಸ್ವರಗಳ ಮಾಲೆ।
ಅದ ಜೋಡಿಸಿದರೂ ಅಪೂರ್ಣವಾಗಿದೆ ನನ್ನ ಒಲವಿನ ಕರೆಯೋಲೆ॥
ಏನ ಹೇಳಲಿ,ಏನ ಬರೆಯಲಿ ಈ ಹೃದಯದ ಚಂಚಲ।
ಹೇಗೆ ಹಂಚಲಿ ಹೇಗೆ ತಿಳಿಸಲಿ ಈ ಅಪರೂಪದ ಹಂಬಲ॥
ಕೋಗಿಲೆಯ ಇಂಚರವನ್ನಾಲಿಪದೆ, ಮಾಮರಕ್ಕೆ ಬಡಿದಿದೆ ಮೌನ।
ನಿರೀಕ್ಷೆಯ ನೆಪಮಾಡಿ ಹೊರಬೀಳಲು ಅಳುಕುತ್ತಿದೆ ಮನದಾಳದ ಸವಿಗಾನ॥
ಕಾಲದ ಅಮಲಿನಲಿ, ಅಗಲಿಕೆಯ ದಿಗಿಲಿನಲಿ ಆಂತರ್ಯದ ಮಾತುಗಳು ಕಳೆದುಹೋಗಿವೆ।
ಕಣ್ಣಂಚಲ್ಲಿ ಬಚ್ಚಿಟ್ಟು ಮರೆಯಾದ ಗುಟ್ಟುಗಳ ಬಿಚ್ಚಿಡಲು ಅನುಮತಿ ಬೇಕಾಗಿದೆ॥
ನೀರಲ್ಲಿ ಮೂಡಿದ ಹೆಜ್ಜೆಗುರುತುಗಳ ಹಿಂಬಾಲಿಸಿ ಹೊರಟೆ ನಾನು।
ಮರಳುಗಾಡಿನಲಿ ಎಲ್ಲೋ ಕಂಡ ಬಿಸಿಲ್ಗುದುರೆಯಂತೆ ಮಾಯವಾದೆಯೇನು॥
ಹುಸಿ ನಂಬಿಕೆಯು, ಹಸಿ ಹೃದಯವನು ಆ ಸವಿಸ್ವಪ್ನದತ್ತ ಕರೆದೊಯ್ಯ್ದಿದೆ।
ಆ ಕನಸಿನ ಕನಸನರಿತು ಮನವು ಸೋಲನಪ್ಪಿದೆ, ಏಕಾಂತವ ರಮಿಸಿದೆ॥
ಭಾವನೆಗಳ ಘರ್ಷಣೆಯಲಿ, ಪ್ರೀತಿದ್ಯುತಿಯು ಮಂದವಾಗಿ, ಭರವಸೆಯೊಂದು ಮಡಿದಿದೆ।
ನೆನಪುಗಳು ಸ್ಫುಟವಾಗಿ, ಪ್ರೇಮನಾದ ಕೃಶವಾಗಿ, ದುಃಖ ಒಂದೆ ಉಳಿದಿದೆ॥
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!