ಅವಳಿಗೆ ಕವಿತೆಯ ಮೇಲೆ ಸಿಟ್ಟು

ಕವಿತೆಗೆ ಅವಳ ಮೇಲೆ

ನನಗೆ ಇಬ್ಬರ ಮೇಲೂ ಪ್ರೀತಿ

ಕವಿತೆ ಜೊತೆನೇ ಇದ್ಬಿಡಿ

ನಾವ್ಯಾಕೆ ನಿಮ್ಗೆ? ನಿತ್ಯದ ದೂರು

ಅವಳದು;

ಕವಿತೆನ ಬಿಟ್ಬಿಡಿ ಇಲ್ಲಾಂದ್ರೆ

ನಿಮ್ಮನ್ನ ಬಿಡ್ಬೇಕಾದೀತು

ಎಚ್ಚರಿಕೆಯ ನುಡಿ

ಆಗಲಿ ಅದರ ಸಹವಾಸ ಸಾಕಿನ್ನು

ನನ್ನೊಲವಿನಾ ಹೂವು ನೀನು

ಇದಕ್ಕೇನೂ ಕಡಿಮೆಯಿಲ್ಲ

ಚಿನ್ನದ ಮಲ್ಲಿಗೆ ಹೂವೇ

ಬಿಡು ನೀ ಬಿಂಕವ ಚೆಲುವೆ

ಕವಿತೆ ಬಿಡಿ; ಬಿಂಕ ಬಿಡ್ತೀನಿ

ನಿನ್ನಾಣೆಗೂ ಬಿಡುವೆ

ನಿಮ್ಮಾಣೆ ವಿಷ್ಯ ಗೊತ್ತಿಲ್ವ ನಂಗೆ

......

ಅದಕ್ಕೇ ಕವಿತೆಗೆ ನನ್ಮೇಲೆ

ಮುನಿಸಾಗಿದೆ

ಪ್ರಿಯ ಕವಿತೆಯೇ ಕೇಳು

ಮರೆಯಾಗಲಿ ನಿನ್ಮುನಿಸು

ನಿನಗೊಂದು ಬೇರೆಯದೇ

ಮನೆ ಮಾಡುವೆ, ಬಿಡು ಚಿಂತೆ

ಅಂದದ್ದೇ ತಡ, ಓಡಿ ಬಂದು

ಬಿಗಿದಪ್ಪಿ ಮುದ್ದಾಡಬೇಕೆ ಕವಿತೆ