ಬಾ ಬಂದು ಬಿಡು ಓ ನನ್ನ ಕವಿತೆಯೇ
***********************************
ಕರೆಯುತಿಹೆ ಬಂದುಬಿಡು ಓ ನನ್ನ ಭಾವವೇ
ಕಾಡಿಸದೆ ಬಾ ಸನಿಹಕೆ ಓ ನನ್ನ ಜೀವವೇ
ದುಂಡುಮಲ್ಲಿಗೆಯ ದಂಡೆಯಿಡಿದು ಕಾದಿಹೆನು
ಮೆಲ್ಲ ಮೆಲ್ಲನೆ ಬಂದು ಬಿಡು ನೀ ಇಲ್ಲಿಗೆ
ಎದಿರುನೋಡುತಿಹೆನು ನೀ ಬರುವುದನೆ
ಕಾಯಿಸದೆ ನೋಯಿಸದೆ ಬಂದುಬಿಡು ಬೇಗನೆ
ಮೊಗ್ಗುಗಳೂ ಅರಳದೆ ಕಾದಿಹವು ನಿನಗಾಗಿ
ತಡಮಾಡದೆಯೆ ದಯಮಾಡಿಸು ನನ್ನೊಲವೇ
ಮರುಗಿರುವೆ ಕೊರಗಿರುವೆ ನಿನಗಾಗಿ
ತಪವ ಮಾಡಿ ಜಪವ ಮಾಡಿ ಕಾದಿಹೆನು ನಾನು
ಚಂದಿರನೂ ಕೇಳಿಹನು 'ಎಲ್ಲಿ ನೀನು' ಎಂದು
ಉತ್ತರಿಸಬೇಕಿದೆ ಬಂದು ಬಿಡು ಕೂಡಲೇ
ಪ್ರೀತಿಸಿ ಪ್ರೇಮಿಸಿ ಪೂಜಿಸುವೆ ಎಂದೆಂದೂ
ಮತ್ತೆಲ್ಲೂ ಹೋಗದಿರು ಓ ಮುದ್ದು ಹೂವೇ
ದೂರದ ಆ ತೀರಕೆ ಕರೆದ ಮೋಹ ಆವುದೋ
ಮರಳಿ ಬಂದುಬಿಡು ನೆರಳಾಗಿ ಕಾಯುವೆನು
ಕಾದ ಹೂವ ತಣಿಸಲು ಬರಲಿಲ್ಲವೇ ಆ ಜೇನು
ಭುವಿಯ ಕರೆಗೆ ಭಾರಲಿಲ್ಲವೇ ಆ ವರ್ಷಿಣಿ
ಕಾದ ಶಬರಿಗಾಗಿ ಕೊನೆಗೂ ಬರಲಿಲ್ಲವೇ ರಾಮ
ಆಗಾಗ ಹೀಗೆ ಬಂದು ಬಿಡು ಓ ಕವಿತೆಯೇ
ಹರೀಶ್ ಬಿ ಎಸ್
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!