ಸುಮಾರು ಐವತ್ತು ವರ್ಷಗಳ ಹಿಂದೆ ನಮ್ಮ ದೇಶದಲ್ಲಿ ವ್ಯವಸಾಯ ಮಾಡುತ್ತಿದ್ದುದೇ ಸಾವಯವ ಪದ್ದತಿಯಲ್ಲಿ. ಹಟ್ಟಿಗೊಬ್ಬರ, ಹಸುರೆಲೆ ಗೊಬ್ಬರ, ಬೂದಿ ಇವುಗಳಿಂದಲೇ ಹೊಲದ ಬೆಳೆಗಳಿಗೆ ಪೋಷಣೆ. ಸಸ್ಯಗಳಿಗೆ ರೋಗ ಅಥವಾ ಕೀಟ ಹಾವಳಿ ಕಂಡುಬಂದಲ್ಲಿ ಸುಣ್ಣ, ಉಪ್ಪು, ಬೂದಿ, ಔಷಧೀಯ ಸಸ್ಯಗಳ ಕಷಾಯಗಳಿಂದಲೇ ನಿಯಂತ್ರಣ. ಆದರೆ ಈಗ ಏನಾಗಿದೆ?
ಹೆಚ್ಚೆಚ್ಚು ಫಸಲು ಪಡೆದು, ಹೆಚ್ಚೆಚ್ಚು ಲಾಭ ಮಾಡಿಕೊಳ್ಳವ ಧಾವಂತದಲ್ಲಿ ಬಹುಪಾಲು ಬೇಸಾಯಗಾರರು ರಾಸಾಯನಿಕ ಪದ್ಧತಿಯಲ್ಲಿ ಬೇಸಾಯ ಮಾಡುತ್ತಿದ್ದಾರೆ. ಬೀಜಗಳನ್ನು ಅಥವಾ ಎಳೆಸಸಿಗಳನ್ನು ವಿಷ ರಾಸಾಯನಿಕಗಳ ದ್ರಾವಣದಲ್ಲಿ ಮುಳುಗಿಸುವ ಮೂಲಕ ಕೃಷಿಯ ಆರಂಭ. ಹಟ್ಟಿಗೊಬ್ಬರ ಹಾಗೂ ಹಸುರೆಲೆ ಗೊಬ್ಬರ ಹಾಕದ ಕಾರಣ ಬರಡಾದ ಮಣ್ಣಿಗೆ ರಾಸಾಯನಿಕ ಗೊಬ್ಬರಗಳ ಸೇರ್ಪಡೆ. ಬೆಳೆಗಳಿಗೆ ರೋಗ ಅಥವಾ ಕೀಟಗಳು ದಾಳಿ ಮಾಡಿದಾಗಲಂತೂ ವಿವಿಧ ರಾಸಾಯನಿಕ ಪೀಡೆನಾಶಕ ಅಥವಾ ಕೀಟನಾಶಕಗಳ ಪ್ರಯೋಗ. ಇವೆಲ್ಲ ಕೀಟಗಳ ಜೀವ ತೆಗೆಯುವಂತೆ ಮನುಷ್ಯರ ಜೀವವನ್ನೂ ತೆಗೆಯಬಲ್ಲವು ಎಂಬ ಸತ್ಯವನ್ನು ಎಲ್ಲರೂ ಮರೆತಿದ್ದಾರೆ!
ಇನ್ನೂ ಒಂದು ಆತಂಕದ ವಿಚಾರ. ಈ ಎಲ್ಲ ವಿಷ ರಾಸಾಯನಿಕಗಳಿಗೆ ಸಸ್ಯ ರೋಗಕಾರಕ ಸೂಕ್ಷ್ಮ ಜೀವಿಗಳೂ, ಕೀಟಗಳೂ ಸಡ್ಡು ಹೊಡೆದಿವೆ. ಯಾಕೆಂದರೆ ಮನುಷ್ಯರ ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ 25-30 ವರುಷಗಳ ಅಂತರ. ಆದರ ಇವುಗಳಲ್ಲಿ ಆ ಅಂತರ ಕೆಲವೇ ಗಂಟೆಗಳು ಅಥವಾ ಕೆಳವೇ ದಿನಗಳು. ತಮ್ಮ ಸಂತಾನದ ಉಳಿವಿಗಾಗಿ ಅವು ತಲೆಮಾರಿನಿಂದ ತಲೆಮಾರಿಗೆ ನಿರೋಧಕ ಶಕ್ತಿ ಹೆಚ್ಚಿಸಿಕೊಂಡ, ವಿಷ ರಾಸಾಯನಿಕಗಳಿಗೆ ಸಡ್ಡು ಹೊಡೆಯುತ್ತವೆ.
ಪರಿಣಾಮ, ಈ ಹಿಂದೆಲ್ಲ ಪ್ರಯೋಗಿಸಿದ ಪ್ರಮಾಣದಲ್ಲಿ ವಿಷರಾಸಾಯನಿಕ ಪ್ರಯೋಗಿಸಿದರೆ , ರೋಗ ಮತ್ತು ಕೀಟಹಾವಳಿ ನಿಯಂತ್ರಣಕ್ಕೆ ಬರುವುದಿಲ್ಲ ಹಾಗಾಗಿ ವರುಷದಿಂದ ವರುಷಕ್ಕೆ ಕೃಷಿಕರು ಪ್ರತಿ ಎಕರೆಗೆ ಹೆಚ್ಚೆಚ್ಚು ಪ್ರಮಾಣದಲ್ಲಿ ಪೀಡೆನಾಶಕಗಳನ್ನು ಸುರಿಯಬೇಕಾಗುತ್ತದೆ. ಅಷ್ಟೇ ಅಲ್ಲ, ಹೆಚ್ಚೆಚ್ಚು ಪ್ರಬಲ ಅಥವಾ ಶಕ್ತಿಶಾಲಿಯಾದ ವಿಷಕಾರಿ ರಾಸಾಯನಿಕಗಳನ್ನು ರೋಗ ಮತ್ತು ಕೀಟ ಹತೋಟಿಗಾಗಿ ಹೊಲ ಹಾಗೂ ತೋಟಗಳಲ್ಲಿ ಬಳಸಲೇಬೇಕಾಗುತ್ತದೆ.
ಊಟದ ಬಟ್ಟಲಿನಲ್ಲಿ ತುಂಬುತ್ತಿರುವ ವಿಷ
ಇಂತಹ ಪರಿಸ್ಥಿತಿಯಲ್ಲಿ ಗ್ರಾಹಕರಾಗಿ ನಾವು ಕೇಳಲೇ ಬೇಕಾದ ಪ್ರಶ್ನೆ ಏನೆಂದರೆ, ಸಸ್ಯಗಳಿಗೆ ಸುರಿದ ಈ ಟನ್ನುಗಟ್ಟಲೆ ವಿಷ ರಾಸಾಯನಿಕಗಳು ಅಂತಿಮವಾಗಿ ಎಲ್ಲಿಗೆ ಹೋಗುತ್ತವೆ? ಇದಕ್ಕೆ ನೇರ ಹಾಗೂ ಸರಳ ಉತ್ತರ: ಅವೆಲ್ಲವೂ ಆಹಾರ ಮೂಲಕ ನಮ್ಮ ಊಟದ ಬಟ್ಟಲಿಗೆ ಬಂದು, ನಮ್ಮ ದೇಹ ಸೇರುತ್ತವೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಈಗ ನಮ್ಮ ಊಟದ ಬಟ್ಟಲಿನಲ್ಲಿ ವಿಷ ಆಹಾರ ತುಂಬಿದೆ. ನಾವಿಂದು ಕಾಣುತ್ತಿರುವ ಕ್ಯಾನ್ಸರ್ ಇತ್ಯಾದಿ ರೋಗಗಳ ಹೆಚ್ಚಳಕ್ಕೆ, ನಮ್ಮ ರೋಗ ನಿರೋಧಕ ಶಕ್ತಿಯ ಕುಸಿತಕ್ಕೆ ಯುವಜನರ ಹಲವಾರು ಅನಾರೋಗ್ಯಗಳಿಗೆ ಈ ವಿಷಯುಕ್ತ ಆಹಾರ ಸೇವನೆಯೇ ಕಾರಣ.
ಹಾಗಾದರೆ, ಈ ಸಮಸ್ಯೆಗೆ ಏನು ಪರಿಹಾರ?
ಒಂದೇ ಒಂದು ಪರಿಹಾರವೆಂದರೆ ವಿಷಮುಕ್ತ ಆಹಾರ ಸೇವನೆ; ವಿಷಮುಕ್ತ ಆಹಾರ ಸಿಗುವುದಾದರೂ ಎಲ್ಲಿ ? ಬೆಂಗಳೂರು, ಮೈಸೂರು, ಧಾರವಾಡ ಹಾಗೂ ಇನ್ನು ಕೆಲವು ನಗರಗಳಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆಸಿದ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವ ಮಳಿಗೆಗಳಿವೆ.
ಈಗ ಮಂಗಳೂರಿನಲ್ಲೂ ಸಾವಯವ ಕೃಷಿ ಉತ್ಪನ್ನಗಳ ಮಾರಾಟಕ್ಕಾಗಿ ಒಂದು ವ್ಯವಸ್ಥೆ ಆರಂಭವಾಗಿದೆ. ೨೦೧೪ರಿಂದ ಪಂಜೆಮಂಗೇಶರಾವ್ ರಸ್ತೆಯ ಸಾಹಿತ್ಯ ಕೇಂದ್ರದ ಮುಂಭಾಗದಲ್ಲಿ ಭಾನುವಾರಗಳಲ್ಲಿ (ತಿಂಗಳ ಮೊದಲ ಭಾನುವಾರದ ಹೊರತಾಗಿ) "ಸಾವಯವ ಸಂತೆ' ಜರುಗುತ್ತಿದೆ. ನೂರಾರು ಜನ ಅಲ್ಲಿಗೆ ಬಂದು ಸಾವಯವ ಪದ್ಧತಿಯಲ್ಲಿ ಬೆಳೆದ ಅಕ್ಕಿ, ಉದ್ದು, ಹುರುಳಿ, ತರಕಾರಿಗಳು, ಹಣ್ಣುಗಳು, ಸಾಂಬಾರ ಪದಾರ್ಥಗಳನ್ನು ಖರೀದಿಸುತ್ತಿದ್ದಾರೆ.
ಸಾವಯವ ಕೃಷಿ ಉತ್ಪನ್ನಗಳನ್ನು ಬೆಳಸಿದವರೇ ಅವನ್ನು ಸಾವಯವ ತರಕಾರಿ ಸಂತೆಗಳಲ್ಲಿ ಮಾರಾಟ ಮಾಡುತ್ತಿರುವುದು ವಿಶೇಷ. ಬಳಕೆದಾರರು ಇವರೊಂದಿಗೆ ಮುಖಾಮುಖಿ ಮಾತನಾಡಿ ಎಲ್ಲ ಮಾಹಿತಿ ಪಡೆಯಲು ಮುಕ್ತ ಅವಕಾಶವಿದೆ. ಆ ಮೂಲಕ ಇಲ್ಲಿ ಮಾರಾಟವಾಗುವ ಕೃಷಿ ಉತ್ಪನ್ನಗಳೆಲ್ಲವೂ ವಿಷಮುಕ್ತ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು. ವಿಷಮುಕ್ತ ಆಹಾರ ಖರೀದಿಗಾಗಿ ಒದಗಿಸಿರುವ ಇಂತಹ ಒಳ್ಳೆಯ ಅವಕಾಶವನ್ನು ಅಗತ್ಯವಾಗಿ ಬಳಸಿಕೊಳ್ಳೋಣ - ನಮಗಾಗಿ ಮತ್ತು ನಮ್ಮ ಮನೆಯವರಿಗಾಗಿ.
-ಸಾವಯವ ಕೃಷಿಕ ಗ್ರಾಹಕ ಬಳಗ, ಸಾಹಿತ್ಯಕೇಂದ್ರ, ಪಿ.ಎಂ ರಸ್ತೆ ಮಂಗಳೂರು.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!