“ಸುಮಾರು ಮೂವತ್ತು ವರುಷಗಳ ಹಿಂದಿನ ಮಾತು. ನಾವಾಗ ಗದ್ದೆಗೆ ರಾಸಾಯನಿಕ ಗೊಬ್ರ ಹಾಕ್ತಾ ಭತ್ತ ಬೆಳೆಸ್ತಿದ್ದೆವು. ಇಳುವರಿ ಚೆನ್ನಾಗಿ ಬರ್ತಿತ್ತು. ಆಗೊಮ್ಮೆ ಮಿತ್ತಬಾಗಿಲಿನ ದೇವರಾಯರಲ್ಲಿಗೆ ಹೋಗಿದ್ದೆವು. ಅವರು ಯಾವುದೇ ರಾಸಾಯನಿಕ ಹಾಕದೆ ಭತ್ತ ಬೆಳಿತಾ ಇದ್ರು. ನಾವೂ ಯಾಕೆ ಹಾಗೆ ಭತ್ತ ಬೆಳೀಬಾರ್ದು ಅನ್ನಿಸಿತು. ಮುಂದಿನ ಹಂಗಾಮಿನಲ್ಲಿ ನಾವು ನಮ್ಮ ಜಮೀನಿಗೆ ಯಾವುದೇ ರಾಸಾಯನಿಕ ಗೊಬ್ರ ಹಾಕಲಿಲ್ಲ. ಅವತ್ತಿನಿಂದ ಇವತ್ತಿನ ವರೆಗೂ, ನಮ್ಮ ಐದೆಕ್ರೆ ಜಮೀನಿಗೆ ಒಂದಿಷ್ಟೂ ರಾಸಾಯನಿಕ ಗೊಬ್ರ ಹಾಕಿಲ್ಲ. ಸೋಗೆ, ಸೊಪ್ಪು, ಕಸಕಡ್ಡಿ, ದನದ ಸೆಗಣಿ, ಮೂತ್ರ ಮತ್ತು ಗೋಬರ್ ಗ್ಯಾಸ್ ಪ್ಲಾಂಟಿನ ಸ್ಲರಿ – ಇದೇ ನಮ್ಮ ಗದ್ದೆಗೆ ತೋಟಕ್ಕೆ ಗೊಬ್ಬರ” ಎನ್ನುತ್ತಾ ಉಷಾ ಮೆಹಂದಳೆ (೫೮) ತಮ್ಮ ಸಾವಯವ ಕೃಷಿಯ ಹಿನ್ನೆಲೆ ಹಾಗೂ ಸೂತ್ರವನ್ನು ನಮ್ಮ ಜೊತೆ ಹಂಚಿಕೊಂಡರು.
ನಾವು, ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗದ ೪೫ ಸದಸ್ಯರು, ೫ ಜೂನ್ ೨೦೧೬ರಂದು ಬೆಳ್ತಂಗಡಿ ತಾಲೂಕಿನ ತೆಂಕ – ಕಾರಂದೂರು ಗ್ರಾಮದ ಅವರ ಜಮೀನಿಗೆ ಭೇಟಿ ಇತ್ತ ಸಂದರ್ಭ. ಉಷಾ ಮೆಹಂದಳೆ ಅದೇ ಉಸಿರಿನಲ್ಲಿ ಇದನ್ನೂ ಹೇಳಿದರು: “ನಾವು ಒಂದೇಟಿಗೆ ರಾಸಾಯನಿಕ ಗೊಬ್ಬರ ಹಾಕೋದನ್ನು ನಿಲ್ಲಿಸಬಾರದಿತ್ತು. ಹಾಗೆ ಮಾಡಿದ್ದರಿಂದಾಗಿ ಮುಂದಿನ ನಾಲ್ಕು ವರುಷ ನಮಗೆ ಭತ್ತದ ಇಳುವರಿ ಅರ್ಧಕ್ಕರ್ಧ ಕಡಿಮೆಯಾಯಿತು. ಹಂತಹಂತವಾಗಿ ರಾಸಾಯನಿಕ ಗೊಬ್ರ ಕಡಿಮೆ ಮಾಡ್ತಾ ಬಂದಿದ್ದರೆ ಹೀಗಾಗ್ತಿರಲಿಲ್ಲ. ಅಷ್ಟು ಇಳುವರಿ ನಷ್ಟವಾದರೂ ನಾವು ಪುನಃ ರಾಸಾಯನಿಕ ಗೊಬ್ರ ಹಾಕಲಿಲ್ಲ. ಅನಂತರ ನಮ್ಮ ಜಮೀನು ಸಾವಯವ ಬೇಸಾಯಕ್ಕೆ ಹೊಂದಿಕೊಂಡಿತು. ಈಗ ನಮಗೆ ನಾಲ್ಕು ಎಕ್ರೆಯಿಂದ ನಲುವತ್ತು ಕ್ವಿಂಟಾಲ್ ಭತ್ತದ ಇಳುವರಿ ಬರ್ತಿದೆ”
ತೋಟದಲ್ಲಿರುವ ಮರಗಳಿಗೂ ಅವರು ಹಾಕುವುದು ಸಾವಯವ ಗೊಬ್ಬರ ಮಾತ್ರ: ಎರಡು ವರುಷಕ್ಕೊಮ್ಮೆ ಅಡಿಕೆ ಮರಗಳಿಗೆ ತಲಾ ಎರಡು ಬುಟ್ಟಿ ಮತ್ತು ತೆಂಗಿನ ಮರಗಳಿಗೆ ತಲಾ ನಾಲ್ಕು ಬುಟ್ಟಿ ಕಂಪೋಸ್ಟ್. ಆ ಮರಗಳ ಸೋಗೆಗಳು ಬೇಸಗೆಯಲ್ಲಿಯೂ ಹಚ್ಚಹಸುರು. ತೋಟದಲ್ಲಿ ಕೊಕ್ಕೋ, ಜಾಯಿಕಾಯಿ, ಲವಂಗ, ಕರಿಮೆಣಸು ಬಳ್ಳಿಗಳು ಸೊಂಪಾಗಿ ಬೆಳೆದು ನಿಂತಿವೆ. ಇವೆಲ್ಲಕ್ಕೂ ಸಾವಯವ ಗೊಬ್ಬರವೇ ಕಾರಣ ಎಂಬುದು ಉಷಾ ಮೆಹಂದಳೆ ಅವರ ಅನುಭವ.
“ಕೆಲಸಕ್ಕೆ ಆಳುಗಳಿಲ್ಲ ಅನ್ನೋ ಕಾರಣಕ್ಕಾಗಿ ನಮ್ಮ ಜಮೀನು ಮಾರಬೇಕಾಗಿಲ್ಲ. ಸಾವಯವ ಬೇಸಾಯ ಮಾಡಿದರಾಯಿತು. ಅದಕ್ಕಾಗಿ ಮಹಿಳೆಯರು ತೋಟದ ಕೆಲಸದಲ್ಲಿ ಸ್ವಲ್ಪ ತೊಡಗಿಸಿಕೊಂಡರೆ ಸಾಕು. ತೆಂಗು, ಅಡಿಕೆ ಮರಗಳಿಂದ ಬಿದ್ದ ಸೋಗೆಗಳನ್ನು ಕತ್ತರಿಸಿ ಮರಗಳ ಬುಡಕ್ಕೆ ಹಾಕುವ ಕೆಲಸ ಮಾಡಿದರೂ ಸಾಕು. ಜೊತೆಗೆ ಸಾವಯವ ಗೊಬ್ಬರ ಹಾಕುವ ವ್ಯವಸ್ಥೆ ಮಾಡಿಕೊಂಡರೆ ಸಾವಯವ ಬೇಸಾಯ ನಮ್ಮನ್ನು ಸೋಲಿಸುವುದಿಲ್ಲ. ಆದರೆ ತಾಳ್ಮೆ ಬೇಕು” ಎಂಬುದು ಅವರ ಅನುಭವದ ಮಾತು.
ಒಂದೆರಡು ದನ ಸಾಕಬೇಕು. ಮನೆಗೆ ಹಾಲು ಸಿಗೋದಲ್ಲದೆ ಆ ದನಕರುಗಳ ಸೆಗಣಿಮೂತ್ರದಿಂದ ಗೊಬ್ಬರವೂ ಸಿಗುತ್ತದೆ. ಅದು ಮೂರರಿಂದ ಐದೆಕ್ರೆ ಜಮೀನಿಗೆ ಧಾರಾಳ ಸಾಕು. ದನಗಳ ಕರುಗಳನ್ನು ಮಾರಬೇಕಾಗಿಲ್ಲ. ತೋಟದ ಹುಲ್ಲು ಹಾಕಿ ಅವನ್ನು ಸಾಕಿದರೆ, ಹಾಲು ಮತ್ತು ಗೊಬ್ಬರ ಒದಗಿಸಿ, ನಾವು ಸಾಕಲು ಮಾಡಿದ ವೆಚ್ಚವನ್ನು ಬಡ್ಡಿ ಸಹಿತ ತೀರಿಸುತ್ತವೆ ಎನ್ನುತ್ತಾರೆ ಉಷಾ ಮೆಹಂದಳೆ.
ಅವರ ಹಟ್ಟಿಯ ಪಕ್ಕದಲ್ಲೇ ಗೋಬರ್ ಗ್ಯಾಸ್ ಘಟಕ. ಅದರಿಂದ ಹರಿಯುವ ಸ್ಲರಿ ಸಂಗ್ರಹಿಸಲು ಟ್ಯಾಂಕ್. ಅಲ್ಲಿಂದ ಸ್ಲರಿಯನ್ನು ತೋಟದ ಮರಗಳಿಗೆ ಪಂಪ್ ಮಾಡುವ ವ್ಯವಸ್ಥೆಯಿದೆ. ಆ ಮರಗಳಿಗೆ ತಿಂಗಳಿಗೊಂದು ಬಕೆಟ್ ಸ್ಲರಿ ಹಾಕಿದರೂ ಧಾರಾಳ ಪೋಷಕಾಂಶ ಲಭ್ಯ. ತೆಂಗಿನ ಸಿಪ್ಪೆಗಳನ್ನು ತೆಂಗಿನ ಮರಗಳ ಬುಡದಲ್ಲೇ ಜೋಡಿಸಿ ಮಣ್ಣು ಮುಚ್ಚುವುದರಿಂದ ತೇವಾಂಶ ರಕ್ಷಣೆ ಹಾಗೂ ಮರಗಳಿಗೆ ಪೊಟಾಷ್ ಒದಗಣೆ. ಅಡಿಕೆ ಹಾಳೆ ಚೂರುಚೂರು ಮಾಡಿ ದನಗಳಿಗೆ ಆಹಾರವಾಗಿ ಬಳಕೆ. ಇಂತಹ ಸುಧಾರಿತ ವಿಧಾನಗಳ ಅಳವಡಿಕೆ ಮೆಹಂದಳೆಯವರ ಕೃಷಿಯ ವಿಶೇಷ.
ಎರಡು ದಶಕಗಳ ಮುಂಚೆ ದಕ್ಷಿಣಕನ್ನಡದ ಬೆಳ್ತಂಗಡಿ ತಾಲೂಕಿನಲ್ಲಿ ಮಹಿಳಾ ಸಬಲೀಕರಣದ ಆಂದೋಲನದಲ್ಲಿ ಮುಂಚೂಣಿಯಲ್ಲಿ ಇದ್ದವರು ಉಷಾ ಮೆಹಂದಳೆ. ಮಹಿಳಾ ಮಂಡಳಿಯ ಅಧ್ಯಕ್ಷೆಯಾಗಿದ್ದಾಗ ಬಡ ಮಹಿಳೆಯರಿಗೆ ಹೊಲಿಗೆ ತರಬೇತಿ ನಡೆಸಿ ಕೊಟ್ಟಿದ್ದು, ಗ್ರಾಮ ಪಂಚಾಯತಿನ ಸದಸ್ಯೆಯಾಗಿ ಸರಕಾರದ ಸವಲತ್ತುಗಳನ್ನು ಬಡಕುಟುಂಬಗಳಿಗೆ ಒದಗಿಸಲು ಮುತುವರ್ಜಿ ವಹಿಸಿದ್ದು – ಇವೆಲ್ಲ ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಅವರ ಹೆಸರು ಮನೆಮಾತಾಗಲು ಕಾರಣ.
ಉಷಾ ಮೆಹಂದಳೆ ಅವರದು ೩೩ ವರುಷಗಳ ಸಾವಯವ ಭತ್ತದ ಬೇಸಾಯದ ಸಾಹಸ. ಇದಕ್ಕೆ ಪತಿ ಸೀತಾರಾಮ ಮೊಹಂದಳೆ ಅವರ ನಿರಂತರ ಸಹಕಾರ. ಎರಡು ವರುಷಗಳಿಂದೀಚೆಗೆ ಮಗ ಅರುಣ್ ಅವರ ಸಹಕಾರ. ಮೆಹಂದಳೆಯವರ ಈ ಸಾಹಸದ ಕಾಯಕಕ್ಕೆ ಅವರಿಗೆ ಸಿಗುವ ಪ್ರತಿಫಲ – ಎಲ್ಲಿಂದಲೋ ಹುಡುಕಿಕೊಂಡು ಬಂದವರು ಇವರ ಹೊಲದ ಸಾವಯವದ ಅಕ್ಕಿ ಖರೀದಿಸುವಾಗ ಮೂಡುವ ಧನ್ಯತಾ ಭಾವ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!