ನಮ್ಮ ಊಟದ ಬಟ್ಟಲಿನಲ್ಲಿ ವಿಷ
2015ರಲ್ಲಿನಮ್ಮನ್ನೆಲ್ಲ ಬೆಚ್ಚಿಬೀಳಿಸಿದ ಸುದ್ದಿ:ದಿಢೀರ್ ಆಹಾರವೆಂದು ಡಂಗೂರ ಹೊಡೆದು ಕೊಳ್ಳುತ್ತಿದ್ದ ಮ್ಯಾಗಿ ನೂಡಲ್ಸ್ ದಢಾರ್ ಎಂದು ನಮ್ಮದೇಶದ ಉದ್ದಗಲದಲ್ಲಿ ನಿಷೇಧಿಸಲ್ಪಟ್ಟಿದ್ದು. ಯಾಕೆಂದರೆ ಅದರಲ್ಲಿ ಮಿತಿ ಮೀರಿದ ಪ್ರಮಾಣದಲ್ಲಿ ಸೀಸದ ವಿಷವಿತ್ತು.
ಅದರ ಉತ್ಪಾದಕ ಕಂಪನಿಯ ಮಾರಾಟ ತಂತ್ರ ಹೇಗಿತ್ತು ಅಂತೀರಾ? ಶಾಲೆಗಳಿಗೆ ನುಗ್ಗಿ ಮಕ್ಕಳಿಗೆ ಪುಕ್ಕಟೆ ಮ್ಯಾಗಿ ನೂಡಲ್ಸ್ ತಿನ್ನಿಸಿ ರುಚಿ ಹಿಡಿಸುವುದು. ಅದಲ್ಲದೆ, ಬಹುಮಾಧ್ಯಮಗಳಲ್ಲಿ ಅಬ್ಬರದ ಪ್ರಚಾರ. ಎರಡೇ ನಿಮಿಶಗಳಲ್ಲಿ ತಿನಿಸು ತಯಾರು ಎಂದು ದಾರಿತಪ್ಪಿಸುವ ಜಾಹೀರಾತು. ಅಂತೂ ದಶಕಗಳ ಕಾಲ ನಮ್ಮ ದೇಶದ ಕೋಟಿಗಟ್ಟಲೆ ಜನರಿಗೆ ವಿಷ ಉಣಿಸಿದರಲ್ಲ...
"ವಿಷಭರಿತ ಜಂಕ್ಫುಢ್" ತೊಲಗಿತು ಎಂದು ನಾವೆಲ್ಲ ನಿಟ್ಟುಸಿರು ಬಿಡುವಾಗ ಅದು ಹೊಸ ಅವತಾರದಲ್ಲಿ ಪುನಃ ಮಾರುಕಟ್ಟಗೆ ಬಂದಿದೆ. ಇದು ನಮ್ಮೆಲ್ಲರಿಗೂ ಎಚ್ಚರಿಕೆಯ ಗಂಟೆ.
ಇಂತಹ ಅಪಾಯಗಳು ಮತ್ತೆ ಮತ್ತೆ ನಮಗೆ ಎದುರಾಗುತ್ತಿವೆ. ನಾವು ತಿನ್ನುವ ಹಣ್ಣುತರಕಾರಿಧಾನ್ಯಗಳು ಎಲ್ಲದರಲ್ಲಿಯೂ ವಿಷ ಸೇರಿಕೊಳ್ಳುತ್ತಿದೆ. ನಮ್ಮ ಆಹಾರದಲ್ಲಿ ಯಾವುದು ವಿಷಭರಿತ ಮತ್ತು ಯಾವುದು ವಿಷಮುಕ್ತ ಎಂದು ಗುರುತಿಸುವುದೇ ಕಷ್ಟವಾಗುತ್ತಿದೆ.
ಇಂತಹ ಸನ್ನಿವೇಶದಲ್ಲಿ ಕರಿಮೋಡಗಳ ಮಧ್ಯೆ ಮಿಂಚುವ ಮಿಂಚಿನಂತೆ "ವಿಷಮುಕ್ತ ಊಟದ ಬಟ್ಟಲು ಆಂದೋಲನ" ಅಲ್ಲಲ್ಲಿ ಬಲಗೊಳ್ಳುತ್ತಿದೆ. ಇದರ ಜೊತೆಯಲ್ಲೇ, ವಿಷಮುಕ್ತ ಆಹಾರ ಒದಗಿಸಬಲ್ಲ ಸಾವಯವ ಕೃಷಿ ಅಲ್ಲಲ್ಲಿ ಬೇರುಬಿಡುತ್ತಿದೆ.
ಇವೆಲ್ಲವನ್ನು ದಾಖಲಿಸಬೇಕಾದ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ. ಜೊತೆಗೆ ಆಂದೋಲನವನ್ನು ಮುನ್ನಡೆಸುತ್ತಿರುವ ಸಂಘಟನೆಗಳ ನಡುವೆ ಹಾಗೂ ಸಾವಯವ ಕೃಷಿಕರ ನಡುವೆ ವಿಚಾರ ಮತ್ತು ಅನುಭವ ವಿನಿಮಯಕ್ಕಾಗಿ ವೇದಿಕೆಯೊಂದರ ನಿರ್ಮಾಣ ಆಗಬೇಕಾಗಿದೆ.
ಈ ಆಶಯಗಳನ್ನು ಸಾಕಾರಗೊಳಿಸಲು ಆನ್ಲೈನ್ ಪತ್ರಿಕೆ ಒಂದು ಸಮರ್ಥ ಮಾಧ್ಯಮ ಎಂದು ಭಾವಿಸಿದ್ದೇವೆ. ಅದಕ್ಕಾಗಿ ಚಿಗುರಿದೆ "ಸಾವಯವ ಸಂಪದ". ಮೊದಲ ಸಂಚಿಕೆ ನಿಮ್ಮ ಎದುರಿಗಿದೆ.
ನಿಮ್ಮ ಪ್ರತಿಕ್ರಿಯೆ ಹಾಗು ಸಲಹೆಗಳಿಗೆ ಸದಾ ಸ್ವಾಗತ. ವಿಷಮುಕ್ತ ಆಹಾರ ಆಂದೋಲನದಲ್ಲಿ ಹಾಗೂ ಸಾವಯವ ಕೃಷಿಯಲ್ಲಿ ಸಕ್ರಿಯರಾಗಿರುವ ಎಲ್ಲರಿಂದಲೂ ಬರಹ ಹಾಗೂ ಮಾಹಿತಿ ನಿರೀಕ್ಷಿಸುತ್ತೇವೆ.
- ಸಂಪಾದಕ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!