ಪಡುವಣದಿ ನೇಸರನ

ಆತುರ

ಧರೆಮೇಲೆ ಮಾನವನ

ಕಾತುರ

ಮನೆ ಸೇರಲು

ಮನೆ ಸೇರಲು

ಧರೆಗೆಲ್ಲ ಬೆಳಕಿತ್ತು

ಜೀವಕೋಟಿಗೆ ಬಲವಿತ್ತು

ಜಗಕೆ ತನ್ನೊಲವಿತ್ತು

ಬಸವಳಿದು ಕೆಂಪಾಗಿ

ಮನೆಯೆಡೆಗೆ ಓಡುತಿಹ

ನೇಸರನ ಛಾಯೆ...

ಆಗಸವ ತಾಕುವೊಲು

ಮೇಲ್ಮಹಡಿ ಎತ್ತರಿಸಿ

ಮೇಲ್ಹತ್ತಿ ಕೆಳಗಿಳಿದು

ಕೆಳಗಿಳಿದು ಮೇಲ್ಹತ್ತಿ

ಬಾಡಿರುವ ನೌಕರನ

ಚಿತ್ರದಾ ಮಾಯೆ...

ಬೆಳಗಾಗೆ ಭುವಿಗಿಳಿದು

ಭುವಿಯೊಳಗಿನಂಕುರಕೆ

ಕಾವೆಂಬ ಒಲವಿತ್ತು

ಹೊರತರುವ

ಗುರಿಯಿರಲು

ನೇಸರನ ಕಾತುರವ

ನಾನರಿಯಬಲ್ಲೆ...

ಬೆಳಗಾಗೆ ಬೆವರಿಳಿಸಿ

ಬೇರುಗಳ ಕಡೆಗಣಿಸಿ

ಆಗಸದ ಎತ್ತರಕೆ

ನೇಸರಗೆ ಸ್ಪರ್ಧಿಯೊಲು

ಏರುವಾ ಕಾತರವ

ಮಾನವನ ಆತುರವ

ನಾನರಿಯಲೊಲ್ಲೆ....