ಪತ್ರಕರ್ತ ಲೇಖಕ ಕೆ.ಗಣೇಶ್ ಕೋಡೂರು ಅವರ ಪುಟ್ಟ ಪುಸ್ತಕವೇ ‘ ಒನ್ ಮಿನಿಟ್ ಸಕ್ಸಸ್'. ಲೇಖಕರ ಪ್ರಕಾರ ಬದುಕಿನ ಅತಿ ದೊಡ್ಡ ಗೆಲುವನ್ನು ಆ ಕೊನೆಯ ಒಂದು ನಿಮಿಷವೇ ನಿರ್ಧರಿಸುತ್ತದೆ. ಒಂದು ನಿಮಿಷವೆಂದರೆ ಅದು ಕೇವಲ ಅರವತ್ತು ಸೆಕೆಂಡುಗಳಲ್ಲ. ಬರೀ ಅರವತ್ತು ಸೆಕೆಂಡುಗಳಲ್ಲಿ ಏನು ಮಾಡಲಿಕ್ಕೆ ಸಾಧ್ಯ ಎಂದುಕೊಂಡು ಸುಮ್ಮನುಳಿದು ಬಿಟ್ಟಿರೋ, ಅದೇ ಸಮಯ ನಿಮ್ಮ ಬಳಿ ಮುಂದೆ ಅರವತ್ತು ವರ್ಷಗಳ ಪೆನಾಲ್ಟಿ ಕೇಳುತ್ತದೆ. ಅದೇ ನೀವು ಈ ಒಂದು ನಿಮಿಷವನ್ನೂ ಸುಮ್ಮನೆ ಬಿಡದೇ ಇಟ್ಟುಕೊಂಡ ಟಾರ್ಗೆಟ್ಟನ್ನು ರೀಚ್ ಆದಿರಿ ಎಂದುಕೊಳ್ಳಿ. ಅರವತ್ತು ಸೆಕೆಂಡುಗಳಲ್ಲಿ ದಕ್ಕಿದ ಈ ಗೆಲುವು ನಿಮ್ಮ ಇಡೀ ಜೀವಮಾನವನ್ನೇ ಶ್ರೀಮಂತಿಕೆಯಲ್ಲಿ ತೂಗಿಸಿ ಬಿಡುತ್ತದೆ…
ಸುಮಾರು ೫೬ ಪುಟಗಳ ಪುಟ್ಟ ಪಾಕೆಟ್ ಪುಸ್ತಕವಿದು. ಒಂದು ನಿಮಿಷ ನಿಮ್ಮ ಜೀವಮಾನದಲ್ಲಿ ಎಷ್ಟು ಮುಖ್ಯ ಎನ್ನುವ ಮಾಹಿತಿ ನೀಡುತ್ತದೆ. ಪುಸ್ತಕದ ಒಂದೆಡೆ ‘ಒಂದು ನಿಮಿಷದಲ್ಲಿ… ' ಎಂದು ಬರೆಯುತ್ತಾ ಹೀಗೆ ಹೇಳುತ್ತಾರೆ ಲೇಖಕರು “ವರ್ಷ, ಗಂಟೆಗಳ ಮಾತನ್ನೆಲ್ಲ ಪಕ್ಕಕ್ಕಿಟ್ಟು ಬಿಡಿ. ಒಂದು ನಿಮಿಷದಲ್ಲೇ ಈ ಜಗತ್ತು ಏನೆಲ್ಲ ಬದಲಾಗಿರುತ್ತದೆಂದರೆ, ಇದು ಹೀಗಿತ್ತಾ ಎಂದು ನಾವೇ ಆಶ್ಚರ್ಯ ಪಡಬೇಕು ಹಾಗಾಗಿ ಬಿಟ್ಟಿರುತ್ತದೆ. ಅಂತಹದ್ದರಲ್ಲಿ ನಮ್ಮಂತಹ ಒಬ್ಬ ಮನುಷ್ಯನ ಬದುಕನ್ನು ಗೆಲುವಿನ ಎತ್ತರಕ್ಕೊಯ್ಯಲು, ಸೋಲಿನ ಪಾತಾಳಿಗೆ ತಳ್ಳಲು ಅದಕ್ಕೆ ಸಾಧ್ಯವಿರುವುದಿಲ್ಲವಾ?
ಖಂಡಿತಾ ಸಾಧ್ಯವಿದೆ. ಅರವತ್ತು ಸೆಕೆಂಡುಗಳನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿರುವ ಈ ಒಂದು ನಿಮಿಷದಲ್ಲಿ ಅಬ್ಬಾ ಎನ್ನುವಂತಹ ಬದಲಾವಣೆಗಳಾಗಿರುತ್ತದೆ. !
- ಒಂದೇ ನಿಮಿಷದಲ್ಲಿ ನೀವು ಹತ್ತಾರು ವರ್ಷಗಳಿಂದ ಮಾಡಿಕೊಂಡೂ ಬಂದ ಕೆಲಸ ಕೈತಪ್ಪಿ ಹೋಗಬಹುದು. ಬದುಕು ಪ್ರಶ್ನೆಯಾಗಬಹುದು.
- ಅತಿ ಮುಖ್ಯವಾದ, ನಿಮ್ಮ ಬದುಕಿನ ಬಾಗಿಲಿಗೆ ಬಂಗಾರವನ್ನೇ ತೊಡಿಸುವಂತಹ ಸಂದರ್ಶನವೊಂದು ಒಂದು ನಿಮಿಷದಲ್ಲಿ ನಿಮ್ಮಿಂದ ತಪ್ಪಿ ಹೋಗಬಹುದು. ಬದುಕು ಮತ್ತೆ ಇಂತಹದೊಂದು ಅವಕಾಶ ಪಡೆಯುವ ಅವಕಾಶ ಮೊದಲೇ ಮುಗಿದು ಹೋಗಬಹುದು.
- ವಿಮಾನದ ಪೈಲೆಟ್ ಒಂದು ನಿಮಿಷದಲ್ಲಿ ಮಾಡಿದ ತೂಕಡಿಕೆಯಂತಹ ಪುಟ್ಟದೊಂದು ತಪ್ಪು ಇಡೀ ವಿಮಾನವನ್ನೇ ಸುಟ್ಟು ಭಸ್ಮ ಮಾಡಬಹುದು.
- ಒಂದೇ ಒಂದು ನಿಮಿಷದ ಮೈಮರೆವು ನಿಮ್ಮ ಬಳಿ ಅಲ್ಲಿಯವರೆಗೆ ಸೇಫಾಗಿದ್ದ ಕೋಟಿ ಕೋಟಿ ಹಣವನ್ನು ಕಳೆದುಕೊಳ್ಳಬಹುದು.”
ಹೀಗೆ ಒಂದು ನಿಮಿಷದಲ್ಲಿ ಏನು ಬೇಕಾದರೂ ಸಂಭವಿಸಬಹುದು. ಪುಸ್ತಕ ಪುಟ್ಟದಾಗಿದ್ದರೂ ಮಾಹಿತಿ ಸಣ್ಣದಲ್ಲ. ಒಂದೇ ಗುಟುಕಿಗೆ ಓದಿ ಮುಗಿಸಬಹುದಾದ ಪುಸ್ತಕ ಇದು.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!