ನವಗ್ರಹಗಳಲಿ ಭೂಮಿಯು ಒಂದು

ತಿಳಿಯಿರಿ ಮನುಕುಲವೆ ನೀವಿಂದು 

ಎಲ್ಲ ಗ್ರಹಗಳು ಸೇರಿ ನಿನ್ನ ಕೇಳುತಲಿಹವು

ಏನಾಯ್ತು ಹೇಗಾಯ್ತು ಉತ್ತರಿಸು ಇಂದು

 

ಜೀವನದಿ ಚೆಲ್ಲಾಟ ಮಾಡದೆಲೆ,

ಭೂಮಿ ತಾಯಿಯ ನರಕವಾಗಿಸದಿರಿ ಇಂದು

ಉಸಿರು ಚೆಲ್ಲುವ ಆಟ ಬೇಡವೆಂದು

ಮನುಕುಲದ ನಾಶ ನಿಲ್ಲಲಿಂದು

 

ಭೂಗ್ರಹಕೆ ಬಂದಿಹುದು ಮಹಾಮಾರಿ ಇಂದು

ಸಕಲರನ್ನು ಕಾಡಿಹುದು  ಹೆಮ್ಮಾರಿಯಾಗಿ ನಿಂದು

ಹೆದರಿಸುವ ಧೈರ್ಯ ತನ ತೋರಿರಿ 

ಆತ್ಮಸ್ಥೈರ್ಯದಿ ಮುಂದೆ ಸಾಗಿರಿ 

 

ಹಚ್ಚ ಹಸಿರಿನ ತೋಟ ಒಣಗಿ ಹೋಗಿರುವುದು

ತಂಪಾದ ಜಲವದುವು ಬತ್ತಿ ಬರಡಾಗಿಹುದು

ಆಕಾಶದೆತ್ತರಕೆ ಮಹಲುಗಳ ಕಟ್ಟಿಹರು

ಪ್ರಾಣವಾಯುವು ಇಲ್ಲದೆ ಜನ ಸಾಯುತಿಹರು

 

ಬದಲಾಗಲಿ ಜನರು ಇನ್ನಾದರೂ ಇಂದು,

ಬಂದಿರುವ ಪಿಶಾಚಿಯ ಹೊಡೆದೋಡಿಸಿ,

ಭೂಮಿಯ ಸಂಕಷ್ಟ ಬೇಗನೆ ಪರಿಹರಿಸಿ,

ಮತ್ತೆ ನಳನಳಿಸಲಿ ಜೀವ ಜಲವು ಎಂದೆಂದು

 

ಪ್ರಾಣವಾಯುವಿಗೆ ಕುತ್ತಾಯಿತೇ?

ಮನುಜನ ಸ್ವಾರ್ಥ ಮುಗಿಲು ಮುಟ್ಟಿತೇ!

ಇನ್ನೂ ತುಂಬಲಿಲ್ಲವೇ ಉದರ ನಿನ್ನದು?

ಮತ್ತೂ ಬಗೆಯುತಿಹೆ ಒಡಲ ಮೊಗೆಮೊಗೆದು

 

ಪರಿಸರವ ಸ್ವಚ್ಛವಾಗಿಸು; ಗಿಡಮರಗಳ ನೆಟ್ಟು ಬೆಳೆಸು

ಮನೆಗೊಂದು ವನ,ತಲೆಗೊಂದು ಸಸಿಯಾಗಿಸು

ಬೀಸಲಿ ತಂಗಾಳಿ ತಂಪಾಗಿ ಉಸಿರಾಗಲಿ

ಎಲ್ಲೆಡೆ ಹಾಹಾಕಾರ ಕರಗಿ ನೀರಾಗಿ ಹರಿಯಲಿ!

ರತ್ನಾ ಕೆ.ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ