ಹಾರಾಕತ್ತಾಳ…
ನಮ್ಮ ಗೆಳತಿಯರ ಗುಂಪಿನಲ್ಲಿ ಕರ್ನಾಟಕದ ಬೇರೆ ಬೇರೆ ಭಾಗಗಳ ಗೆಳತಿಯರೂ ಇದ್ದೇವೆ. ಹಾಗಾಗಿ ಕೆಲವೊಮ್ಮೆ ಒಂದೊಂದು ಕಡೆಯ ಭಾಷೆ ನಗೆಗಡಲಲ್ಲಿ ತೇಲಿಸುತ್ತಿರುತ್ತದೆ. ಮೊನ್ನೆ ಹೀಗೇ ಆಯಿತು. ಗೆಳತಿಯರೆಲ್ಲಾ ಸೇರಿ ಹೋಟೇಲ್ ಊಟಕ್ಕೆ ಹೋಗಿದ್ದೆವು. ಊಟ ಆರ್ಡರ್ ಮಾಡಿ ಸೆಲ್ಫೀ ತೆಗೆದುಕೊಳ್ಳೋಣ ಅಂತಾ ಎಲ್ಲರಿಗಿಂತ ಮುಂದಿರುವ ಗೆಳತಿ ಲೀಲಾ ಮೊಬೈಲು ಹಿಡಿದಳು. ಹಿಂದೆ ನಿಂತಿದ್ದ ವೀಣಾ, ‘ಅಯ್ಯೋ ತಡೀಯ ಲೀಲಾ, ನಳಿನಿ ಹಾರಕತ್ತಾಳ ನೋಡು' ಎಂದಳು. ನಾನೆಲ್ಲಿ ಹಾರುತ್ತಿದ್ದೇನೆಂದು ಎಲ್ರೂ ನನ್ನ ಕಡೆ ನೋಡಿದರು. ತಟ್ಟನೆ ನಾಲಿಗೆ ಕಚ್ಚಿಕೊಂಡ ವೀಣಾ, ‘ಫೋಟೋದಲ್ಲಿ ನಳಿನಿ ಕವರ್ ಆಗ್ತಾ ಇಲ್ಲ... ಅದಕ್ಕ ನಮ್ಮ ಭಾಷಾದಾಗ ಹಂಗ ಅನ್ತಾರ' ಎನ್ನುತ್ತಿದ್ದಂತೆ ಎಲ್ಲರೂ ನಗಲು ಶುರು ಮಾಡಿದೆವು !
-ನಳಿನಿ ಟಿ.ಭೀಮಪ್ಪ
***
ಹಾಫ್ ಟಿಕೇಟ್
ಸುಮಾರು ೨೦ ವರ್ಷಗಳ ಹಿಂದಿನ ಘಟನೆ. ನಮ್ಮ ಕುಟುಂಬ ಮತ್ತು ನಮ್ಮ ಸೋದರತ್ತೆಯ ಕುಟುಂಬ ಮನೆದೇವರಿಗೆಂದು ಹೋಗಿ, ಬೆಂಗಳೂರಿನ ಮೆಜೆಸ್ಟಿಕ್ ನಿಂದ ಬಸ್ ನಲ್ಲಿ ವೈಯಾಲಿಕಾವಲ್ ಗೆ ಒಟ್ಟಿಗೆ ಬಂದೆವು. ಎಲ್ಲರ ಟಿಕೇಟನ್ನು ನಾನು ಒಟ್ಟಿಗೆ ತೆಗೆದುಕೊಂಡಿದ್ದೆ. ಹಾಗೆ ಬರುವಾಗ ನನ್ನ ಸೋದರತ್ತೆಯ ಮಗಳು ಮಾತನಾಡುತ್ತಾ, ‘ನನಗೆ ಫುಲ್ ಟಿಕೇಟ್ ತೆಗೆದುಕೊಂಡಿದ್ದೀಯಾ?’ ಎಂದು ಪ್ರಶ್ನಿಸಿದಳು. ನಾನು ತಕ್ಷಣವೇ, ‘ಇಲ್ಲ, ಇಲ್ಲ ನಿನಗೆ ಅರ್ಧ ಟಿಕೇಟ್ ನ್ನಷ್ಟೇ ತೆಗೆದುಕೊಂಡಿದ್ದು. ನನ್ನ ಹತ್ತಿರ ಹೆಚ್ಚು ಹಣವಿರಲಿಲ್ಲ' ಎಂದೆ. ಅದಕ್ಕೆ ಅವಳು ‘ನಾನು ನಮ್ಮಪ್ಪನಿಗೆ ಹೇಳಿ ಮನೆಯಲ್ಲಿ ಕೊಡಿಸುತ್ತಿದ್ದೆ. ಹಾಗೇಕೆ ಮಾಡಿದೆ?’ ಎಂದಳು. ಅದಕ್ಕೆ ನಾನು ‘ಮನೆಯಲ್ಲಿ ದುಡ್ಡು ಕೊಟ್ಟರೆ? ಕಂಡಕ್ಟರ್ ಗೆ ಹೇಗೆ ಕೊಡುವುದು? ಎಂದು ಅವಳನ್ನು ರೇಗಿಸಿದೆ. ಆಗ ಅವಳು ಮುನಿಸಿಕೊಂಡು ಮನೆ ಸೇರಿದಳು. ಆಗ ಅವಳು ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದಳು. ನಾನು ಅವಳಿಗೆ ಪೂರ್ತಿ ಟಿಕೇಟು ಕೊಂಡಿದ್ದು ಬೇರೆ ಮಾತು. ಅವಳು ಪ್ರಶ್ನಿಸಿದ್ದರಿಂದ ಹಾಗೆ ಹೇಳಿದ್ದೆ. ಈಗ ಅವಳಿಗೆ ಮದುವೆಯಾಗಿ ಎರಡು ಮಕ್ಕಳಾದರೂ ‘ಹಾಫ್ ಟಿಕೇಟ್' ಎಂದೇ ಕಿಚಾಯಿಸುತ್ತೇನೆ.
-ಅನಂತ ಪದ್ಮನಾಭ ಎಚ್ .ಎಂ.
***
ನೋವು ಬಂದಿದೆ
ಬೆಳಗಿನ ಕಾಫಿ ಹೀರುತ್ತಾ ಪೇಪರ್ ನೋಡುತ್ತಿದ್ದ ನಮ್ಮನೆಯವರು, ‘ಲೇ...ನೋಡ್ಬಾಯಿಲ್ಲಿ ನೋವು ಬಂದಿದೆ...'ಅಂದ್ರು. ‘ನಂಗೆ ಕಾಣುತ್ಯೇ? ಅಲ್ಲೇ ಐಯೋಡೆಕ್ಸ್ ಇದೆ ಹಚ್ಕೊಳ್ಳಿ’ ಎಂದು ಅಡುಗೆ ಮನೆಯಿಂದಲೇ ಕೂಗಿದೆ.
‘ಅಯ್ಯೋ ಅದಲ್ವೇ,,, ನೋವು ಏನೋ ತಂದಿದೆ ನೋಡ್ಬಾಯಿಲ್ಲೀ’ ಅಂದ್ರು. ಸಿಡುಕುತ್ತಲೇ ಬಂದೆ. ನೋಡಿದ್ರೆ ಪಕ್ಕದ ಮನೆ ಮಗು ನವ್ಯ ಕೈಯಲ್ಲಿ ಸ್ವಲ್ಪ ತರಕಾರಿ ಹಿಡೊಂಡು ನಿಂತಿತ್ತು. ನಾನು ಇವರ ಮೇಲೆ ರೇಗಿದೆ. ‘ಅಯ್ಯೋ, ಅವ್ರ್ ಮನೇಲಿ ಅವ್ಳಿಗೆ ಪ್ರೀತಿಗೆ ನೋವೂಂತ್ಲೇ ಕರಿಯೋದು' ಎಂದು ನನ್ನ ಬಾಯನ್ನೇ ಮುಚ್ಚಿಸಬೇಕೇ…
-’ಸುಮಾ ಕಳಸಪುರ'
***
ಆ ರಸ್ತೆಯನ್ನೇ ಬಿಟ್ಟೆ
ನಮ್ಮೆಲ್ಲರ ಪ್ರೀತಿಯ ಪಕ್ಕು ಒಂದು ದಿನ ಬೆಳಗಿನ ವಾಯುವಿಹಾರದ ಬಗ್ಗೆ ಮನಮುಟ್ಟುವಂತೆ ವಿವರಿಸಿದ. ನಾನೂ ಈ ವಿಷಯ ಗಂಭೀರವಾಗಿಯೇ ತೆಗೆದುಕೊಂಡೆ. ಕಾಡಿನಿಂದ ಆವೃತ್ತವಾದ ಮಾಗೋಡು ಜಲಪಾತಕ್ಕೆ ಹೋಗುವ ರಸ್ತೆಯನ್ನೇ ವಾಯುವಿಹಾರಕ್ಕೆ ಆಯ್ದುಕೊಂಡೆ. ಒಂದು ಶುಭ ಮುಂಜಾನೆ ಕಾರನ್ನು ರಸ್ತೆಯ ಪಕ್ಕಕ್ಕೆ ನಿಲ್ಲಿಸಿ ವಾಯುವಿಹಾರ ಆರಂಭಿಸಿದೆ.
ಆದರೆ ದಿನಕಳೆದಂತೆ ಶುರುವಾದ್ದೇ ಬೇರೆ! ‘ಸಿರಿಯಸ್ಸಾಗಿ ವಾಕಿಂಗ್ ಮಾಡ್ತಾ ಇದಿರಿ. ಆರಾಮ ಇಲ್ವಾ’, ನಿಮ್ಮನ್ನು ನೋಡಿದ್ರೆ ಗೊತ್ತಾಗ್ತದೆ, ಆರಾಮ ಇಲ್ಲಾ ಅಂತಾ’, ‘ಹೆಲ್ತ್ ಪ್ರಾಬ್ಲಮ್ಮಾ?’, ಒಳ್ಳೆ ವೈದ್ಯರಿಗೆ ತೋರ್ಸಿ', 'ನನಗೆ ಮಂಗ್ಳೂರಲ್ಲಿ ಒಳ್ಳೆ ಡಾಕ್ಟರ್ ಪರಿಚಯ ಇದೆ. ಬೇಕಾದ್ರೆ ಹೋಗಿ ಬರೋಣ. ಹೀಗೆ ಹತ್ತಾರು ಜನ ಹತ್ತಾರು ರೀತಿಯಲ್ಲಿ ಹೇಳಿ ಸುಸ್ತು ಮಾಡಿದರು. ಹೀಗೇ ಮುಂದುವರೆದರೆ ನನಗೆ ದೊಡ್ಡ ರೋಗ ಬರಬಹುದೆಂದು ಹೆದರಿ ಮಾರನೇ ದಿನ ಆ ರಸ್ತೆಯನ್ನೇ ಬಿಟ್ಟೆ.
-ಬೀರಣ್ಣ ನಾಯಕ ಮೊಗಟಾ
***
(‘ಮಯೂರ' ಮೇ ೨೦೧೮ರ ಸಂಚಿಕೆಯಿಂದ ಸಂಗ್ರಹಿತ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!