ಕುಲಾಂತರಿ ಬೆಳೆಗಳ ಬಗ್ಗೆ ಪರಿಸರವಾದಿಗಳಿಗಿದ್ದ ಆತಂಕ ನಿಜವಾಗಿದೆ. ಪ್ರಾಯೋಗಿಕ ಹೊಲದಲ್ಲಿದ್ದ ಕುಲಾಂತರಿ ಬೆಳೆಯೊಂದರ ಮಾರ್ಪಾಡಾದ ಜೀನ್‌ಗಳು ಸ್ಥಳೀಯ ಕಳೆಯ ಜೀವಕೋಶದೊಳಗೆ ಸೇರಿಕೊಂಡು ಕಳೆನಾಶಕ ನಿರೋಧಿ “ಪ್ರಚಂಡ ಕಳೆ” (ಸೂಪರ್ ವೀಡ್)ಗೆ ಜನ್ಮ ನೀಡಿವೆ!

ಕುಲಾಂತರಿ ರೇಪ್ ಎಣ್ಣೆಬೀಜದ ಬೆಳೆ ಮತ್ತು ಅದೇ ವರ್ಗದ ಚಾರ್-ಲೊಕ್ ಎಂಬ ಸಸ್ಯದ ನಡುವೆ ತಳಿಸಂಕರ ಅಸಂಭವ ಎಂದಿದ್ದರು ಬ್ರಿಟಿಷ್ ಸರಕಾರದ ಪರಿಸರ ವಿಜ್ನಾನಿಗಳು.

ಅವರ “ಭವಿಷ್ಯವಾಣಿ"ಯನ್ನು ಸುಳ್ಳಾಗಿಸಿ, ಪ್ರಚಂಡಕಳೆಯಾಗಿ ಪರಿವರ್ತಿನೆಯಾದ ಈ ಚಾರ್-ಲೊಕ್ ಗಿಡ ಇತರ ಸಸ್ಯಗಳ ಜೊತೆ ಒಂದು ಹೊಲದಲ್ಲಿ ಬೆಳೆಯುತ್ತಿತ್ತು. ಆ ಹೊಲದಲ್ಲಿ ಮುಂಚೆ ಕುಲಾಂತರಿ ರೇಪ್ ಎಣ್ಣೆಬೀಜದ ಬೆಳೆ ಬೆಳೆಸಲಾಗಿತ್ತು. ಅಂತಹ ಕುಲಾಂತರಿ ಬೆಳೆಗಳ ಪ್ರಾಯೋಗಿದ ಕೃಷಿ ಮೂರು ವರುಷಗಳ ಅವಧಿ ಬ್ರಿಟನಿನಲ್ಲಿ ನಡೆದಿತ್ತು. ಅನಂತರ ಎರಡು ವರುಷ ನಡೆದ ಫಾಲೋಅಪ್‌ನಲ್ಲಿ ಈ ಪ್ರಚಂಡ ಕಳೆ ಪತ್ತೆಯಾಗಿದೆ.

ಗಾಬರಿಯಾದ ವಿಜ್ನಾನಿಗಳು ಈ ಪ್ರಚಂಡ ಕಳೆಗೆ ಮಾರಕ ಕಳೆನಾಶಕ ಸಿಂಪಡಿಸಿದರು. ಆದರೆ ಅದು ಸಡ್ಡು ಹೊಡೆದು ಬೆಳೆಯಿತು! ಇದು ರೈತರಿಗೆ ತೀರಾ ಆತಂಕಕಾರಿ ಸಂಗತಿ. ಆದರೆ ವಿಜ್ನಾನಿಗಳು ಇದನ್ನು ಗುಟ್ಟಾಗಿ ಇರಿಸಿದ್ದಾರೆ. ಕುಲಾಂತರಿ ಬೆಳೆಗಳ ಪ್ರಯೋಗ ಫಲಿತಾಂಶಗಳನ್ನು ಅದ್ದೂರಿಯ ಪತ್ರಿಕಾಗೋಷ್ಠಿ ಕರೆದು ಜಾಹೀರು ಮಾಡುತ್ತಿದ್ದ ವಿಜ್ನಾನಿಗಳು ಈಗ ಯಾಕೆ ಸುಮ್ಮನಿದ್ದಾರೆ?

ಕುಲಾಂತರಿ ರೇಪ್ ಎಣ್ಣೆಬೀಜದ ಸಸಿಗಳನ್ನು ಬೆಳೆಸಿದ್ದ ಹೊಲದಲ್ಲಿದ್ದ ಇತರ ಕಳೆಗಿಡಗಳ ಬೀಜಗಳನ್ನೂ ವಿಜ್ನಾನಿಗಳು ಸಂಗ್ರಹಿಸಿದರು. ಅವನ್ನೂ ಬಿತ್ತಿ ಬೆಳಿದರು. ಕಾಡು ಜಾತಿಯ ಟರ್ನಿಪ್ ಸಸ್ಯದ ಎರಡು ತಳಿಗಳೂ ಕಳೆನಾಶಕ ನಿರೋಧಿ ಆಗಿರುವುದು ಪತ್ತೆಯಾಯಿತು. ಅಂದರೆ ಕಳೆನಿರೋಧಿ ಜೀನ್‌ಗಳು ಇತರ ಕೆಲವು ಸಸ್ಯಗಳಲ್ಲಿಯೂ ಸೇರಿಕೊಂಡಿವೆ!

ಬ್ರಿಟನಿನ ವಿನ್‌ಫ್ರಿತ್‌ನ ಸರಕಾರಿ ಸಂಶೋಧನಾ ಕೇಂದ್ರ ಸೆಂಟರ್ ಫಾರ್ ಇಕಾಲಜಿ ಆಂಡ್ ಹೈಡ್ರೊಲೊಜಿಯ ಐವರು ವಿಜ್ನಾನಿಗಳು ಈ ಅನಾಹುತದ ಬಗ್ಗೆ ತಾವು ಕಂಡದ್ದನ್ನು ಸರಕಾರಿ ಇಲಾಖೆಯ ವೆಬ್-ಸೈಟಿನಲ್ಲಿ ಬಹಿರಂಗ ಪಡಿಸಿದ್ದಾರೆ.  

ಸಾಮಾನ್ಯ ಸಸ್ಯಗಳಿಗೆ ಹೋಲಿಸಿದಾಗ, ಈ ಪ್ರಚಂಡ ಕಳೆಗೆ ಅಗಾಧ ಅನುಕೂಲಗಳಿವೆ ಎಂಬುದು ಪರಿಣತರ ವಾದ. ಯಾಕೆಂದರೆ, ಅದು ವೇಗವಾಗಿ ಪುನರುತ್ಪತ್ತಿ ಮಾಡಿಕೊಳ್ಳುತ್ತದೆ. ಇದಕ್ಕೆ ನಿದರ್ಶನ, ಫ್ರೆಂಚ್ ವಿಜ್ನಾನಿಯೊಬ್ಬರ ಪ್ರಯೋಗದ ಫಲಿತಾಂಶ: ಟ್ರೈಯಾಜಿನ್ ರಾಸಾಯನಿಕ-ನಿರೋಧಿ ಕಳೆಸಸಿಯೊಂದನ್ನು ಅಟ್ರಜಿನ್ ಕಳೆನಾಶಕ ಸಿಂಪಡಿಸುತ್ತಿದ್ದ ಜೋಳದ ಹೊಲದಲ್ಲಿ ಅವರು ನೆಟ್ಟರು. ಕಳೆನಾಶಕದ ವಿಷಕ್ಕೆ ಒಳಗಾಗದೆ ಆ ಸಸಿ ಬೆಳೆಯಿತು. ನಾಲ್ಕು ವರುಷಗಳ ನಂತರ ಪರಿಶೀಲಿಸಿದಾಗ: ಆ ಕಳೆಗಿಡ ಸಂತಾನಾಭಿವೃದ್ಧಿ ಮಾಡಿ, ಒಂದು ಲಕ್ಷದ ಮೂರು ಸಾವಿರ ಹೊಸ ಸಸಿಗಳನ್ನು ಸೃಷ್ಟಿಸಿತ್ತು!

ಇಂಗ್ಲೆಂಡಿನಲ್ಲಿ ಪತ್ತೆಯಾದ ಚಾರ್-ಲೊಕ್‌ನ ಪ್ರಚಂಡ ಕಳೆ ಸಸ್ಯಕ್ಕೆ ಪುನರುತ್ಪತ್ತಿ ಸಾಮರ್ಥ್ಯ ಇರಲಿಲ್ಲ ಎಂಬುದು ಕೆಲವು ವಿಜ್ನಾನಿಗಳ ಅಭಿಪ್ರಾಯ. ಆದರೆ, ಜೈವಿಕ ತಂತ್ರಜ್ನಾನ ಸಲಹಾ ಘಟಕದ ಮುಖ್ಯಸ್ಥರಾದ ಡಾ. ಜಾನ್ಸನ್ ತದ್ವಿರುದ್ಧ ಸಂಗತಿಯನ್ನು ಬೊಟ್ಟು ಮಾಡಿ ತೋರಿಸುತ್ತಾರೆ: ಆ ಪ್ರಚಂಡ ಕಳೆ ದೊಡ್ಡದಾಗಿತ್ತು ಮತ್ತು ಹಲವಾರು ಹೂ ಅರಳಿಸಿತ್ತು. ಅದರ ಹೂಗಳ ಪರಾಗಗಳಲ್ಲಿ ಜೈವಿಕವಾಗಿ ಮಾರ್ಪಾಡಾದ ಗುಣವಿದ್ದರೆ ಅದು ಸ್ಥಳೀಯ ಚಾರ್-ಲೊಕ್ ಗಿಡಗಳಲ್ಲಿ ಸೇರಿಕೊಳ್ಳುತ್ತದೆ.

ಚಾರ್-ಲೊಕ್ ಬೀಜಗಳು ಮೊಳಕೆಯೊಡೆಯುವ ಮುನ್ನ ೨೦ರಿಂದ ೩೦ ವರುಷ ಮಣ್ಣಿನಲ್ಲಿಯೇ ಸುಪ್ತವಾಗಿರಬಲ್ಲವು. ಆದ್ದರಿಂದ, ಕುಲಾಂತರಿ ಗುಣವನ್ನು ಸ್ಥಳೀಯ ಚಾರ್-ಲೊಕ್ ಸಸಿಗಳು ಪಡೆದಿದ್ದರೆ, ಅವನ್ನು ನಿರ್ನಾಮ ಮಾಡಲು ಸಾಧ್ಯವೇ ಇಲ್ಲ. ಇದುವೇ ನಿಜವಾದ ಸಮಸ್ಯೆ!

ಈ ಸಮಸ್ಯೆಯನ್ನು ವಿಶ್ಲೇಷಿಸಲಿದೆ - ಹೊಸ ತಳಿಗಳನ್ನು ಪರಿಸರಕ್ಕೆ ಬಿಡುಗಡೆ ಮಾಡುವ ಬಗ್ಗೆ ಪರಿಶೀಲಿಸುವ “ಸಲಹಾ ಸಮಿತಿ.” ಆ ಸಮಿತಿಯ ಎದುರು ಈಗ ಇರುವ ಪ್ರಶ್ನೆ: (ಅ) ಪ್ರಚಂಡ ಕಳೆಗಳಾಗಿ ಪರಿವರ್ತನೆ ಆಗಬಲ್ಲ ಸ್ಥಳೀಯ ತಳಿಗಳು ಇರುವಾಗ ಮತ್ತು (ಆ) ಅದರಿಂದಾಗಿ ಕೃಷಿಯ ಉತ್ಪಾದಕತೆಗೆ ಧಕ್ಕೆಯಾಗುವ ಸಾಧ್ಯತೆ ಇರುವಾಗ, ಕುಲಾಂತರಿ ತಳಿಗಳನ್ನು ಬ್ರಿಟನಿನ ಪರಿಸರಕ್ಕೆ ಬಿಡುಗಡೆ ಮಾಡುವುದು ಸುರಕ್ಷಿತವೇ? ಎಂಬುದು.

ಕುಲಾಂತರಿ ತಳಿಗಳನ್ನು ಬಿಡುಗಡೆ ಮಾಡಿ ಲಾಭದ ಕೊಳ್ಳೆ ಹೊಡೆಯಲು ಕಾದಿರುವ ಖಾಸಗಿ ಕಂಪೆನಿಗಳು ಪ್ರಚಂಡ ಕಳೆಯ ಪತ್ತೆಯಿಂದಾಗಿ ಹಿಂದೇಟು ಹಾಕಬೇಕಾಗಿದೆ. ಯಾಕೆ? ಕುಲಾಂತರಿ ಶುಗರ್ ಬೀಟ್ ಮತ್ತು ಕುಲಾಂತರಿ ಎಣ್ಣಿಕಾಳು ಬೆಳೆ ರೇಪ್ - ಇವು ಜೀವವೈವಿಧ್ಯಕ್ಕೆ ಅಪಾರ ಹಾನಿ ಮಾಡುತ್ತವೆ ಎಂಬುದನ್ನು ವೈಜ್ನಾನಿಕ ಪ್ರಯೋಗಗಳು ಈಗಾಗಲೇ ಸಾಬೀತು ಮಾಡಿವೆ. ಅದರ ಜೊತೆಗೆ, ಈ ಪ್ರಚಂಡ ಕಳೆ ಪತ್ತೆಯಾದ ವರದಿ, ಲಾಭಬಡುಕ ಕಂಪೆನಿಗಳ ಗಂಟಲಲ್ಲಿ ಸಿಕ್ಕ ಗೋಲಿಯಂತೆ, ಅವುಗಳನ್ನು ಅಲುಗಾಡಿಸಿದೆ.

ಇತ್ತ ಬ್ರಿಟನಿನಲ್ಲಿ ಅನಾಹುತಕಾರಿ ಪ್ರಚಂಡ ಕಳೆ ಪತ್ತೆ ಆದದ್ದಕ್ಕೂ ಅತ್ತ ಕೆನಡಾದ ರೈತರು ಕುಲಾಂತರಿ ಬೆಳೆಗಳಿಂದ ಪಾಡು ಪಟ್ಟದ್ದಕ್ಕೂ ಸಾಮ್ಯವಿದೆ.

ಕೆನಡಾದಲ್ಲಿ, ಹೊಲದಲ್ಲಿ ಒಂದು ಬೆಳೆ ಬೆಳೆಸಿದ ನಂತರ ಇನ್ನೊಂದು ಬೆಳೆ ಬೆಳೆಸುವ ರೂಢಿ. ಎರಡನೇ ಬೆಳೆಯ ಕೃಷಿ ಮಾಡುವಾಗ, ಮುಂಚಿನ ಬೆಳೆಯ ಅಳಿದುಳಿದ ಬೀಜಗಳು ಮೊಳೆತು ಬೆಳೆದು ಹಾವಳಿ ಮಾಡುತ್ತವೆ. ಕೆನಡಾದ ರೈತರಿಗೆ ಎದುರಾದದ್ದು ಇದೇ ಹಾವಳಿ. ಹಲವು ಹಂಗಾಮುಗಳಲ್ಲಿ, ಕುಲಾಂತರಿ ಬೆಳೆಗಳ ಬೇಸಾಯ ಮಾಡಿದ ಫಲವಾಗಿ ಅಳಿದುಳಿದ ಬೀಜಗಳಿಂದ ಹುಟ್ಟುವ ಸಸಿಗಳ ಹಾವಳಿ ಎಲ್ಲೆ ಮೀರಿತು. ಎರಡು-ಮೂರು ಬಾರಿ ಕಳೆನಾಶಕಗಳನ್ನು ಸಿಂಪಡಿಸಿದರೂ ಈ ಹೊಸ ಸಸಿಗಳು ಸಾಯಲಿಲ್ಲ! ಇವುಗಳಲ್ಲಿತ್ತು - ೨-೩ ವಿಧದ ಕಳೆನಾಶಕಗಳಿಗೆ ನಿರೋಧಿ ಗುಣ. ಆದ್ದರಿಂದಲೆ ಅವುಗಳಿಗೆ “ಪ್ರಚಂಡ ಕಳೆಗಳು" (ಸೂಪರ್ ವೀಡ್ಸ್) ಎಂಬ ಹೆಸರು ಬಂತು. ತಮ್ಮ ಹೊಲದ ಬೆಳೆಗಳನ್ನು ಇವುಗಳ ಹಾವಳಿಯಿಂದ ಬಚಾವ್ ಮಾಡಲಿಕ್ಕಾಗಿ, ಕೆನಡಾದ ರೈತರು ತಮಗೆ ಇಷ್ಟವಿಲ್ಲದ ಕೆಲಸ ಮಾಡಬೇಕಾಯಿತು. ಅಂದರೆ, ಭೀಕರ ವಿಷಕಾರಿಯಾದ ಹಳೆಯ ಕಾಲದ ಕಳೆನಾಶಕಗಳನ್ನೇ ಪುನಃ ಸಿಂಪಡಿಸಬೇಕಾಯಿತು. ಇದರಿಂದಾಗಿ ಜೀವವೈವಿಧ್ಯದ ಮೇಲೆ ಪುನಃ “ಬಾಂಬ್ ಧಾಳಿ” ನಡೆಸಿದಂತಾಯಿತು.

ಭಾರತದ ಕೆಲವು ವಿಶ್ವವಿದ್ಯಾಲಯಗಳೂ “ಕುಲಾಂತರಿ ತಳಿ”ಗಳ ಅಭಿವೃದ್ಧಿ ಪ್ರಯೋಗಗಳನ್ನು ನಡೆಸುತ್ತಿವೆ. ಉದಾಹರಣೆಗೆ, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ಕುಲಾಂತರಿ ಕರಬೂಜ ಮತ್ತು ಕುಲಾಂತರಿ ನೆಲಗಡಲೆ ತಳಿಗಳನ್ನು ಅಭಿವೃದ್ಧಿ ಪಡಿಸಲಿಕ್ಕಾಗಿ ಪ್ರಯೋಗ ನಡೆಸಿತ್ತು. ಕೆನಡಾ ಮತ್ತು ಬ್ರಿಟನ್‌ನಲ್ಲಿ ಆದ ಪ್ರಮಾದ ನಮ್ಮ ದೇಶದಲ್ಲಿಯೂ ಆದೀತು. ಕಾಲ ಮಿಂಚುವ ಮುನ್ನ ವಿಜ್ನಾನಿಗಳೂ ಕೃಷಿಕರೂ ಜೀವವೈವಿಧ್ಯ ಸಂರಕ್ಷಣಾ ಸಂಘಟನೆಗಳೂ ಎಚ್ಚೆತ್ತುಕೊಳ್ಳಬೇಕಾಗಿದೆ.

ಫೋಟೋ ೧ ಮತ್ತು ೨: ಚಾರ್-ಲೊಕ್ ಸಸ್ಯದ ಎಲೆ ಮತ್ತು ಹೂಗಳು ….. ಕೃಪೆ: ಡ್ರೀಮ್ಸ್ ಟೈಮ್.ಕೋಮ್