ಅಂದು - ಇಂದು
ನೀನಿಲ್ಲದೆ ನನಗೇನಿಲ್ಲ ಅಂದು
ನೀನಿದ್ದರೆ ಬೇಸರ ಇಂದು
ನೋಡುವ ತವಕ ಅಂದು
ನೋಡಿದರೆ ಕೋಪ ಇಂದು
ನನಗೆ ನೀನೇ ಎಲ್ಲಾ ಅಂದು
ಮಕ್ಕಳಿಗೆ ಜನಕ ಮಾತ್ರ ಇಂದು
ಬದುಕ ಬೇಕೆಂಬ ಪರಿಸ್ಥಿತಿ ಅಂದು
ಮಕ್ಕಳಿಗಾಗಿ ಬದುಕುವ ಮನಸ್ಥಿತಿ ಇಂದು
ಎಷ್ಟು ಮಾತಾಡಿದರೂ ಸಾಲದು
ಈಗ ದನಿ ಕೇಳಿದರೆ ಆಗದು
ಎಷ್ಟು ನೋಡಿದರೂ ಸಾಕಾಗದು
ಈಗ ನೋಡಲಿಕ್ಕೆ ಮನಸಾಗದು
ಬದಲಾವಣೆ ಬೇಕು ಸಹಜ
ಬದಲಾವಣೆ ಆಗುವುದು ನೈಜ
ಇಂತಹ ಬದಲಾವಣೆ ಅಸಹಜ
ಮಕ್ಕಳಿಗಾಗಿ ಸಹಿಸಬೇಕು ಇದು ನಿಜ
-ರಂಜನಾ, ನಂಜನಗೂಡು
***
‘ಮ’ ದಿಂದ ‘ಮಃ’ ವರೆಗಿನ ಗುಣಿತಾಕ್ಷರದ ಕವನ
*ಮ* ನಮೋಹನ ಕೃಷ್ಣ ಸುಂದರಾಂಗ ಸುಶೀಲ
*ಮಾ* ತಲೆಂತು ಬಣ್ಣಿಸಲಿ ನಿನ್ನ ದೇವ
*ಮಿ* ನುಗುವ ತಾರಾಲೋಕದ ಪೌರ್ಣಿಮೆಯ ಚಂದಿರ
*ಮೀ* ಸೆಯಡಿಯಲ್ಲಿಯೇ ಮುಗುಳ್ನಗುವ ಚೆಲುವ ಚೆನ್ನಿಗ
*ಮು* ದದಿ ನಿನ್ನನು ಕೊಂಡಾಡುವೆನು ಅನವರತ
*ಮೂ* ರುತಿಯ ನಿಲ್ಲಿಸಿ ಹಾಡುವೆನು ಸಂಗೀತ
*ಮೃ* ದು ಮನದ ಕೋಮಲ ಶ್ಯಾಮಲಾಂಗ
*ಮೆ* ಲ್ಲನೆ ಬಂದು ಬೆಣ್ಣೆಯ ಮೆದ್ದವ
*ಮೇ* ಲಿಡುತ ನೀರೆಯರ ಸೀರೆಗಳ ಕದ್ದವ
*ಮೈ* ದೋರು ಬಾಲ ಮುಕುಂದ ಶರಣೆಂಬೆ
*ಮೊ* ದಲ ನೋಟದಿ ಗೋಪಿಕೆಯರ ಸೆಳೆದವ
*ಮೋ* ಹನಾಂಗ ವೇಣುಗಾನ ಪ್ರಿಯ ಮುರಲಿ
*ಮೌ* ನವೇತಕೆ ರಾಧಾ ರಮಣ ಗೋವಿಂದ
*ಮಂ* ದಾನಿಲದಿ ಬೆರೆತು ಮರೆತು ಜಗವನು
*ಮಃ* ಮಹತಿ ಶರಣೆಂಬೆ ನಿನಗೆ ದೈತಾರಿ
-ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!