ವಾರ ಭಾನುವಾರವಾದ್ದರಿಂದ ಮನೆಯಲ್ಲಿ ಕಸಗುಡಿಸುವ ಕೆಲಸವೊಂದು ಉಳಿದಿತ್ತು. ಅಲ್ಲಲ್ಲಿ ಬಿದ್ದಿದ್ದ ಬ್ಯಾಗುಗಳನ್ನೆಲ್ಲ ಮತ್ತೊಮ್ಮೆ ಮನೆಯ ಒಳಗೆ ಹರಡಿಕೊಂಡು ವ್ಯರ್ಥ ಅನ್ನಿಸಿದನ್ನೆಲ್ಲ ಅಲ್ಲಲ್ಲೇ ಚೆಲ್ಲೋದಕ್ಕೆ ಆರಂಭ ಮಾಡಿದೆ. ಎಲ್ಲವೂ ವ್ಯರ್ಥವಾಗಿ ಕಂಡವು. ಮನೆ ಸ್ವಚ್ಛವಾಗುವುದರ ಕಡೆಗೆ ಸಾಗ್ತಾ ಇದೆ ಅನ್ನುವ ಹೆಮ್ಮೆ ನನ್ನೊಳಗೆ ಮೂಡಲಾರಂಭಿಸಿತು. ಎಲ್ಲವನ್ನ ಹರಡಿಕೊಂಡು ಗುಡಿಸುವುದಕ್ಕೆ ಪೊರಕೆ ಹಿಡಿದ ಕ್ಷಣ ಅಮ್ಮ ಓಡಿ ಬಂದ್ರು. "ಏನು ಎಲ್ಲಾ ಗುಡಿಸಿ ಬಿಡುವುದಾ" ಅಂದಾಗ "ಹೌದು ಸ್ವಚ್ಛವಾಗಬೇಕು ತಾನೆ" "ಆದರೆ ನೀನು ಗುಡಿಸೋದು ಬೇಡ, ನಿನಗೆ ಎಲ್ಲವೂ ಕಸಾನೆ, ಅದರಲ್ಲಿ ಬೇಕಾಗುವುದು ಯಾವುದು ನಿನಗೆ ಕಾಣುವುದಿಲ್ಲ" ನಾನು ಅಂದೆ "ಇದರಲ್ಲಿ ಬೇಕಾಗುವುದು ಯಾವುದು ಇಲ್ಲ, ಎಲ್ಲವೂ ಕಸವಾಗಿ ವ್ಯರ್ಥವಾಗುವವು. ಸುಮ್ಮನೆ ತುಂಬಿಸಿಟ್ಟುಕೊಳ್ಳುವುದಕ್ಕಿಂತ ಬಿಸಾಡುವುದೇ ಒಳಿತಲ್ಲವೇ". ಅಮ್ಮನಿಗೆ ಅರ್ಥ ಆಗ್ಲಿಲ್ಲ ಅಂತ ಅನ್ಸುತ್ತೆ ಆದರೂ ಅಮ್ಮ ಬೈದು ಅವರೇ ಅವರು ಗುಡಿಸ್ತಾ ಹೋಗ್ತಾ ಇದ್ದ ಹಾಗೆ ಹಲವಾರು ವಸ್ತುಗಳನ್ನ ಹೆಕ್ಕಿ ಚೀಲದೊಳಗೆ ತುಂಬಿಸಿಟ್ಟರು ಇವೆಲ್ಲ ಯಾಕೆ ಅಂದದ್ದಕ್ಕೆ "ನಿನಗಿದು ಅರ್ಥ ಆಗುವುದಿಲ್ಲ. ಇದರಲ್ಲಿ ಒಂದಷ್ಟು ಭೂತಕಾಲದ ನೆನಪುಗಳಿವೆ, ಭವಿಷ್ಯಕ್ಕೆ ಬೇಕಾಗಿರುವ ವಸ್ತುಗಳು ಇದ್ದಾವೆ. ನೀನು ವರ್ತಮಾನವನ್ನು ಮಾತ್ರ ಯೋಚಿಸುವ ಕಾರಣ ನಿನಗೆ ಎಲ್ಲವೂ ಕಸವಾಗಿ ಕಾಣುತ್ತವೆ. ನಾನು ಭೂತ, ವರ್ತಮಾನ ಮತ್ತು ಭವಿಷ್ಯದಲ್ಲಿ ಬದುಕುವ ಕಾರಣ ಬೇಕಾಗುವ ಎಲ್ಲ ವಸ್ತುಗಳನ್ನ ಕಾಪಾಡುತ್ತೇನೆ, ಇದು ದೊಡ್ಡ ವಿಚಾರ ಅಲ್ಲ ಯಾವುದು ವ್ಯರ್ಥ ಯಾವುದು ಬೇಕು ಯಾವುದು ನೆನಪು ಇವನ್ನು ವಿಭಾಗಿಸಿಕೊಂಡು ಕಸ ಗುಡಿಸಬೇಕಾಗಿರುವುದು ಕಸಗುಡಿಸುವವನ ಲಕ್ಷಣ. ಮೊದಲಿದನ್ನ ಅರ್ಥ ಮಾಡ್ಕೋ" , ಅಮ್ಮ ಇಷ್ಟು ಹೇಳಿದ ಮೇಲೆ ನನಗೆ ನನ್ನೊಳಗಿನ ಮನಸ್ಸಿನಲ್ಲಿ ಒಂದಷ್ಟು ಕಸಗಳಿವೆ ಅವುಗಳಲ್ಲಿ ಭೂತ ವರ್ತಮಾನ ಮತ್ತು ಭವಿಷ್ಯಕ್ಕೆ ಬೇಕಾಗಿರುವ  ನೆನಪುಗಳನ್ನ ಇಟ್ಟುಕೊಂಡು ಉಳಿದವುಗಳನ್ನ ಚೆಲ್ಲಿ ಬಿಡಬೇಕು. ಆಗಾಗ ಮನೆ ಸ್ವಚ್ಛವಾಗುತ್ತಾ ಹೋದ ಹಾಗೆ ಮನಸ್ಸು ಸ್ವಚ್ಛವಾಗ್ತಾ ಇರಬೇಕು ಅನ್ನಿಸ್ತು

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ