ಯಾರು ಯಾರಿಗೆ ಆಸರೆ?

ಯಾರು ಯಾರಿಗೆ ಆಸರೆ?

ಎಲ್ಲರು ಬರಿ ದಾಸರೆ!

 

ಅವನಿಗೀತನು ದಾಸನಾದರೆ

ಇವನಿಗಾತನು ದಾಸನು ;

ಇವನಿಗಾತನು ದಾಸನಾದರೆ

ಅವನಿಗೀತನು ದಾಸನು !

 

ಅವಳು ಇವನಿಗೆ ದಾಸಿಯಾದರೆ

ಇವನು ಅವಳಿಗೆ ದಾಸನು ;

ಅವನು ಇವಳಿಗೆ ದಾಸನಾದರೆ

ಇವಳು ಅವನಿಗೆ ದಾಸಿಯು !

 

ಮಗನು, ತಂದೆಗೆ ದಾಸನಾದರೆ

ತಂದೆ ಮಗನಿಗೆ ದಾಸನು ;

ತಂದೆ ಮಗನಿಗೆ ದಾಸನಾದರೆ

ಮಗನು ತಂದೆಗೆ ದಾಸನು !

 

ಮಿತ್ರನಿಗೆ ಸನ್ಮಿತ್ರನಾಗಲು

ಮಿತ್ರನಿಗೆ ಇವ ದಾಸನು ;

ಮಿತ್ರನಿವನಿಗೆ ದಾಸನಾಗಲು

ಇವನು ಮಿತ್ರಗೆ ದಾಸನು !

 

ಕೆಲಸದಾತನು ಇವನು ದಾಸನು

ಅವನು ಇವನಿಗೆ ದಾಸನು ;

ಕೆಲಸದವ ಸಹ ಇವಗೆ ದಾಸನು

ಇವಗೆ ಕೆಲಸದ ದಾತನು !

 

ಯಾರು ಯಾರಿಗೆ ದಾತರು?

ಎಲ್ಲರೂ ಬರಿ ದಾಸರು !

***

ಇರಲಿ ಬಿಡು…

ಇರಲಿ ಬಿಡು, ಅಂದುಕೊಂಡುದನೆಲ್ಲ ಸಾಧಿಸುವ

ಸರಳ ಸಂಕಲ್ಪವದು ಮನದಿ ಮೂಡಿ ;

ಬರಲಿ ಬಿಡು, ಮುಂದಿನೆಲ್ಲಕೆ ಸಮಯ ನಿಗದಿಸುವ

ವಿರಲ ಸಂದರ್ಭಗಳಿಗನುವು ಮಾಡಿ !

 

ಬದುಕಿನಾಸೆಯ ಚಿತ್ರ ಪಡಿಮೂಡೆ ಮನದಲ್ಲಿ

ಒದಗಿಬಹ ಸಂಕಲ್ಪಗಳ ರಾಶಿಗೆ ;

ಬದುಕುವಾಸೆಯ ಹಿಂದೆ ಹುದುಗಿರುವ ಹಲವಾರು

ಕನಸುಗಳ ಕಂತೆಗಳ ಹೊಸ ಹಾಸಿಗೆ !

 

ಮುಂದೆ ಬಹ ಒಳಿತುಗಳ ಸರಮಾಲೆಯನು ಸ್ಮರಿಸಿ

ಇಂದು ಕಾಯುತಲಿರುವ ಸಮಯದಲ್ಲಿ

ಹಿಂದೆ ಫಲಿಸದ ತಂತ್ರ ಇಂದು ಫಲಿಸಿತು ಎಂದು

ಮಿಂದು ಸಂತಸದಲ್ಲಿ ಮುಳುಗಿ ಅಲ್ಲಿ !

 

ಕಲ್ಲನೆಸೆಯುವುದೊಂದೆ ನಮ್ಮ ಕೈಯಲ್ಲಿಹುದು

ಗುರಿ ತಲುಪಿಸುವ ಕಾರ್ಯ ವಿಧಿಯ ಕೈಗೆ ;

ಸಲ್ಲದಿಹುದೆಲ್ಲವನು ಸುತ್ತಿಕೊಳ್ಳದ ಹಾಗೆ

ಸರಿಯೆನಿಪುದದು ತಾನೆ ಮಾಡಿ ಹೀಗೆ !

***