ಬೇಕು - ಬೇಡ

ಬೇಕು - ಬೇಡಗಳ ತುಮುಲದಲ್ಲಿ

ಬಡವಾಗಿ ಹೋಯ್ತು ಬದುಕು

ಸಾಕು - ಬೇಕುಗಳ ಚಿಂತೆಯಲ್ಲಿ

ಕೃಶವಾಗಿ ಹೋಯ್ತು ಬದುಕು !

 

ತೃಪ್ತಿಯನ್ನು ಬಯಸುತ್ತ ವಸ್ತುಗಳ 

ಪಡೆವ ಚಿಂತೆ ಹೆಚ್ಚಿ

ಕ್ಷಿಪ್ರ ಬಯಕೆಗಳ ಹಿಂಡ ಹೊತ್ತ ಮನ-

ದತ್ತ ಚಿತ್ತ ನೆಚ್ಚಿ !

 

ಬಯಕೆಗಳನು ಬೆಂಬತ್ತಿ ಸಾಗಿದರೆ

ಪಡೆಯಲಹುದೆ ಅದರ?

ಬಯಸಿದಷ್ಟು ಲಭಿಸಿದರು ಮತ್ತೆ 

ತಲೆದೋರಿಕೊಳುವ ಹದರ !

 

ತೃಪ್ತಿಯೆಂಬ ವಸ್ತುವನು ಪಡೆವ ಬಗೆ-

ಗೊತ್ತು ನೀಡಿ ಇತ್ತ

ಕ್ಲಪ್ತ ಸಮಯದಲಿ ಲಿಪ್ತವಾಗಿಸುವ -

ದತ್ತ ಇತ್ತ ಸುತ್ತ !

 

ಬೇಕು - ಬೇಡಗಳ ತುಮುಲದಲ್ಲಿ ಬಸ-

ವಳಿದ ನಮಗೆ ಈಗ

ಸಾಕು - ಸಾಕು ಎನುವಂಥ ಭಾವಗಳ

ಹೊಳಹು ಸಿಗಲಿ ಬೇಗ !

***

ಸಖ್ಯ

ಸಖ್ಯವನು ಗಳಿಸಿಕೊಳ್ಳುವ ಪ್ರಮುಖ ಗುರಿಯಿರಲು

ಮುಖ್ಯವಾದುದು ತಾನೆ ಸತ್ಯನಿಷ್ಟೆ

ಲಭ್ಯವನು ಯೋಚಿಸುತಲಭ್ಯವಾದುದ ಬಯಸೆ

ಸಭ್ಯತನಕಿನ್ನಷ್ಟು ಮೆರಗು ಅಷ್ಟೆ!

 

ಸ್ನೇಹದೊಲುಮೆಯ ಕೊಡುಗೆಗಿನ್ನಷ್ಟು ಬಲ ಬರಲು

ಶುದ್ಧ ಭಾವದ ನಿಖರ ನಿಲುವು ಸಾಕು

ಸರಲತೆಯ ವಿರಲತೆಯ ಭವ್ಯ ಸಾಕಾರಕ್ಕೆ

ಬದ್ಧವಾಗಿರುವಂಥ ಛಲವು ಬೇಕು !

 

ಅನ್ಯ ಗೊಡವೆಯ ತ್ಯಜಿಸಿ ತನ್ನತನದನುಭಾವ -

ವನ್ನು ಮೆಚ್ಚುವ ಸ್ಪಷ್ಟ ಒಲವು ಇರಲಿ

ತನ್ನ ನಿಲುವಿಗೆ ಆತು ಭಿನ್ನ ನಿಲುವಿಗೆ ಸೋತು

ಹೋಗದಿಹ ಧೃಢವಾದಬಲವು ಬರಲಿ !

 

ಸಖ್ಯದಲಿ ಸುಖ ಕಂಡು ಸುಖದ ಸೌಖ್ಯವನುಂಡು

ಮಿಕ್ಕುದನು ಗೌಣವಾಗಿಸುವ ಭಾವ

ದಕ್ಕದುದನೆಲ್ಲವನು ಲೆಕ್ಕಕ್ಕೆ ತಾರದಲೆ

ಸಿಕ್ಕುದುದರಲಿ ಸುಖವ ಕಾಂಬ ಜೀವ !

***