ಯಾರು ಹಿರಿಯರು?
ಮನೆಯೊಂದರಲ್ಲಿ ಹತ್ತಾರು ಮಂದಿ ಹೆಂಗಳೆಯರು ಸೇರಿ ವಿಪರೀತ ಮಾತನಾಡುತ್ತಿದ್ದರು. ಸದ್ಯಕ್ಕೆ ಅವರ ಮಾತು ನಿಲ್ಲುವಂತಿರಲಿಲ್ಲ.
ಅದು ಹೀಗೆಯೇ ಇವರು ಎಷ್ಟು ಹೊತ್ತಾದರೂ ಮಾತನಾಡುತ್ತಲೇ ಇರುತ್ತಾರೆ ಎಂದು ತಿಳಿದ ಆ ಮನೆಯ ಅಜ್ಜಿ ಅವರಲ್ಲಿಗೆ ಬಂದು 'ನೋಡಿ ನೀವೇನು ಮಾತನಾಡುತ್ತಿರುವಿರೋ ಯಾರಿಗೂ ಅರ್ಥವಾಗುವುದಿಲ್ಲ. ಈಗ ನಾನು ಹೇಳಿದಂತೆ ಮಾಡಿ. ನಿಮ್ಮಲ್ಲಿ ಯಾರು ಹಿರಿಯರು ಅವರು ಮೊದಲು ಮಾತನಾಡಿ. ನಂತರ ಇತರರು ಮಾತಾಡಿ' ಎಂದರು ಆಗ ಯಾರೂ ಮಾತನಾಡಲು ಮುಂದೆ ಬರಲಿಲ್ಲ. ಅಮೇಲೆ ಯಾರು ಯಾವ ಮಾತನ್ನು ಆಡಲೇ ಇಲ್ಲ !
-ಶಂಕರೇಗೌಡ ತುಂಬಕೆರೆ
***
ಗುಂಡ ಮಾಡಲಾಗದ ದಾನ
ಪ್ರಪಂಚದಲ್ಲಿ ಮಾಡಲಾಗದೇ ಇರೋ ದಾನ ಯಾವುದು ಮಕ್ಕಳೇ' ಅಂತ ತರಗತಿಯಲ್ಲಿ ಮೇಡಂ ಕೇಳಿದಾಗ 'ನಾನೇ ಹೇಳೀನಿ ಮೇಡಂ..'ಅಂದ ಉಂಡಾಡಿ ಗುಂಡ. ಉಶ್, ಉಶ್ಯಪ್ಪಾ ಅಂತ ಎದುಸಿರು ಬಿಡುತ್ತಾ.. ನಿಧಾನವಾಗಿ ಎದ್ದು ನಿಂತ.
'ಮೇಡಂ. ಪ್ರಪಂಚದಲ್ಲಿ ದಾನ ಮಾಡಲಾಗದ್ದು ನನ್ನ ಈ ರೀತಿಯ ಒಬೆಸಿಟಿ, ಎಲ್ಲೂ ನನ್ನನ್ನು ಮರಿ ಅಂತಾರೆ ಮೇಡಂ.. ಯಾರಿಗಾದ್ರೂ ನಾನು “ ನನ್ನ ಓವರ್ ವೇಯ್ಟ್ ನಲ್ಲಿ ಸ್ವಲ್ಪಾನಾದ್ರೂ, ದಾನ ಮಾಡೋಕಾಗುತ್ತಾ ನೀವೇ ಹೇಳಿ?' ಅಂತ ಅವನೇ ಅವನ ಬಗ್ಗೆ ಹಾಸ್ಯ ಮಾಡಿಕೊಂಡಾಗ ಮೇಡಂ ಹಾಗೂ ಮಕ್ಕಳಾದಿಯಾಗಿ ಎಲ್ಲರೂ ಮನಸಾರೆ ನಕ್ಕರು.
'ಸರಿ, ಈಗೇನು ಮಾಡೋಕು ಅಂತಿದೀಯಾ' ಅಂತ ಕೇಳಿದ ಮೇಡಂಗೆ, 'ಇನ್ಮುಂದೆ ಪಿಜ್ಜಾ, ಬರ್ಗರ್ ತಿನ್ನೋದನ್ನೇ ಬಿಟ್ಟು ಬಿಡ್ತೀನಿ ಅದೇ ನಾನು ಮಾಡೋ ಒಳ್ಳೆಯ ದಾನ' ಅಂದ.
'ವಾಹ್...! ಶಭಾಷ್ ಗುಂಡಾ.. ನಿನ್ನ ಈ ಡಿಸಿಷನ್ ಎಲ್ಲಾ ಮಕ್ಕಳಿಗೂ ಅವರ ಆರೋಗ್ಯ ಕಾಪಾಡುವ ಒಳ್ಳೆಯ ಮಾರ್ಗ ಕೂಡಾ' ಅಂದ್ರು.
-ಸುಮನಾ
***
ಗಟ್ಟಿ ಆರೋಗ್ಯದ ಗುಟ್ಟು
ಆರೋಗ್ಯವಂತ ಎಂಬತ್ತರ ಆಸುಪಾಸಿನ ವೃದ್ಧ ದಂಪತಿಯ ಬಳಿ ಬಂದ ಒಬ್ಬ ವ್ಯಕ್ತಿ 'ಅಜ್ಞಾ ... ನಿಮ್ಮ ಗಟ್ಟಿ ಆರೋಗ್ಯದ ಗುಟ್ಟೇನು?' ಎಂದು ಕೇಳಿದ
ಆಗ ವೃದ್ಧದಂಪತಿ 'ಗುಟ್ಟು ಇಲ್ಲಾ ಗಿಟ್ಟೂ ಇಲ್ಲ... ಅದೇನು ಅಂದ್ರೆ ನಾವು ಮದುವೆ ಆದಾಗ ಒಂದು ಒಪ್ಪಂದ ಮಾಡಿಕೊಂಡಿದ್ದೆವು. ಏನಂದ್ರೆ ನಮ್ಮಲ್ಲಿ ಜಗಳ ಶುರು ಆಗಿ ಅದರಲ್ಲಿ ತಪ್ಪು ಮಾಡಿದವರು ನಾಲ್ಕು ಕಿಲೋಮೀಟರ್ ದೂರ ನಡೆದು ಹೋಗಬೇಕು ಅಂತ ಇದರಲ್ಲಿ ನಿತ್ಯ ನಂದೇ ತಪ್ಪು ಇರುತ್ತಿದ್ದರಿಂದ ನಾನು ನಡೆದು ಹೋಗುತ್ತಿದ್ದೆ... ಎಂದು ಹೇಳುವುದನ್ನು ಅರ್ಧಕ್ಕೆ ತಡೆದ ಆ ವ್ಯಕ್ತಿ 'ಹಾಗಿದ್ರೆ ಅಜ್ಜಿ ಆರೋಗ್ಯದ ಗುಟ್ಟೇನು?' ಎಂದು ಕೇಳಿದ..ಆಗ ಆ ಅಜ್ಜ ಹುಸಿನಗೆ ಚೆಲ್ಲಿ 'ಅದಾ... ನಾನು ಅಷ್ಟು ದೂರ ಹೋಗ್ತಿನೋ ಇಲ್ಲೋ ಅನ್ನೋದನ್ನ ಪರೀಕ್ಷೆ ಮಾಡೋಕೆ ನನ್ನ ಹಿಂದೆ ಆಕೆ ಬರ್ತಾ ಇದ್ಲು’' ಎಂದು ಉತ್ತರಿಸಿದ!
-ಅರವಿಂದ ಜಿ. ಜೋಷಿ
***
ಹಿಟ್ ಹೊಡಿ…!
ಮನೆಯಲ್ಲಿ ಸಿಕ್ಕಾ ಪಟ್ಟಿ ಜಿರಳೆಗಳಾಗಿ ಬಿಟ್ಟಿದ್ದವು. ಮನೆಯವರಿಗೆ ಹೇಳು ಅಂಗಡಿಯಿಂದ ‘ಹಿಟ್’ ಸ್ಪ್ರೇ ತರಿಸಿಕೊಂಡೆ. ಮೂಗಿಗೆ ಬಟ್ಟೆ ಕಟ್ಟಿಕೊಂಡು ಸಂಧಿ ಸಂಧಿಗೆ ಸ್ಪ್ರೇ ಹೊಡೆದೆ. ದುಬುದುಬು ಎಲ್ಲಾ ಕಡೆ ಜಿರಳೆ ಸತ್ತು ಬಿದ್ದವು. ಎಲ್ಲಾ ಬಳಿದು ಹೊರಹಾಕಿದ ಮೇಲೆ ನೆಮ್ಮದಿ ಎನಿಸಿತು.
ಮೆಟ್ಟಿಲಿಳಿದು ಸಂಜೆಯ ವಾಕ್ ಹೊರಟವಳಿಗೆ ಹೊಸತಾಗಿ ಕೆಳಗಿನ ಮನೆಗೆ ಬಾಡಿಗೆಗೆ ಬಂದಿದ್ದ ಉತ್ತರಕರ್ನಾಟಕದ ಹೆಂಗಸು ಕೂಗಿ 'ವಿನುತಮ್ಮ ಮನೆ ತುಂಬಾ ಜಿರಳೆ ಏನು ಮಾಡಲಿ' ಅಂತ ಕೇಳಿದರು. 'ಅಯ್ಯೋ ಅದಕ್ಕೇನು ಹಿಟ್ ಹೋಡೀರಿ ಎಲ್ಲಾ ಸಾಯ್ತಾವೆ' ಎನ್ನುತ್ತಾ ವಾಕ್ ಹೊರಟೆ. ವಾಕ್ ಮುಗಿಸಿ ವಾಪಸ್ ಬರೋವಾಗ ಕಾಂಪೌಂಡ್ ತುಂಬಾ ಬಿಳಿಯ ಪೌಡರ್. ಕೆಳಗಿನ ಮನೆ ಹೆಂಗಸು 'ಜೋಳದ ಹಿಟ್ಟಿನ ಡಬ್ಬ ಹಿಡಿದು ಮೂಲೆಮೂಲೆಗೆ ಎರಚುತ್ತಿದ್ದರು. 'ಹೇಳಿದ್ರಲ್ಲಮ್ಮ ಅದಕ್ಕೆ ಹಿಟ್ಟು ಹೋಡೀತಿದೀನಿ' ಎಂದರು. ಬಿದ್ದು ಬಿದ್ದು ನಗುವ ಸರದಿ ನನ್ನದಾಗಿತ್ತು.
-ವಿನುತಾ ಸುಧೀರ್
ಕಲೆ: ಗಣೇಶ ಆಚಾರ್ಯ
(‘ಮಯೂರ ಆಗಸ್ಟ್ ೨೦೨೫ರ ಸಂಗ್ರಹಿತ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!