ದಮ್ಮು'ರಾಯರು!

ನಮ್ಮ ತಂದೆ ಬೀಡಿ ಪ್ರಿಯರಾಗಿದ್ದು, ಪರಿಣಾಮ ವಯೋಸಹಜತೆಯಿಂದ ಕೆಮ್ಮು, ದಮ್ಮು, ಅಸ್ತಮಾ ಆಗಾಗ ನೆನಪಿಸುತ್ತಿತ್ತು! ಉಸಿರಾಟ ಸಮಸ್ಯೆಯಿಂದ ಒಮ್ಮೆ ಅವರನ್ನು ಕರೆದುಕೊಂಡು ದವಾಖಾನೆಗೆ ಹೋಗಿದ್ದೆ. ಕೌಂಟರ್‌ನಲ್ಲಿ ವಿವರ ಭರ್ತಿ ಮಾಡುತ್ತಿದ್ದೆ. ಅವರೂ ನನ್ನ ಪಕ್ಕ ಕೂತಿದ್ದು, ನಾನು ಮಾಹಿತಿ ಕೇಳಲು ಕೌಂಟರ್ ಕಡೆ ಹೋದೆ. ಕೌಂಟರ್‌ನವರು 'ಸರದಿ ಬಂದಾಗ ಕರೆಯುವೆ. ಕೂತಿರಿ' ಎಂದರು.

ನಮ್ಮ ತಂದೆಯ ಸರದಿ ಬಂದಾಗ ಯಾರು 'ದಮ್ಮು ರಾಯರು ಬನ್ನಿ!' ಅಂದಾಗ ನಾನು, 'ಅದು ದಮ್ಮು ರಾಯರು ಅಲ್ಲ ಧರ್ಮರಾವ್. ನಮ್ಮ ತಂದೆ ಹೆಸರು ಎಂದೆ. ನಾನು ಭರ್ತಿ ಮಾಡಿದ ಫಾರಂ ತೋರಿಸುತ್ತಾ ನೋಡಿ ಎಂದರು. ಅದರಲ್ಲಿ ಧರ್ಮ ರಾವ್ ಹೊಡೆದು ಹಾಕಿ 'ದಮ್ಮುರಾಯರು' ಎಂದು ಬರೆದಿತ್ತು!.

ನಾನು ಆ ಬರವಣಿಗೆ ನೋಡಿದಾಗ ಅದು ತಂದೆಯ ಕೈ ಬರಹ. ಈ ಅವಸ್ಥೆಯಲ್ಲೂ ತಮಾಷೆ ಕಂಡು ಅಲ್ಲಿದ್ದ ಎಲ್ಲರಿಗೂ ನಗು ತಡೆಯಲಾಗಿಲ್ಲ!

-ನಗರ ಗುರುದೇವ್ ಭಂಡಾರ್ಕರ್

**

ಮೂರರ ಸ್ಥಾನ ದೇವಸ್ಥಾನ!

ಐದನೆಯ ತರಗತಿಯಲ್ಲಿ ಉಪಾಧ್ಯಾಯ ರಮೇಶ್ ಅವರು ಬಿಡಿ, ಹತ್ತು, ನೂರು, ಸಾವಿರ, ಹತ್ತು ಸಾವಿರ ಸಂಖ್ಯೆಗಳ ಸ್ಥಾನ ಮತ್ತು ಅವುಗಳ ಬೆಲೆ ಹೇಳಿಕೊಟ್ಟರು 13,485 ಸಂಖ್ಯೆಯನ್ನು ಬೋರ್ಡಿನ ಮೇಲೆ ಬರೆದರು. ಹದಿಮೂರು ಸಾವಿರದ ನಾಲ್ಕು ನೂರ ಎಂಬತ್ತೈದರಲ್ಲಿ ಮೂರರ ಸ್ಥಾನ ಏನು? ಅಂತ ತೂಕಡಿಸುತ್ತ ಇದ್ದ ಪ್ರವೀಣನನ್ನು ಕೇಳಿದರು.

ತೂಕಡಿಸುತ್ತ ಇದ್ದ ಪ್ರವೀಣ ಸಾವರಿಸಿಕೊಂಡು ಮೂರರ ಸ್ಥಾನ ದೇವಸ್ಥಾನ ಸಾರ್’ ಎಂದು ಉತ್ತರಿಸಿದ. ಕಾರಣ ಪ್ರವೀಣರ ತಂದೆ ದೇವಸ್ಥಾನದ ಪೂಜಾರಿ ಆಗಿದ್ದರು. ತಮ್ಮ ಅದೃಷ್ಟ ಸಂಖ್ಯೆ 3 ಅಂತ ನಂಬಿದ್ದರಿಂದ ಗರ್ಭಗುಡಿಯಲ್ಲಿ 3 ಅಂತ ಅರಿಶಿನ ಮತ್ತು ಕುಂಕುಮದಲ್ಲಿ ತಿದ್ದಿದ್ದರು.

ಗಣಿತದ ಮೇಷ್ಟ್ರು ತುಂಬಾ ಸ್ತ್ರಿಕ್ಟ್ ಆದ್ದರಿಂದ ಯಾರೊಬ್ಬರೂ ನಗುವ ಧೈರ್ಯ ಮಾಡಲಿಲ್ಲ.

-ಮಲ್ಲಿಕಾರ್ಜುನ ಸುರಧೇನುಪುರ

***

ಹಿಂದಿನ್ ಸೀಟ್ಟೋರು!

ಬಸ್ಸು ಒಂದಷ್ಟು ದೂರ ಕ್ರಮಿಸಿತ್ತು. ಆಗ ನನಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂತು. ಕರೆ ಸ್ವೀಕರಿಸಿ. 'ಯಾರು ಮಾತಾಡ್ತಾ ಇರೋದು?' ಎಂದು ಕೇಳಿದೆ.

'ಅದೇ ಮೇಡಂ, ನಿಮ್ಮ ಹಿಂದಿನ್ ಸೀಟ್ಟೋರು' ಎಂಬ ಉತ್ತರ ಬಂತು.

ನಾನು ಅರ್ಧ ಎದ್ದು ನಿಂತು ನನ್ನ ಹಿಂದಿನ ಸೀಟುಗಳತ್ತ ಕಣ್ಣಾಡಿಸಿದೆ. ಪರಿಚಯದ ಮುಖ ಯಾವುದೂ ಕಾಣಲಿಲ್ಲ ಅಲ್ಲದೆ ಯಾರೂ ಫೋನಿನಲ್ಲಿ ಮಾತಾಡುತ್ತಿರುವುದೂ ಗೋಚರಿಸಲಿಲ್ಲ. 'ಯಾರೂ ಕಾಣ್ತಾ ಇಲ್ವಲ್ಲ. ಎಲ್ಲಿದೀರಾ ನೀವು?' ಎಂದು ಕೇಳಿದೆ.

'ಕೋಣನಕುಂಟೆ, ಬೆಂಗಳೂರು' ಎನ್ನಬೇಕೇ!

ಇದೊಳ್ಳೆ ತಮಾಷೆಯಾಯ್ತಲ್ಲಾ ಎಂದುಕೊಂಡು 'ಸ್ಸಾರಿ, ಗೊತ್ತಾಗ್ತಾ ಇಲ್ವಲ್ಲಾ...' ಎಂದೆ.

'ಅಯ್ಯೋ ನಾವು ಟೂರ್ ಹೋಗಿಬಂದು ಇನ್ನೂ ಒಂದು ವಾರವೂ ಆಗಿಲ್ಲಾ. ನಿಮ್ಮ ಹಿಂದಿನ್ ಸೀಟ್ನಲ್ಲಿ ಕೂತಿರುತ್ತಿದ್ದ ನಮ್ಮನ್ನ ಮರೆತುಬಿಡೋದೇ?' ಎಂದರವರು ಆಕ್ಷೇಪಣೆಯ ಧ್ವನಿಯಲ್ಲಿ.

ಆಗಿದ್ದಿಷ್ಟು: ಎಂಟು ದಿನಗಳ ಮಹಾರಾಷ್ಟ್ರ ಪ್ರವಾಸಕ್ಕೆ ಹೋಗಿ ನಾಲ್ಕು ದಿನಗಳ ಹಿಂದಷ್ಟೇ ವಾಪಸ್ ಬಂದಿದ್ದೆವು. ಪ್ರವಾಸದ ಬಸ್ಸಿನಲ್ಲಿ ನಮ್ಮ ಹಿಂದಿನ ಸೀಟಿನಲ್ಲಿ ಕುಳಿತಿರುತ್ತಿದ್ದ ಶಾಂತಾ ಬಹಳ ಆತ್ಮೀಯರಾಗಿದ್ದರು. ಈಗವರು ತಮ್ಮ ಬೇರೊಂದು ಸಂಖ್ಯೆಯಿಂದ ಕಾಲ್ ಮಾಡಿದ್ದರು. ಬಸ್ಸಿನ ಗಲಾಟೆಯಲ್ಲಿ ಅವರ ಧ್ವನಿಯನ್ನೂ ನನಗೆ ಗುರುತಿಸಲಾಗಿರಲಿಲ್ಲ. ಅದು ಇಷ್ಟೆಲ್ಲಾ ಫಜೀತಿಗೆ ಕಾರಣವಾಗಿತ್ತು

-ಬಿ.ಎಸ್. ರಾಜಲಕ್ಷ್ಮಿ

***

ಚಿರತೆ ಬರ್ತದೆ

ಕೊಡಗಿನ ಅರಣ್ಯಧಾಮಕ್ಕೆ ನಾಲ್ವರು ಕಾಲೇಜು ಹುಡುಗಿಯರು ವಿಹಾರಕ್ಕೆ ಹೋಗಿದ್ದರು. ಮುಸ್ಸಂಜೆ ಮರದಡಿ ಪಾರ್ಟಿ ಮಾಡಿ, ಮಲಗಲು ಸಿದ್ಧತೆ ಮಾಡುತ್ತಿದ್ದಾಗ ಹಳ್ಳಿಯವನೊಬ್ಬ ನಾಲ್ಕು ನಾಯಿಗಳೊಂದಿಗೆ ಅಲ್ಲಿಗೆ ಬಂದ.

ಹುಡುಗಿಯರು ಒನಕೆ ಒಬವ್ವನಂತೆ ಕೆರಳಿ, 'ಏನಯ್ಯಾ ಹುಡುಗೀರು ಇರುವ ಕಡೆ ಹೊಂಚು ಹಾಕ್ತಾ ಇದೀಯಾ? ನಾವು ಹಳ್ಳಿ ಹುಡುಗೀರಲ್ಲ. ಗೊತ್ತಾಯ್ತಾ?' ಎಂದು ಗದರಿಸಿ ಕೇಳಿದರು.

'ಹೊಂಚುಗಿಂಚು ಒಂದೂ ನನಗೆ ಗೊತ್ತಿಲ್ಲ ಅಮ್ಮಣ್ಣಿ, ಇಲ್ಲಿ ಚಿರತೆ ಹಿಡಿಯಲು ಅರಣ್ಯ ಇಲಾಖೆಯೋರು ಗೂಡು ಇಟ್ಟಿದಾರೆ. ಅದರಲ್ಲಿ ನಾಯಿ ಕಟ್ಟಿ ಹಾಕಲು ಬಂದಿದ್ದೇನೆ' ಎಂದ ಹಳ್ಳಿಯವ ಮಲಗಲು ಸಿದ್ದರಾದ ಹುಡುಗಿಯರು ಕಕ್ಕಾಬಿಕ್ಕಿ!

-ಪ. ರಾಮಕೃಷ್ಣ ಶಾಸ್ತ್ರಿ

ಕಲೆ: ಗಣೇಶ ಆಚಾರ್ಯ

(‘ಮಯೂರ’ ಮೇ ೨೦೨೬ರ ಸಂಚಿಕೆಯಿಂದ ಸಂಗ್ರಹಿತ)