ಉಪ್ಪಿಸ್ಟಾ

ಸಂಜೆ ಮಗ-ಸೊಸೆ, ಮಕ್ಕಳೊಂದಿಗೆ ಗಾಂಧೀ ಬಜಾರಿಗೆ ಶಾಪಿಂಗಿಗೆ ಹೋಗಿದ್ದರು. ನರಸಮ್ಮನವರಿಗೆ ಮೊಮ್ಮಕ್ಕಳು ಬರುವಷ್ಟರೊಳಗೆ ಏನಾದ್ರೂ ತಿಂಡಿ ಮಾಡಬೇಕೆನ್ನಿಸಿತು. ಹುಳಿಯವಲಕ್ಕಿ, ಅಕ್ಕಿರೊಟ್ಟಿ, ಗುಗ್ಗುರಿ...? ಛೇ! ಈಗಿನ ಮಕ್ಕಳು ಇಂಥವು ಯಾವುದನ್ನೂ ಮುಟ್ಟೋಲ್ಲ. ಏನಿದ್ದರೂ ಅವಕ್ಕೆ ಇಷ್ಟವಾಗೋದು ಇಟಾಲಿಯನ್, ಫ್ರೆಂಚ್ ಮಾತ್ರ. ಏನು ಮಾಡಲಿ ಅಂತ ಅವರು ಮಂಕಾಗಿ ಕುಳಿತರು.

ಥಟ್ಟನೆ ಹ್ಯಾಂ... ಎಂದವರೆ ಮೇಲೆದ್ದು ಅಡುಗೆಮನೆ ಹೊಕ್ಕರು. ಈರುಳ್ಳಿ, ಹಸಿಮೆಣಸಿನ, ಕಾಯಿಯನ್ನು ಚಿತ್ರವಿಚಿತ್ರವಾಗಿ ತುಣುಕಾಗಿಸಿದರು. ನಿಂಬೆಹಣ್ಣಿನ ಬದಲು ಹಿತ್ತಲಲ್ಲಿ ಅಪರೂಪವಾಗಿ ಬಿಟ್ಟಿದ್ದ ಹೆರಳೆಕಾಯಿಯನ್ನು ಉದ್ದಕ್ಕೆ ಹೋಳಾಗಿಸಿದರು. ಹತ್ತೇ ನಿಮಿಷದಲ್ಲಿ ಪಾಕ ಸಿದ್ಧಗೊಂಡಿತ್ತು. ಗೇಟು ಸದ್ದಾಯಿತು. ಮೊಮ್ಮಕ್ಕಳು 'ಫೈನ್ ಸ್ಮೆಲ್' ಅನ್ನುತ್ತಾ ಒಳಬಂದರು. ಮಗ, ಸೊಸೆ ಸದ್ಯ ಹೋಟೆಲ್ಲಿನಲ್ಲಿ ತಿನ್ನದಿದ್ದೇ ಒಳ್ಳೆದಾಯ್ತು ಅಂದುಕೊಂಡರು. ನರಸಮ್ಮ ಬಿಸಿಬಿಸಿಯಾಗಿ

ತಿನ್ನೋರಂತೆ ಇರಿ ಅಂತ ಎರಡು ಪಿಂಗಾಣಿ ತಟ್ಟೆಗಳಿಗೆ ತಯಾರಾದ್ದನ್ನು ಬಾಣಲೆಯಿಂದ ವರ್ಗಾಯಿಸಿದರು. ಮೊಮ್ಮಕ್ಕಳು ಕ್ಷಣಾರ್ಧದಲ್ಲಿ ತಟ್ಟೆ ತೊಳೆದಂತೆ ಅದನ್ನು ಉದರಕ್ಕಿಳಿಸಿದ್ದರು. 'ಇದೇನತ್ತೆ ನಿಮ್ಮ ಪವಾಡ' ಅಂತ ಕೇಳಿದಳು ಸೊನೆ. ನರಸಮ್ಮ ಗುಟ್ಟು ರಟ್ಟು ಮಾಡಿದರು: 'ಎನಿಲ್ಲಮ್ಮ, ನಿನ್ನ ಮಕ್ಕಳು ನಂಗೆ ಗಾಂಧೀ ಬಜಾರ್‌ನಿಂದ್ಲೇ ಮೆಸೇಜ್ ಮಾಡಿದ್ದರು ಏನು ಅಜ್ಜಿ ತಿಂಡಿ ಅಂತ... ಉಪ್ಪಿಸ್ಟಾ ಅಂದಿದ್ದೆ!' ಎಂದರು.

-ಬಿಂಡಿಗನವಿಲೆ ಭಗವಾನ್

***

ಸ್ಪೆಷಲ್ ಹೊಲಿಗೆ!

ಖಾಸಗಿ ಆಸ್ಪತ್ರೆಯೊಂದರಲ್ಲಿ ಶಸ್ತ್ರ ಚಿಕಿತ್ಸೆಗಾಗಿ ಗುಂಡ ಕೌಂಟರಿನಲ್ಲಿ ಹಣ ಕಟ್ಟುವಾಗ ಗೊತ್ತಿಲ್ಲದೇ. ಹೆಚ್ಚುವರಿಯಾಗಿ ಹತ್ತು ಸಾವಿರ ಜಾಸ್ತಿ ಕಟ್ಟಿಬಿಟ್ಟಿದ್ದ ಕೌಂಟರಿನವರು ಅದನ್ನು ಇನ್ನು ಏನೂ ಮಾಡಕ್ಕಾಗಲ್ಲ. ನೀವು ಬೇಕಿದ್ರೆ ಡಾಕ್ಟರಿಗೆ ಹೇಳಿ ಎಂದರು.

ಅದನ್ನು ಡಾಕ್ಟರಿಗೆ ತಿಳಿಸಿದಾಗ, ಅವರು 'ಗುಂಡೂರಾವ್, ನೀವೇನೂ ಯೋಚಿಸಬೇಡಿ. ಆಪರೇಷನ್ ಆದಮೇಲೆ, ನಿಮಗೆ ಸಾಧಾರಣ ಹೊಲಿಗೆ ಬದಲು, ಸ್ಪೆಷಲ್ ಎಂಬ್ರಾಯಡರಿ ಹೊಲಿಗೆ ಹಾಕ್ತಿನಿ' ಎಂದಾಗ, ಗುಂಡನಿಗೆ ತಲೆ ತಿರುಗಿತು!

-ವಿ. ವಿಜಯೇಂದ್ರ ರಾವ್

***

ಬಣ್ಣ ಬದಲಿಸುವ ಸೀರೆ!

ರಿಯಾಯಿತಿ ದರದಲ್ಲಿ ಸೇಲ್ಸ್ ಎಂಬ ಅಬ್ಬರದ ಪ್ರಚಾರದ ಫಲಕ ನೋಡಿ, ಜವಳಿ ಮಳಿಗೆ ಪ್ರವೇಶಿಸಿದ ಸಾವಿತ್ರಮ್ಮನವರು. ಅಲ್ಲಿನ ಸೇಲ್ಸ್ ಗರ್ಲ್ ಒಬ್ಬಳನ್ನು ಕುರಿತು. ತನಗೆ ಹಸುರು ಬಣ್ಣದ ಸೀರೆಯನ್ನು ತೋರಿಸುವಂತೆ ಕೇಳಿದರು.

అల్లి ఇల్లి ಹುಡುಕಿ ಆ ಸೇಲ್ಸ್ ಗರ್ಲ್ ಸೀರೆ ಒಂದನ್ನು ತೋರಿಸಿದಳು. ಅದು ಕೆಂಪು ಬಣ್ಣದ್ದಾಗಿತ್ತು! ಇದನ್ನು ಆಕ್ಷೇಪಿಸಿದ ಸಾವಿತ್ರಮ್ಮ ನವರು ಕೋಪದಿಂದ 'ರೀ... ನಾನು ಕೇಳಿದ್ದು ಹಸುರು ಬಣ್ಣದ ಸೀರೆ. ಆದರೆ ನೀವು ತೋರಿಸ್ತಾ ಇರೋದು ಕೆಂಪು ಬಣ್ಣದ ಸೀರೆ!' ಎಂದರು.

ಅದಕ್ಕೆ ಆ ಸೇಲ್ಸ್‌ ಗರ್ಲ್ ಶಾಂತವದನಳಾಗಿ ತಾಳ್ಮೆಯಿಂದ 'ಮೇಡಂ ಈ ಕೆಂಪು ಸೀರೆಯನ್ನು ಒಮ್ಮೆ ನೀರಿಗೆ ಹಾಕಿ. ಅದು ಹಸುರು ಸೀರೆಯಾಗುತ್ತದೆ! ಮತ್ತೊಮ್ಮೆ ವಾಶ್ ಮಾಡಿದರೆ ಬಿಳಿ ಸೀರೆಯಾಗುತ್ತದೆ' ಎಂದಳು. ಬೆನ್ನು ಬಿದ್ದು ಸುಸ್ತಾಗುವ ಸರದಿ ಸಾವಿತ್ರಮ್ಮನವರದಾಗಿತ್ತು.

-ಚಂದ್ರಕುಮಾರ್ ಡಿ.

***

ಕುಳಿತು ಸಾರು ಮಾಡಿದ್ರು!

ಪಕ್ಕದ ಮನೆಯ ನನ್ನ ಗೆಳತಿಗೆ ನನ್ನ ಐದು ವರ್ಷದ ಮೊಮ್ಮಗನ ಜೊತೆ ಮಾತನಾಡುವುದೇ ಒಂದು ಖುಷಿ, ಈ ಸಲ ರಜೆಗೆ ಅವನು ಇಲ್ಲಿ ಬಂದಾಗ ಒಂದು ಮಧ್ಯಾಹ್ನ ಮನೆಗೆ ಬಂದವರೇ 'ಏನೋ ಊಟ ಆಯ್ತಾ? ಅಜ್ಜಿ ಏನು ಸಾರು ಮಾಡಿದ್ರು?' ಎಂದು ಕೇಳಿದರು.

ಆಗ ಅವನು 'ಓ... ಆಗಲೇ ಆಯ್ತು. ಅಜ್ಜಿ 'ಕುಳಿತು' ಸಾರು ಮಾಡಿದ್ರು' ಎಂದಾಗ ಅವರು ಆಶ್ಚರ್ಯದಿಂದ, 'ಅಲ್ಲಾ. ಅಜ್ಜಿ ಕುಳಿತು ಸಾರು ಮಾಡಿದ್ರೆ, ಅನ್ನವನ್ನು ನಿಂತು ಮಾಡಿದ್ರಾ?' ಎಂದು ಕೇಳಿದರು. ಮೊಮ್ಮಗನಿಗೆ ಅವರ ಪ್ರಶ್ನೆ ಅರ್ಧವಾಗದೆ ನನ್ನ ಕಡೆ ನೋಡಿದಾಗ ಅವರಿಬ್ಬರ ಮಾತು ಕೇಳುತ್ತಿದ್ದ ನನಗೆ ಪರಿಸ್ಥಿತಿಯ ಅರ್ಥವಾಯಿತು.

ನಾನು ಕೂಡಲೇ 'ಹುರುಳಿಗೆ ನಮ್ಮ ಕೊಂಕಣಿಯಲ್ಲಿ 'ಕುಳಿತು' ಅಂತ ಹೇಳುತ್ತೇವೆ. ಅದಕ್ಕೆ ಅವನು ಹುರುಳಿಸಾರು ಅನ್ನೋದಕ್ಕೆ 'ಕುಳಿತು ಸಾರು' ಎಂದು ಕೊಂಕಣಿ ಸೇರಿಸಿ ತನ್ನದೇ ಕನ್ನಡದಲ್ಲಿ ಉತ್ತರಿಸಿದ್ದಾನೆ' ಎಂದಾಗ ಅವರಿಗೆ ಜೋರು ನಗು. ಪ್ರೀತಿಯಿಂದ ಅವನ ಗಲ್ಲ ಸವರಿ 'ಹೌದಾ, ಜಾಣ ನೀನು' ಎಂದು ಹೇಳಿನಕ್ಕರು.

-ಜಯಮಾಲಾ ಫೈ

ಕಲೆ: ಗಣೇಶ ಆಚಾರ್ಯ

(‘ಮಯೂರ’ ಜನವರಿ ೨೦೨೬ರ ಸಂಗ್ರಹಿತ)