ಯುದ್ಧದ ಪರಿಣಾಮ!

'ಮಕ್ಕಳೇ, ಈಚಿನ ಮಧ್ಯಪ್ರಾಚ್ಯ ದೇಶಗಳ ಯುದ್ಧದಿಂದಾದ ಲಾಭ- ನಷ್ಟವೇನು? ಯಾರು ಹೇಳೀರಿ?' ಅಂದ್ರು ಮೇಡಂ.

ಗುಂಡ ಮೊದಲು ಕೈಯೆತ್ತಿ, ‘ನಾನು ಹೇಳ್ತಿನಿ ತುಂಬಾ ಲಾಭ ಇದೆ ಮೇಡಂ' ಅಂತ ಶುರು ಮಾಡಿ, 'ನನ್ನ ಫ್ರೆಂಡ್ಸ್ ಎಲ್ಲಾ ಕೇಳಿದ್ರು ಏನೋ ಗುಂಡಾ ಈಚೆಗೆ ಸ್ಲಿಮ್ ಆಗಿದೀಯಾ ಯಾವ ಜಿಮ್‌ಗೆ ಹೋಗ್ತಿಯಾ ಅಂದ್ರು' ಅಂದಾಗ, 

ಮೇಡಂ 'ಹೌದು ಕಣೋ ಗುಂಡಾ. ನಂಗೂ ಹಾಗೇ ಅನ್ನಿಸ್ತಿದೆ. ಏನು ಮ್ಯಾಜಿಕ್ ಮಾಡಿದೆ?. ಅಂದ್ರು.

'ಅಯ್ಯೋ ಮೇಡಂ, ಯುದ್ಧ ಶುರುವಾಗಿ ಅಡುಗೆ ಸಿಲಿಂಡ‌ರ್ ಸಿಗ್ತಿಲ್ಲ ಅಲ್ವಾ? ಹೋಟೆಲಿನಲ್ಲಿ ಪೂರಿ, ಬಜ್ಜಿ, ಬೋಂಡಾ, ಎಣ್ಣೆ ತಿಂಡಿ ಎಲ್ಲಾ ನಿಂತೋಯ್ತಲ್ಲ. ಆ ಕಾರಣ ನಾನು ಇತಿಮಿತಿ ಇಲ್ಲೆ ತಿಂತಿದ್ದಿದ್ದೂ ಕಮ್ಮಿ ಆಯ್ತು. ಆಟೋಮ್ಯಾಟಿಕ್ ಆಗಿ ಸ್ಲಿಂ ಆಗಿದೀನಿ. ಇದೇ ನನಗಾದ ಲಾಭ. ನನ್ನಂಥ ಒಬೆಸಿಟಿ ಇರೋವ್ರಿಗೆ ಇದು 'ರಾಮಬಾಣ' ಅಂದ. 

ಗುಂಡನ ಮಾತಿಗೆ ಮೇಡಂ ಮತ್ತು ಮಕ್ಕಳು ತಲೆ ಆಡಿಸ್ತಾ ನಕ್ಕರು.

-ಸುಮನಾ

***

ಸಾಹೇಬ್ರು ಬೈತಾರೆ

ಸರ್ಕಾರಿ ಕಚೇರಿಯೊಂದರಲ್ಲಿ, ಕಚೇರಿಯ ಕೆಲಸದ ಆರಂಭದ ಅವಧಿಯಾಗಿದ್ದರೂ ಸಿಬ್ಬಂದಿ ಕೆಲಸ ನಿರ್ವಹಿಸದೇ, ಇತರೆ ಸಿಬ್ಬಂದಿಗಳೊಂದಿಗೆ ಹರಟೆ ಹೊಡೆಯುತ್ತಾ. ಜೋರಾಗಿ ಮಾತನಾಡುತ್ತಾ ಕಾಲಹರಣ ಮಾಡುತ್ತಿದ್ದರು.

ಗುಂಡ. ಸಾಹೇಬ್ರ ಚೇಂಬರ್‌ನಿಂದ ಹೊರ ಓಡಿಬಂದು, ಹರಟೆ ಹೊಡೆಯುತ್ತಿದ್ದ ಸಿಬ್ಬಂದಿ ಕುರಿತು 'ಜೋರಾಗಿ ಗಲಾಟೆ ಮಾಡಬಾರದು ಅಂತೆ ಸಾಹೇಬ್ರು ಬೈತಾವ್ರೆ' ಎಂದ.

ಸಿಬ್ಬಂದಿಯೊಬ್ಬ 'ಸಾಹೇಬ್ರ ಬಳಿ ಅಷ್ಟೊಂದು ಕಡತಗಳು ಬಾಕಿ ಇವೆಯಾ?' ಎಂದ. 'ಎಂಥದ್ದೂ ಇಲ್ಲ ಸರ್, ಸಾಹೇಬರು ನಿದ್ದೆ ಮಾಡ್ತಾವ್ರೆ. ಡಿಸ್ಟರ್ಬ್ ಆಗ್ತಾ ಇದೆಯಂತೆ ಅಂದ' ಗುಂಡ!.

-ಚಂದ್ರಕುಮಾ‌ರ್ ಡಿ.

***

ಇಲ್ಲೇ ಎಲ್ಲೋ ಕೂತಿದ್ದಾಳೆ

ತುಂಬಿದ ಸಭೆಯಲ್ಲಿ ವೇದಿಕೆ ಮೇಲೆ ಕೈಯಲ್ಲಿ ಮೈಕ್ ಹಿಡಿದು ನಿಂತು ಭಾಷಣ ಬಿಗಿಯುತ್ತಿದ್ದ ಒಬ್ಬ ಮಹನೀಯ, 'ನಮ್ಮ ಆಯುಸ್ಸೆಲ್ಲ ಬರೀ ಹೆದರುವುದರಲ್ಲೇ ಕಳೆದು ಹೋಗ್ತಾ ಇದೆ. ಹೇಗೆಂದರೆ ಮೊದಲು ಅಮ್ಮನಿಗೆ. ಎರಡನೆಯದು ಟೀಚರ್‌ ಗೆ, ಅದಾದನಂತರ ನಮ್ಮ ಬಾಸ್‌ ಗೆ' ಎಂದು ಹೇಳಿದ.

ನಡುವೆ ಸಭಿಕರ ಸಾಲಿನಲ್ಲಿ ಕುಳಿತವನೊಬ್ಬ ಎದ್ದು ನಿಂತು 'ಸಾರ್ ನೀವು ನಿಮ್ಮ ಪತ್ನಿ ಬಗ್ಗೆ ಹೇಳಲೇ ಇಲ್ಲ' ಎಂದ.

ಆತ 'ಆಕೆ ಇಲ್ಲೇ ಎಲ್ಲೋ ಕುಳಿತಿರುವುದರಿಂದ ಹೆದರಿ ಆ ಅಂಶ ಹೇಳಿಲ್ಲ' ಎಂದು ವಿವರಿಸಿದಾಗ ಸಭಿಕರ ಸಮೂಹದಿಂದ ಶಿಳ್ಳೆ, ಚಪ್ಪಾಳೆ ಬಂತು.

-ಅರವಿಂದ ಜಿ. ಜೋಷಿ

***

ಪರಿಶೀಲನೆಯ ಪರಿ!

ಪತ್ನಿ, ಪತಿಗೆ ವಾಟ್ಸ್ ಆ್ಯಪ್ ಮೆಸೇಜ್ ಮಾಡಿದಳು.

'ಸಂಜೆ ಆಫೀಸಿಂದ ಮನೆಗೆ ಬರುವಾಗ ತರಕಾರಿ ಖರೀದಿಸಿ ತನ್ನಿ ಹಾಗೇ ಪುಟ್ಟನಿಗೆ ಪೆನ್ಸಿಲ್ ಮತ್ತು ಡ್ರಾಯಿಂಗ್ ಪುಸ್ತಕ ಬೇಕಂತೆ, ಅದನ್ನೂ ತನ್ನಿ. ರಾತ್ರಿ ಊಟಕ್ಕೆ ಚಪಾತಿ ಮಾಡಬೇಕೆಂದಿದ್ದೇನೆ; ಜೊತೆಗೆ ಅಮ್ಲೆಟ್ ಬೇಕಿದ್ದರೆ ಮೊಟ್ಟೆ ಕೂಡಾ ತನ್ನಿ. ಅಂದ. ಹಾಗೆ ನೆರೆಮನೆಯಾಕೆ ನಿಮಗೆ 'ಹಲೋ' ಹೇಳಿ ಕಳಿಸಿದ್ದಾಳೆ.

ಪತಿ ತಕ್ಷಣ ಉತ್ತರಿಸಿದ. 'ಯಾರು ನೆರೆಮನೆಯಾಕೆ?'

ಪತ್ನಿ ಪ್ರತ್ಯುತ್ತರ ರೂಪದಲ್ಲಿ ಸಂದೇಶಿಸಿದಳು : ರೀ, ಸುಮ್ನಿರಿ, ಯಾರೂ ಇಲ್ಲ. ಉದ್ದೇಶ ಪೂರ್ವಕವಾಗಿಯೇ ಮೆಸೇಜ್ ಕೊನೆಯಲ್ಲಿ ಹಾಗೆ ಬರೆದೆ. ನೀವು ಪೂರ್ತಿ ಸಂದೇಶ ಓದಿರುವುದನ್ನು ಖಚಿತಪಡಿಸಿಕೊಳ್ಳಲು ಹಾಗೆ ಮಾಡಿದೆ. ಪತಿಯೀಗ ಇಂಗು ತಿಂದ ಮಂಗನಂತಾದ!

-ರಮಣ್ ಶೆಟ್ಟಿ ರೆಂಜಾಳ

ಕಲೆ: ಗಣೇಶ ಆಚಾರ್ಯ

***

(‘ಮಯೂರ ಮೇ ೨೦೨೬ ಸಂಗ್ರಹಿತ)