ಮೆಹಂದಿ ಆಗೋಯ್ತು!

ಸಿಡ್ನಿಯಿಂದ ನಮ್ಮಣ್ಣನ ಮೊಮ್ಮಗಳು ಐದು ವರ್ಷದ ಅಂಜಲಿ, ತನ್ನ ಅಪ್ಪ-ಅಮ್ಮನೊಂದಿಗೆ ನಮ್ಮ ಮನೆಯ ಮದುವೆ ಸಮಾರಂಭಕ್ಕೆ ಬಂದಿದ್ದಳು. ಕನ್ನಡದಲ್ಲೇ ಚುರುಕಾಗಿ ಮಾತನಾಡುತ್ತಿದ್ದಳು.

ನನ್ನ ಗೆಳತಿಯೊಬ್ಬಳು ನನ್ನ ಬಳಿ 'ಮೆಹಂದಿ ಕಾರ್ಯಕ್ರಮ ಯಾವಾಗ?' ಎಂದು ಕೇಳಿದಾಗ, ಅಲ್ಲೇ ಇದ್ದ ಅಂಜಲಿ 'ನಮ್ಮ ಅಮ್ಮನ ಮೆಹಂದಿ ಇವತ್ತು ಆಗೋಯ್ತು' ಎಂದಳು. ಎಲ್ಲರೂ ಆಶ್ಚರ್ಯದಿಂದ ನೋಡಲು 'ನಮ್ಮಮ್ಮ ಇವತ್ತು ತಲೆಗೆ ಮೆಹಂದಿ ಹಚ್ಚಿಕೊಂಡು ಸ್ನಾನ ಮಾಡಿದ್ದಾಯ್ತು!' ಎಂದಾಗ, ಅಲ್ಲಿದ್ದವರೆಲ್ಲ ನಕ್ಕರು.

-ಎನ್‌.ಪಿ. ಶೈಲಜ, ತಿಪಟೂರು

***

ಗುಂಡನ ಉಳಿತಾಯ ಯೋಜನೆ

'ಮಕ್ಕಳೇ ನಿಮಗೆಲ್ಲ ಉಳಿತಾಯ ಯೋಜನೆ ಬಗ್ಗೆ ತಿಳಿಸಿದ್ದೆ. ಅಮ್ಮ, ಅಪ್ಪನಿಗೆ ತೊಂದರೆಯಾಗದಂತೆ ಕಾಸುಕಾಸು ಕೂಡಿಡಬೇಕೆಂದು, ಅದು ಮುಂದೆ ನಿಮಗೇ ಉಪಯೋಗವಾಗುವುದೆಂದು ತಿಳಿಸಿದ್ದೆ. ಯಾರೆಲ್ಲಾ ಅದನ್ನು ಅನುಸರಿಸುತ್ತಿದ್ದೀರಿ?' ಎಂದು ಮೇಡಂ ಕೇಳಿದರು.

'ಹೌದು ಮೇಡಂ, ನಾವು ನೀವು ಹೇಳಿದ ಹಾಗೆ ಅನುಸರಿಸುತ್ತಿದ್ದೇವೆ' ಅಂದ್ರು ಮಕ್ಕಳು. ಆದ್ರೆ ಸೈಲೆಂಟಾಗಿದ್ದ ಗುಂಡನನ್ನು 'ನೀನೇನಂತಿ ದಡ್ಡ ಗುಂಡಾ? ನಿನಗೆ ಸ್ವಲ್ಪಾನೂ ಬುದ್ದಿಯಿಲ್ಲ. ಎಲ್ಲದ್ರಲ್ಲೂ ಫೇಲ್ ಆಗ್ತಾ ಇರ್ತೀಯಾ? ಏನಾದ್ರೂ ಉಳಿತಾಯ ಮಾಡ್ಬೇಕು ಅಂತ ಅಂದೊಂಡಿದೀಯಾ ಹೇಗೆ?' ಎಂದು ಮೇಡಂ ಕೇಳಿದರು.

'ಇಲ್ಲ. ಮೇಡಂ ಈಗ್ಲೆ ನನ್ನ ತಲೇಲಿರೊ ಬುದ್ದಿ ಖರ್ಚು ಮಾಡಿ… ಮುಂದೆ ಮುದುಕ ಆದಾಗ ಏನು ಗತಿ? ಅದಕ್ಕೇ ಸ್ವಲ್ಪ ಸ್ವಲ್ಪಾನೇ ಬುದ್ಧಿ ಖರ್ಚು ಮಾಡ್ತೀನಿ' ಅಂದಾಗ. ಮೇಡಂ 'ವಾಹ್... ಗುಂಡಾ ಮೆಚ್ಚಿದೆ ನಿನ್ನ ಬುದ್ದಿವಂತಿಕೆ ಅಂದ್ರು, ಜೊತೆಗೆ ಮಕ್ಕಳೆಲ್ಲಾ ನಗುವಿನಲ್ಲಿ ಮುಳುಗಿದ್ರು

-ಸುಮನಾ, ಬೆಂಗಳೂರು

***

ಐಟಮ್ಮು ಫ್ರೆಶ್ ಆಗಿವೆ!

ನಾವು ಗೆಳೆಯರೆಲ್ಲಾ ಸೇರಿ ಹೊರಗಡೆ ರೆಸ್ಟೋರೆಂಟಿಗೆ ಊಟಕ್ಕೆ ಹೋಗಿದ್ದೆವು. ನಮ್ಮ ಗುಂಪಿನ ಒಬ್ಬ ಗೆಳೆಯ ಆ ದಿನ ಬೇರೆ ಊರಿಗೆ ಹೋಗಿದ್ದ. ನಾವೆಲ್ಲರೂ ಒಂದು ನಿರ್ಧಾರಕ್ಕೆ ಬಂದೆವು. ನಾವು ಹೊರಗಡೆ ಊಟಕ್ಕೆ ಹೋಗಿದ್ದು ಅವನಿಗೆ ಗೊತ್ತಾಗಬಾರದು. ಗೊತ್ತಾದರೆ ತನ್ನನ್ನು ಬಿಟ್ಟು ಊಟಕ್ಕೆ ಯಾಕೆ ಹೋಗಿದ್ದೀರೆಂದು ಅವನು ಜಗಳ ಮಾಡುವ ಭಯವಿತ್ತು.

ನಾವು ಊಟ ಮಾಡುವಾಗ ನನ್ನ ಕೀಟಲೆ ಗೆಳೆಯನೊಬ್ಬ ಊಟದ ಫೋಟೊ ತೆಗೆದು ವಾಟ್ಸ್ ಆ್ಯಪ್ ಗುಂಪಿನಲ್ಲಿ ಹಂಚಿಕೊಂಡ. ತಕ್ಷಣ ಬೇರೆ ಊರಿನಲ್ಲಿನ ಗೆಳೆಯ ಕರೆ ಮಾಡಿ, ತನ್ನನ್ನು ಬಿಟ್ಟು ಊಟಕ್ಕೆ ಹೋಗಿದ್ಯಾಕೆ ಎಂದು ಕ್ಯಾತೆ ತೆಗೆದ. ಅವು ಹಳೆಯ ಫೋಟೊ, ಈಗಿನವಲ್ಲ ಎಂದು ನಾನು ಸಮಜಾಯಿಷಿ ನೀಡಿದೆ. ಅದಕ್ಕವನು ಹಳೆಯ ಯಾಕಾಗುತ್ತೆ? ಅಲ್ಲಿನ ಎಲ್ಲಾ ಊಟದ ಐಟಮ್ಮು ಫ್ರೆಶ್ ಆಗಿವೆ, ಈಗಿನವೇ ಇವೆ ಎನ್ನಬೇಕೇ?!.

ನಾನು ಹೌದಲ್ವಾ ಇದು ಈಗಿನ ಫೋಟೊನೇ ಎಂದು ಒಪ್ಪಿಕೊಂಡೆ. 'ನೋಡು, ಹೆಂಗೆ ಕಂಡುಹಿಡಿದೆ' ಎಂದು ಅವನು ನಕ್ಕ ನನ್ನ ಜಾಣತನಕ್ಕೆ ಇಲ್ಲಿನವರು ನನ್ನ ತಲೆಬಡಿದು ನಕ್ಕರು.

-ನರಸಿಂಹಾರೆಡ್ಡಿ ಯಂಕಾಮೋಳ, ಸೇಡಂ

***

ಮೊಬೈಲ್ ಮಹಿಮೆ

ಪರಿಚಯಸ್ಥರಿಗೆ ಹಣವನ್ನು ಆನ್‌ಲೈನ್ ಮೂಲಕ ಕಳುಹಿಸಬೇಕಿತ್ತು. ಅವರ ಫೋನ್ ಸಮಸ್ಯೆ ಇದ್ದುದ್ದರಿಂದ ತಮ್ಮ ಪರಿಚಯಸ್ಥರಿಗೆ ಹಣ ರವಾನಿಸುವಂತೆ ತಿಳಿಸಿದರು.

ನಾನು ಫೋನ್ ಸಂಭಾಷಣೆಯಲ್ಲಿದ್ದ ಕಾರಣ ಅವರು ಹೇಳಿದ ಹಾಗೇ. ನಾನು ಹಣ ಕಳುಹಿಸಬೇಕಾದ ಫೋನ್ ನಂಬರ್ ಅನ್ನು ಒಂದು ಹಾಳೆಯಲ್ಲಿ ಬರೆದುಕೊಂಡೆ.

ಫೋನ್ ನಲ್ಲಿ ಸರಿಯಾಗಿ ಕಾಣದಿರುವುದನ್ನು ಜೂಮ್ ಮಾಡಿ ನೋಡಿದಂತೆ, ಹಾಳೆಯಲ್ಲಿ ನಂಬರ್ ಅನ್ನು ಮಾಡುತ್ತಾ ಹೋದೆ. ಏನೂ ಪರಿಣಾಮವೇ ಆಗಲಿಲ್ಲ. ಆಮೇಲೆ ತಿಳಿಯಿತು ಅದು ಫೋನ್ ಅಲ್ಲ. ಹಾಳೆ ಮೇಲಿರುವ ಅಂಕಿ ಎಂದು.

ಫೋನ್ ನಮ್ಮ ಮೇಲೆ ಎಷ್ಟು ಪ್ರಭಾವ ಬೀರಿದೆ ಎಂದು ತಿಳಿದು ಹಣೆಗೆ ಕೈಕೊಟ್ಟು ಹಲ್ಕಿರಿದು ನಕ್ಕಿದ್ದೆ.

-ದೀಪಶ್ರೀ ಎಸ್. ಕೂಡ್ಲಿಗಿ

ಕಲೆ: ಗಣೇಶ ಆಚಾರ್ಯ

(‘ಮಯೂರ’ ಜನವರಿ ೨೦೨೬ರ ಸಂಚಿಕೆಯಿಂದ ಸಂಗ್ರಹಿತ)