ನೆರಳು ಹಿಡಿ
ಸಾಹುಕಾರ್ ಪಟೇಲನ ಶಿಷ್ಯ ಶೀನನಿಗೆ ಅಂದು ಆರೋಗ್ಯ ಸರಿ ಇರಲಿಲ್ಲ. ಆ ಪ್ರಯುಕ್ತ ಪಟೇಲರ ಸೇವೆಗಾಗಿ ತನ್ನ ಮಗ ಗುಂಡನನ್ನು ಕಳುಹಿಸಿದ್ದ.
ತುರ್ತು ಕೆಲಸದ ನಿಮಿತ್ತ ಸಾಹುಕಾರ ವಟೇಲ್ ಸುಡು ಬಿಸಿಲಿನಲ್ಲಿ ಎಂದಿನಂತೆ ಕೋಟು, ಟೊಪ್ಪಿಗೆ ಚಪ್ಪಲಿ ಧರಿಸಿ ಹೊರಟು ನಿಂತಾಗ, ಆತನ ಹಿಂದೆ ಕೊಡೆ ಓಪನ್ ಮಾಡಿಕೊಂಡು ಗುಂಡ ಓಡಿ ಬಂದ. ಗುಂಡನಿಗಿದು ಹೊಸ ಅನುಭವ. ಹೀಗಾಗಿ ಕೊಡೆ ಹಿಡಿಯುವಾಗ ಅತ್ತಿತ್ತ ವಾಲಾಡಿಸ ತೊಡಗಿದ. ಉರಿ ಬಿಸಿಲು ಸಾಹುಕಾರನ ತಲೆಗೆ ಚುರುಗುಟ್ಟಿತು. ಸಹಿಸಲಾರದೇ ಆತ 'ಏಯ್ss ಗುಂಡಾ... ನೆರಳು ಹಿಡಿ' ಅಂತ ಅಂದಿದ್ದೇ ತಡ, ಗುಂಡ ಕೈಯಲ್ಲಿದ್ದ ಕೊಡೆ ಬಿಸಾಕಿ ಬಗ್ಗಿ ಬಗ್ಗಿ ಅವರ ನೆರಳು ಹಿಡಿಯಲು ಮುಂದಾದಾಗ ಸಾಹುಕಾರನ ಪಿತ್ತ ನೆತ್ತಿಗೇರಿತ್ತು.
-ಅರವಿಂದ ಜಿ. ಜೋಷಿ
***
ಎರಡೂ ತಗೊಂಡೆ
ನಮ್ಮ ಮನೆಗೆಲಸದ ರಂಗಜ್ಜಿಗೆ ಕೆಮ್ಮು ಬರುತ್ತಿತ್ತು. ನನ್ನವಳು ಒಂದು ಬಾಟಲು ಸಿರಪ್ ಮತ್ತು ನಾಲ್ಕು ಮಾತ್ರೆ ಕೊಟ್ಟು, 'ಮೊದಲು ಈ ಸಿರಪ್ ತಗೋ ಅಜ್ಜಿ ಗುಣವಾಗಲಿಲ್ಲ ಅಂತಾದ್ರೆ ಮಾತ್ರ ಮಾತ್ರೆ ತಗೋ' ಎಂದು ಹೇಳಿದ್ದಳು.
ಮರುದಿನ ಅಜ್ಜಿ ಬಂದು, 'ಕೆಮ್ಮು ಗುಣವಾಗಿದೆ ಅಮ್ಮ. ಆದ್ರೆ ತುಂಬಾ ಉಷ್ಣ ಆಗಿದೆ' ಎಂದಳು. ನನ್ನಾಕೆ, ‘ಉಷ್ಣವಾಗಿದೆಯಾ? ನೀವು ಮಾತ್ರೆ ತಗೊಂಡದ್ದೋ, ಸಿರಪ್ಪೋ?' ಎಂದು ಕೇಳಿದಳು.
"ನೀವು ಅಂದಂಗೆ ಮೊದ್ಲು ಸಿರಪ್ ಕುಡ್ಡೆ. ಅರ್ಧ ಗಂಟೆ ಕಳೆದ್ರೂ ಕೆಮ್ಮು ಕಡಿಮೆಯಾಗ್ಲಿಲ್ಲ. ನಾಲ್ಕು ಮಾತೇನೂ ತಿಂದ್ದಿದ್ದೆ. ಈಗ ಕೆಮ್ಮು ಇಲ್ಲ. ಆದ್ರೆ ತುಂಬಾ ಹೊಟ್ಟೆ ನೋಯ್ತಿದೆ' ಎಂದಳು ರಂಗಜ್ಜಿ!
-ಪ. ರಾಮಕೃಷ್ಣ ಶಾಸ್ತ್ರಿ
***
ಹಾರ್ಲಿಕ್ಸ್ ಬಾಟ್ಲಿ!
ನನ್ನ ಅಪ್ಪನಿಗೆ ತಲೆಯಲ್ಲಿ ವಿಪರೀತ ಹೊಟ್ಟಾಗಿ ತುರಿಕೆ ತಾಳಲಾರದೆ ತಲೆಹೊಟ್ಟಿನ ಪರಿಹಾರಕ್ಕೆ ತೀರ್ಥಹಳ್ಳಿಯ ಪಂಡಿತರ ಬಳಿ ಹೋಗಿದ್ದರು.
ಪರೀಕ್ಷಿಸಿದ ಪಂಡಿತರು, 'ಮುಂದಿನ ವಾರ ತಲೆಗೆ ಹಚ್ಚಲು ಇಲ್ಲೇ ತಾಜಾ ತೈಲ ಮಾಡಿಕೊಡುತ್ತೇನೆ ಬರುವಾಗ ಹಾರ್ಲಿಕ್ಸ್ ಬಾಟ್ಲಿ ತನ್ನಿ' ಎಂದರು.
ಅಪ್ಪ ಹೊಸ ಹಾರ್ಲಿಕ್ಸ್ ಬಾಟ್ಲಿ ಕೊಂಡು ಪಂಡಿತರ ಮುಂದೆ 'ನೀವು ಒಂದು ಕೆ.ಜಿ ಹಾರ್ಲಿಕ್ಸ್ ಹೇಳಿದ್ರೋ ಅಥವಾ ಅರ್ಧ ಕೆ.ಜಿ ಹೇಳಿದ್ರೋ ನಾನು ಸರಿಯಾಗಿ ಕೇಳಿಕೊಂಡು ಹೋಗಲಿಲ್ಲ. ಏನಾದರಾಗಲಿ ಎಂದು ಒಂದು ಕೆ.ಜಿ ಹಾರ್ಲಿಕ್ಸ್ ತಂದೆ' ಎಂದು ಪಂಡಿತರ ಮುಂದಿಟ್ಟಾಗ, ಅವರು ಕಿಸಿಕಿಸಿ ನಗುತ್ತಾ, 'ಅಲ್ಲ ಯಜಮಾನೆ ನಾನು ಹೇಳಿದ್ದು, ತೈಲ ಹಾಕಲಿಕ್ಕೆ ಖಾಲಿ ಹಾರ್ಲಿಕ್ಸ್ ಬಾಟ್ಲಿ ಇದ್ದರೆ ತನ್ನಿ ಅಂತ' ಎಂದರು.
ಅಪ್ಪ, ನಾಚಿಕೆಯಿಂದ ಪೆಚ್ಚಾದ್ರಂತೆ. ಈ ವಿಷಯ ಮನೆಗೆ ಬಂದು ಹೇಳುತ್ತಿದ್ದಂತೆ ನಾವೆಲ್ಲಾ ಏನು ಎತ್ತ ಎಂದು ಕೇಳದ ಅಪ್ಪನ ಅಮಾಯಕತನಕ್ಕೆ ನಕ್ಕಿದ್ದೇ ನಕ್ಕಿದ್ದು. ಇದು ಹಳೇ ಘಟನೆಯಾದರೂ ಈಗಲೂ ಹಾರ್ಲಿಕ್ಸ್ ಬಾಟ್ಲಿ ನೋಡುತ್ತಿದ್ದಂತೆ ನೆನಪಾಗುತ್ತೆ.
-ಅನಸೂಯಾ ತ್ರಿವಿಕ್ರಮ್
***
ಕಣ್ಣಾಗಿರಬೇಕಾದ ಕಾಲ!
ಕನ್ನಡದ ಶಿಕ್ಷಕರಾದ ರಮೇಶ್ ಅವರು ಆಗಾಗ ತಮ್ಮ ತರಗತಿಗಳಲ್ಲಿ ಹೇಳುತ್ತಿದ್ದ ಮಾತುಗಳು 'ಪ್ರಶ್ನೆಯನ್ನು ಒಂದಲ್ಲ ಎರಡು ಬಾರಿ ಓದಿ ಅರ್ಥೈಸಿಕೊಳ್ಳಿ. ಅದರಲ್ಲೇ ಉತ್ತರ ಅಡಕವಾಗಿರುತ್ತೆ ಸ್ವಲ್ಪ ಯೋಚಿಸಿ' ಅಂತ.
ಇದನ್ನೇ ಮನನ ಮಾಡಿಕೊಂಡಿದ್ದ ಮುರಳಿ ಪರೀಕ್ಷೆಯಲ್ಲಿ ಪ್ರಶ್ನೆ ಓದಿಕೊಂಡ: 'ನಮ್ಮ ನೆರೆಹೊರೆಯ ರಾಷ್ಟ್ರಗಳು ತಮ್ಮ ತಮ್ಮ ಮಿಲಿಟರಿ ಶಕ್ತಿಯನ್ನು ಗಣನೀಯವಾಗಿ ಹೆಚ್ಚಿಸಿ ಕೊಂಡಿವೆ. ಇದು ಯಾವ ಕಾಲ?' ಎಂಬ ಪ್ರಶ್ನೆ ಕೇಳಲಾಗಿತ್ತು.
ಮುರಳಿ ಈ ಪ್ರಶ್ನೆಯನ್ನು ಎರಡು ಬಾರಿ ಮನಸ್ಸಿನಲ್ಲಿಯೇ ಓದಿಕೊಂಡ. ನಂತರ ನಮ್ಮ ನೆರೆಹೊರೆಯ ರಾಷ್ಟ್ರಗಳು ತಮ್ಮ ತಮ್ಮ ಮಿಲಿಟರಿ ಶಕ್ತಿಯನ್ನು ಗಣನೀಯವಾಗಿ ಹೆಚ್ಚಿಸಿ ಕೊಂಡಿವೆ ಅಂದರೆ, ಖಂಡಿತವಾಗಿಯೂ ನಮ್ಮ ದೇಶದವರು ಮೈಯೆಲ್ಲ ಕಣ್ಣಾಗಿರಬೇಕಾದ ಕಾಲ!' ಅಂತ ಉತ್ತರ ಬರೆದ.
-ಮಲ್ಲಿಕಾರ್ಜುನ ಸುರಧೇನುಪುರ
(‘ಮಯೂರ’ ಡಿಸೆಂಬರ್ ೨೦೧೫ರ ಸಂಗ್ರಹಿತ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!