ಲವ್ ಲೆಟರ್

ಎಲೆಕ್ಟ್ರಿಕ್ ಮೀಟರ್ ರೀಡರ್ ఆగి ಉದ್ಯೋಗ ಮಾಡುತ್ತಿದ್ದ ನಂಜ ಪ್ರತಿ ತಿಂಗಳು ಆ ಬಡಾವಣೆಯಲ್ಲಿನ ಮನೆಗಳಿಗೆ ಎಲೆಕ್ಟಿಕ್ ಬಿಲ್ ಕೊಡುತ್ತಿದ್ದ. 

ಒಂದು ಸಾರಿ ಬಿಲ್‌ ತೆಗೆದುಕೊಳ್ಳಲು ಬಂದ ಹುಡುಗಿಯನ್ನು ನೋಡಿದ. ಬಹಳ ಸುಂದರವಾಗಿದ್ದಳು. ಅವಳ ಮೇಲೆ ಪ್ರೀತಿ ಉಂಟಾಗಿ ಅವಳನ್ನು ನೋಡಲೆಂದು ಅವಳ ಮನೆ ಮುಂದೆ ಓಡಾಡುತ್ತಿದ್ದ. ಬಹಳ ಯೋಚನೆ ಮಾಡಿ ಅವಳಿಗೊಂದು ಲವ್ ಲೆಟರ್ ಬರೆದು ಅವಳ ಕೈಗೆ ಕೊಟ್ಟು ಹೋದ. ಆ ಲವ್ ಲೆಟರ್ ಅನ್ನು ಅವಳು ತನ್ನ ತಂದೆಗೆ ಕೊಟ್ಟು 'ಅಪ್ಪ ಕರೆಂಟ್ 'ಬಿಲ್ ಬಂದಿದೆ' ಅಂದಳು!

-ವಿ. ಹೇಮಂತ ಕುಮಾರ್

***

ಕೊಡ್ತೀನಿ ಅಂತ ಒಪ್ಪೋಬಾರದು

ಇಲಾಖೆಯು ಶಾಲೆಗಳಲ್ಲಿ ನೈತಿಕ ಶಿಕ್ಷಣ ಕಡ್ಡಾಯಗೊಳಿಸಿದ ಮೇಲೆ ನಮಗೆ ಕ್ಲಸ್ಟರ್ ಹಂತದಲ್ಲಿ ಸಭೆ ಮಾಡಿ ನೈತಿಕ ಶಿಕ್ಷಣದ ಮಹತ್ವ ಮತ್ತು ಅಗತ್ಯತೆಯ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಸಿಕ್ಕಿತ್ತು.

ಮರುದಿನ ನಾಲ್ಕನೇ ತರಗತಿ ಮಕ್ಕಳಿಗೆ ನೀತಿ ಶಿಕ್ಷಣ ಅವಧಿಯಲ್ಲಿ ಸತ್ಯಹರಿಶ್ಚಂದ್ರ ರಾಜನ 'ಸತ್ಯ ಮತ್ತು ಪ್ರಾಮಾಣಿಕತೆ' ಬಗೆಗಿನ ಕಥೆಯನ್ನು ಸೊಗಸಾಗಿ ಮನಸ್ಸಿಗೆ ನಾಟುವಂತೆ ಹೇಳಿದೆ. ಎಲ್ಲಾ ಮಕ್ಕಳು ತದೇಕಚಿತ್ತದಿಂದ ಕೇಳಿದರಾದರೂ ಕಥೆ ಮುಗಿದ ಮೇಲೆ ನಾನು ಈ ಕಥೆಯ ನೀತಿ ಏನು ಹೇಳಿ ಎಂದು ಕೇಳಿದಕ್ಕೆ ಚಿರಾಗ್ ಎಂಬ ತುಂಟ 'ನಾನು ಹೇಳ್ತೀನಿ ಸಾ‌ರ್' ಎಂದು ಕೈ ಎತ್ತಿದ.

'ಹೇಳು ಎಂದೆ. 'ಯಾರಾದರೂ ಏನಾದರೂ ಕೇಳಿದರೆ ಕೊಡ್ತೀನಿ ಅಂತ ಒಪ್ಪಿಕೊಳ್ಳಬಾರದು' ಅಂತ ಹೇಳಿದ್ದಕ್ಕೆ ನಾನು ಕ್ಷಣಹೊತ್ತು ತಬ್ಬಿಬ್ಬಾಗಿ ಕುಳಿತು ಕೊಳ್ಳಬೇಕಾಯಿತು.

-ಸೋಮಶೇಖರ ಡಿ.ಬಿ.

***

ಕೋರಿಕೆ, ನೆರವೇರಿಕೆ!

ಲಲಿತಾ ತನ್ನ ಪತಿ ಕೇಶವನಿಗೆ ಎಂದೂ ಸೋಲುತ್ತಿರಲಿಲ್ಲ. ತನ್ನದೇ ನಡೆಯಬೇಕೆಂಬ ಹಟ. ಇದರಿಂದಾಗಿ ಕೇಶವನಿಗೆ ಜೀವನವೇ ಬೇಸರವಾಗಿ ಹೋಗಿತ್ತು. ಒಮ್ಮೆ ಇಬ್ಬರೂ ಹಾದಿಯಲ್ಲಿ ಹೋಗುತ್ತಿರಬೇಕಾದರೆ ಆ ಹಾದಿ ಬದಿಯಲ್ಲಿ ಜನರ ಗುಂಪೊಂದು ಕಾಣಿಸಿತು. ವಿಚಾರಿಸಲಾಗಿ ಈ ಹಾದಿ ಬದಿಯಲ್ಲಿರುವ ಬಾವಿಗೆ ನಮ್ಮ ಮನಸ್ಸಿನ ಕೋರಿಕೆಯನ್ನು ಹೇಳಿ ನಾಣ್ಯವನ್ನು ಹಾಕಿದರೆ ಅದು ಖಂಡಿತ ಈಡೇರುತ್ತದೆ ಎನ್ನುವ ವಿಷಯ ತಿಳಿಯಿತು.

ತಕ್ಷಣವೇ ಕೇಶವ ಬಾವಿಯಲ್ಲಿ ನಾಣ್ಯವೊಂದನ್ನು ಹಾಕಿದನು. ಆತನಿಗಿಂತ ತಾನೇನು ಕಡಿಮೆ ಎಂದು ಲಲಿತಾ ತಾನು ಕೂಡ ನಾಣ್ಯವೊಂದನ್ನು ಹಾಕಲು ಬಾವಿಯ ಬಳಿ ಹೋದಾಗ ಅಕಸ್ಮಾತ್ ಕಾಲು ಜಾರಿ ಬಾವಿ ಒಳಗೆ ಬಿದ್ದಳು.

ಕೇಶವ ತನಗೆ ತಾನೇ 'ದೇವರೇ ಇಷ್ಟು ಬೇಗ ನನ್ನ ಕೋರಿಕೆಯನ್ನು ನೆರವೇರಿಸಿದೆಯಾ' ಎಂದು ಕೊಳ್ಳುತ್ತಾ ಬಾವಿಯಲ್ಲಿರುವ ತನ್ನ ಹೆಂಡತಿಯನ್ನು ನೋಡಲು ಬಾವಿಯ ಬಳಿ ಸಾರಿದಾಗ ಆತನು ಕಾಲು ಜಾರಿ ಅದರಲ್ಲಿ ಬಿದ್ದನು!

-ಶಂಕರೇಗೌಡ ತುಂಬಕೆರೆ

***

ನಿಲ್ಲಿಸಿದ್ಯಾಕೆ?

ಸರ್ವೋತ್ತಮರಾಯರು ವರಾಂಡದಲ್ಲಿ ಪೇಪರ್ ಓದುತ್ತಾ ಕುಳಿತಿದ್ದರು. ಹುಡುಗರ ಗುಂಪೊಂದು ಬಂದಿತು. 'ಸಾರ್, ಏರಿಯಾದಲ್ಲಿ ಗಣಪತಿಯನ್ನು ಕೂಡಿಸುತ್ತಿದ್ದೀವಿ. ಚಂದಾ ಕೊಡಿ' ಎಂದಿತು.

'ನಾನು ಕೊಡೋಲ್ಲ. ನಿಮ್ಮದು ಆಡೋದೊಂದು, ಮಾಡೋದೊಂದು' ಎಂದರು ರಾಯರು.

'ಯಾಕೆ ಸಾರ್. ಹಾಗಂತೀರಾ?' ಎಂದು ಹುಡುಗರ ಗುಂಪು ಕೇಳಿತು.

ರಾಯರು ಹೇಳಿದರು 'ಇನ್ನೇನು ಮತ್ತೆ? ಕಳೆದ ಸಾರಿಯೂ ಹೀಗೇ ಗಣೇಶನನ್ನು ಕೂಡಿಸುವೆವೆಂದು ಹೇಳಿ ನನ್ನಿಂದ ಚಂದಾ ಪಡೆದು ಹೋದಿರಿ. ಆದರೆ ಮಾಡಿದ್ದೇನು? ನಿಂತ ಗಣಪನನ್ನ ತಂದಿರಿ! ಇದು ಮೋಸ ಅಲ್ವಾ?' ಎಂದಾಗ ಹುಡುಗರು ಪೆಚ್ಚಾದರು.

ಕೆ. ಶ್ರೀಕಲಾ ಹೆಬ್ಬಾರ್

ಕಲೆ: ಗಣೇಶ ಆಚಾರ್ಯ

(‘ಮಯೂರ’ ಡಿಸೆಂಬರ್ ೨೦೨೫ರ ಸಂಗ್ರಹಿತ)