ಶುಭಾಂಶು ಮೆಂತೆ ಸೊಪ್ಪು!

ಸೊಪ್ಪಿನ ಜಯಮ್ಮನಿಂದ ಬೀದಿಯಲ್ಲಿ 'ಶುಭಾಂಶು ಮೆಂತೆ ಸೊಪ್ಪು 'ಎಂದು ಕೂಗೋದು ಕೇಳಿಸಿತು.

ವಿಚಾರಿಸಿದಾಗ ‘ಅಪ್ಪಟ ಸಾವಯವ. ಭೂಮಿಯಲ್ಲಿ ಬಿತ್ತಿದ್ದಲ್ಲ, ಆಗಸದಲ್ಲಿ ಬಿತ್ತಿದ್ದು!. ಶುಭಾಂಶು ಶುಕ್ಲಾ ವಿಜ್ಞಾನಿ ಬಿತ್ತಿದ್ದು, ಮಾಮೂಲಿ ರೇಟೇ ಹೆಚ್ಚೇನಿಲ್ಲ. ಯಾಕಂದ್ರೆ ಸಾಗಾಟ ವೆಚ್ಚ ಇಲ್ಲವೇ ಇಲ್ಲ. ಮೇಲಿಂದ ಪಿಂಡಿ ಕಟ್ಟಿ ಹಾಕಿದ್ರೆ, ಇಲ್ಲಿಗ್ ಬಂದ್ ಬೀಳುತ್ತೆ! ತುಂಬಾ ಸತ್ವ ಭರಿತ. ಅಲ್ಲಿನ ಮಣ್ಣು ಇನ್ನೂ ರಾಸಾಯನಿಕದಿಂದ ಕೆಟ್ಟೋಗಿಲ್ಲ. ಅಪ್ಪಟ ಜವಾರಿ ತಿಂದು ನೋಡಿ, ನಾಳೆ ಮತ್ತೆ ಹುಡಿಕ್ಕೊಂಡ್ ಬತ್ತೀರ ಎಷ್ಟು ಕೊಡ್ಲಿ ?' ಜಯಮ್ಮ ಒಂದೇ ಉಸಿರಿನಲ್ಲಿ ಉಲಿದಳು.

'నింಗೆ ಹೇಗ್ ಇದೆಲ್ಲಾ ಗೊತ್ತಾಯ್ತು ಜಯಮ್ಮ?' ಎಂದು ಕೇಳಿದೆ. ಅಯ್ಯೋ  ಸಾಮಿ. ಟಿ.ವಿ ನೋಡಿ ಬರೀ ಅದೇ ಬತ್ತದೆ. ಮೆಂತೆ ಮಾತ್ರ ಬೇಗ ಕೊಯ್ಲಿಗೆ ಬಂದೈತೆ.

ಮುಂದೆ ಹರಿವೆ, ಕೊತ್ತಂಬ್ರಿ, ಪಾಲಕ್ಕು. ಸಬ್ಬಸಿಗೆ ಎಲ್ಲಾ ಮೇಲಿಂದಾನೇ ಬತ್ತದೆ!' ಎನ್ನಬೇಕೆ? ಜಯಮ್ಮನ ವರ್ತಮಾನದ ಅಪ್ಡೇಟ್, ತನ್ನ ವ್ಯಾಪಾರಿ ಚಮತ್ಕಾರಕ್ಕೆ ಧಳಕು ಹಾಕಿದ್ದು ಅಚ್ಚರಿ ಮೂಡಿಸಿತು.

-ನಗರ ಗುರುದೇವ್ ಭಂಡಾರ್ಕರ್

***

ನನಗೇ ಮದುವೆ !

ಪ್ರೊ. ಗೋವಿಂದ ರೆಡ್ಡಿಯವರು ನಿವೃತ್ತಿ ಹೊಂದಿ, ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ತಮ್ಮ ಮಗನ ಜೊತೆಯಲ್ಲಿ ನಮ್ಮ ಬೀದಿಯಲ್ಲೇ ವಾಸವಾಗಿದ್ದರು.

ಮದುವೆಗೆ ಹುಡುಗಿ ಬೇಕೆಂದು ಯಾರಾದರೂ ಇದ್ದರೆ ಹೇಳಿ ಎಂದು ಯಾವಾಗಲೂ ಕೇಳುತ್ತಿದ್ದರು. ನಮಗೆ ಪರಿಚಯವಿದ್ದ ಹುಡುಗಿಯ ಫೋಟೊ ಜಾತಕದೊಂದಿಗೆ ಹುಡುಗಿಯ ತಂದೆಯನ್ನು ಕರೆದುಕೊಂಡು ರೆಡ್ಡಿ ಮನೆಗೆ ಹೋದೆವು. ಕಾಫಿ, ತಿಂಡಿ ಉಪಚಾರದ ನಂತರ ಹುಡುಗನನ್ನು (ಅವರ ಮಗನನ್ನು) ತೋರಿಸಲು ಕೇಳಿದೆವು. ರೆಡ್ಡಿಯವರು ಅರ್ಥವಾಗದೆ ಪೆಚ್ಚಾದವರಂತೆ. 'ನನಗೇ ಹುಡುಗಿ ತೋರಿಸಲು ಕೇಳಿದ್ದು, ನನ್ನ ಹೆಂಡತಿ ತೀರಿ ಹೋಗಿದ್ದಾಳೆ. ಇನ್ನೊಂದು ಮದುವೆ ಮಾಡಿಕೊಳ್ಳೋಣ ಅಂತ' ಎಂದು ಬೋಳು ತಲೆಯ ಮೇಲೆ ಕೈ ಆಡಿಸುತ್ತಾ ಜೋತು ಬಿದ್ದ ಬಾಯಿಗೆ ಕಟ್ಟಿಸಿದ ಹಲ್ಲನ್ನು ಹ್ಹಿ ಹ್ಹಿ ಎಂದು ಕಿರಿದರು. ಆಗ ಬೇಸ್ತು ಬೀಳುವ ಸರದಿ ನಮ್ಮದಾಗಿತ್ತು.

-ಅನಸೂಯಾ ತ್ರಿವಿಕ್ರಮ್

***

ಅಮರೀಶ್ ಪುರಿ ಮನೆ

ಕಳೆದ ತಿಂಗಳು ನಾನು ನನ್ನ ಸ್ನೇಹಿತೆ ಲತಾ ಜೋಶಿ ಹುಬ್ಬಳ್ಳಿಯ ಮತ್ತೊಬ್ಬ ಸ್ನೇಹಿತೆ ವಿಜಯಾ ಮನೆಗೆ ಹೋಗಿದ್ವಿ. ಎರಡು ದಿನಗಳಲ್ಲಿ ನೋಡಬೇಕಾದ ಸ್ಥಳಗಳನ್ನು ವಿಜಯ ಆಗಲೇ ನಿರ್ಧರಿಸಿಯಾಗಿತ್ತು.

ಅಂದು 'ಮೂರು ಸಾವಿರ ಮಠಕ್ಕೆ ಹೋಗೋಣ' ಎಂದು ಪರಿಚಯದ ಆಟೋ ತರಿಸಿದಳು. ಹಾಗೇ ಹೋಗುತ್ತಿದ್ದಾಗ ಒಂದು ಕಿರುದಾರಿಯ ಕಡೆ ತಿರುಗಿ, ಅಲ್ಲೊಂದು ಮನೆಯ ಕಡೆ ಬೆರಳು ತೋರಿಸಿ, 'ಅಕ್ಕಾ. ಇದು ಅಮರೀಶ್ ಪುರಿ ಮನೆ' ಅಂದಳು. ಅಲ್ಲಿ ದೊಡ್ಡದಾದ ಪಾಳುಬಿದ್ದ ಮನೆ ಕಂಡಿತು. 'ಅಯ್ಯ... ಆ ಅಮರೀಶ್ ಪುರಿ ಇಲ್ ಬಂದ್ ಯಾಕ್ ಮನೆ ತಗಳ್ತಾನೆ? ಅದೂ ಹಳೀ ಮನೆ? ಅವ್ರ ಪೂರ್ವಜರದ್ದು ಇರಬೇಕು' ಎಂದರು ಲತಾ. ನಾನೂ ಅವ್ರ ಮಾತಿಗೆ ತಲೆಯಾಡಿಸಿದೆ.

ಮೂರು ಸಾವಿರ ಮಠ ವೀಕ್ಷಿಸುತ್ತಿದ್ದಾಗ. ಎದುರಾದ ವ್ಯಕ್ತಿಯೊಬ್ಬರ ಮಾತನಾಡಿಸಿದ ದಾರೀಲಿ ... ವಿಜಯಾ, ಬರ್ತಾ ತೋರ್ಸಿದ್ದಲ್ಲ ಮನೆ. ಅದು ಇವದ್ದು. ಇವ್ರು ಅಮರೀಶ ಪುರಿ ನಮ್ಮ ಅಕ್ಕನ ಮಗ' ಎಂದು ಪರಿಚಯಿಸಿದಳು. ನಾವಿಬ್ಬರೂ ಪರಸ್ಪರ ಮುಖ ನೋಡಿಕೊಂಡೆವು. ನಂತರ 'ನಮಸ್ಕಾರ ಸರ್. ಅದೇನು ನಿಮ್ ಹೆಸರು ಅಮರೀಶ ಪುರಿ ಅಂತ? ನಮಗೆ ಗೊತ್ತಿರೋದು ವಿಲನ್ ಅಮರೀಶ್ ಪುರಿ ಒಬ್ರೇ' ಎಂದೆವು. ಅದಕ್ಕವರು, 'ನಮ್ಮಪ್ಪಾರಿಗೆ ಅಮರೀಶ್ ಫೇವರೇಟ್. ಅದಕ್ಕ ನನಗ ಆ ಹೆಸ್ರ ಇಟ್ಟಾರ' ಎಂದಾಗ ಮತ್ತೊಮ್ಮೆ ಬೇಸ್ತು ಬೀಳೋ ಸರದಿ ನಮ್ಮದಾಗಿತ್ತು. 

-ಸುಮಾ ಕಳಸಾಪುರ

***

ನೀವೂ ಬನ್ನಿ ಸಾರ್!

'ಅಪರಾಧ ತಡೆ ಮಾಸಾಚರಣೆ' ಹಿನ್ನೆಲೆಯಲ್ಲಿ ಪ್ರಾಂಶುಪಾಲರೊಬ್ಬರು ಪೊಲೀಸ್ ಸಬ್ ಇನ್‌ಸ್ಪೆಕ್ಟ‌ರ್ ಅನ್ನು ಕಾಲೇಜಿಗೆ ಆಹ್ವಾನಿಸಿದ್ದರು.

ಆ ಕಾರ್ಯಕ್ರಮದ ದಿನ ಇನ್‌ಸ್ಪೆಕ್ಟರ್ ಅವರು ಕೇಸ್ ಒಂದರ ಆರೋಪಿಯನ್ನು ಬಂಧಿಸಿ ಪೊಲೀಸ್ ಜೀಪ್‌ನಲ್ಲಿ ಕೂರಿಸಿಕೊಂಡು ಸ್ಟೇಷನ್ ಕಡೆ ಹೊರಟಿದ್ದರು. ಆಗ ಕಾಲೇಜಿನ ಕಾರ್ಯಕ್ರಮ ನೆನಪಾಗಿ ಅದನ್ನು ಮುಗಿಸಿಕೊಂಡೇ ಸ್ಟೇಷನ್‌ಗೆ ಹೋದರಾಯಿತು ಎಂದು ಇನ್‌ಸ್ಪೆಕ್ಟರ್ ಅವರು ಕಾಲೇಜು ಆವರಣದಲ್ಲಿ ತಮ್ಮ ಜೀಪ್ ನಿಲ್ಲಿಸಿದರು.

ಆಗ ಅವರನ್ನು ಎದುರುಗೊಂಡು ಕಾಲೇಜಿನ ಉಪನ್ಯಾಸಕರೊಬ್ಬರು ಸ್ವಾಗತಿಸುತ್ತ ಕರೆದೊಯ್ಯಲು ಮುಂದಾದರು. ಆ ಸಬ್ ಇನ್‌ಸ್ಪೆಕ್ಟರ್. ಇತರೆ ಪೇದೆಗಳು ಮತ್ತು ಆರೋಪಿಯನ್ನು ಜೀಪ್‌ ನಲ್ಲೇ ಕೂಡಲು ಹೇಳಿ ಹೊರಡಲು ಅನುವಾದರು. ಆಗ ಆ ಉಪನ್ಯಾಸಕ ' ನೀವೂ ಕೂಡಾ ಬನ್ನಿ ಸರ್' ಎಂದು ಆರೋಪಿಯನ್ನು ಕರೆಯಲು ಮುಂದಾದಾಗ, ಆ ಪೊಲೀಸ್ ಸಿಬ್ಬಂದಿ ನಗುತ್ತಾ, 'ಅಯ್ಯೋ ಅವನು ನಮ್ಮ ಸಿಬ್ಬಂದಿಯಲ್ಲ, ಆರೋಪಿ' ಎಂದು ಹೇಳಿದಾಗ ಉಪನ್ಯಾಸಕರ ಮುಖ ಕಳೆಗುಂದಿತ್ತು.

-ನಾಗರಾಜ ಮಗ್ಗದ

ಕಲೆ: ಗಣೇಶ ಆಚಾರ್ಯ

(‘ಅಕ್ಟೋಬರ್ ೨೦೨೫’ ಮಯೂರ ಸಂಗ್ರಹಿತ)