ವಕೀಲಿಕೆ ಬುದ್ದಿ

ರೈಲಿನ ಬೋಗಿಯಲ್ಲಿ ಒಬ್ಬ ವಕೀಲ ಕೂತಿದ್ದ. ಆತ ಕುಳಿತಿದ್ದ ಜಾಗದಲ್ಲಿ ಯಾರೂ ಇರಲಿಲ್ಲ. ಆಧುನಿಕ ಉಡುಗೆ ತೊಟ್ಟ ಮಹಿಳೆಯೊಬ್ಬಳು ಬಂದವಳೇ ಏಕಾಏಕಿ 'ಏಯ್ ಮಿಸ್ಟರ್, ನಿನ್ನ ಬಳಿ ಇರುವ ಹಣ, ಬಂಗಾರ, ವಾಚ್, ಮೊಬೈಲ್ ಕೊಟ್ಟರೆ ಸರಿ. ಇಲ್ಲಾಂದ್ರೆ ನೀನು ನನಗೆ ಕಿರುಕುಳ ಕೊಟ್ಟಿದ್ದಿ ಎಂದು ಬೊಬ್ಬೆ ಹಾಕಿ ಜನರನ್ನು ಸೇರಿಸುವೆ' ಎಂದು ಬೆದರಿಕೆ ಒಡ್ಡಿದಳು.

ಆಕೆಯ ಮಾತನ್ನು ಆಲಿಸಿದ ವಕೀಲ ನಿಧಾನವಾಗಿ ತನ್ನ ಸೂಟ್‌ಕೇಸ್ ತೆರೆದು ಅದರೊಳಗಿಂದ ಒಂದು ಖಾಲಿ ಹಾಳೆ ತೆಗೆದು ಆಕೆಗೆ ಕೊಡುತ್ತಾ, 'ತಾನು ಹುಟ್ಟು ಮೂಕ. ಜೊತೆಗೆ ಕಿವುಡನೂ ಆಗಿದ್ದೇನೆ. ನೀನು ಏನು ಹೇಳಬೇಕೋ ಅದನ್ನು ಈ ಕಾಗದದಲ್ಲಿ ಬರೆದುಕೊಡು' ಎಂದು ಸಂಜ್ಞೆ ಮೂಲಕ ಹೇಳಿ ಅದನ್ನು ಕೊಟ್ಟ. ಆ ಮಹಿಳೆ ಆತನಿಂದಲೇ ಪೆನ್ನು ಪಡೆದು ಸ್ವಲ್ಪ ಹೊತ್ತಿಗೆ ಮುಂಚೆ ತಾನು ಆತನಿಗೆ ಏನು ಹೇಳಿದ್ದಳೋ ಅದನ್ನೇ ನೀಟಾಗಿ ಬರೆದು ಆತನ ಕೈಗೆ ಕೊಟ್ಟಳು. ಅದನ್ನು ಪಡೆದ ವಕೀಲ ನೀಟಾಗಿ ಮಡಿಸಿ ತನ್ನ ಸೂಟ್‌ಕೇಸ್‌ನೊಳಗೆ ಇಟ್ಟವನೆ ಜೋರಾಗಿ ಆಕೆಗೆ 'ಅದೇನು ಕೂಗಬೇಕು ಅಂತಿದ್ದಿಯೋ ಈಗ ಕೂಗು. ಅದೆಲ್ಲ ಈಗ ನನ್ನ ಬಳಿ ಲಿಖಿತ ದಾಖಲೆ ಇದೆ' ಎಂದು ಹೇಳಿ ಮುಗಿಸುವಷ್ಟರಲ್ಲಿ ಆ ಮಹಿಳೆ ಅಲ್ಲಿಂದ ಮಂಗಮಾಯ.

-ಅರವಿಂದ ಜಿ. ಜೋಷಿ

***

ಸಮಸ್ಯೆ ಅದಲ್ಲ

ಹೋಟೆಲಿನ ಕೊರಡಿಯಲ್ಲಿ ತಂಗಿದ್ದ ದಂಪತಿ ಜಗಳ ಮಾಡಿಕೊಂಡರು. ಜಗಳ ವಿಪರೀತಕ್ಕೆ ಹೋದಾಗ ಹೊಡೆದಾಡಿಕೊಂಡರು. ಅಮೇಲೆ ಗಂಡ ಹೋಟೆಲ್ ಮ್ಯಾನೇಜರ್‌ಗೆ ಕರೆ ಮಾಡಿ ಕರೆಸಿಕೊಂಡ.

'ನೋಡು, ನನ್ನ ಹೆಂಡತಿ ಜಗಳ ಮಾಡಿ ಈಗ ಕಿಟಕಿಯಿಂದ ಹೊರಗೆ ಹಾರಿ ಸಾಯಲು ತಯಾರಾಗಿದ್ದಾಳೆ' ಎಂದು ಹೇಳಿದ.

'ಅದು ನಿಮ್ಮ ಕೌಟುಂಬಿಕ ಸಮಸ್ಯೆ. ನಾನೇನೂ ಮಾಡೋಕಾಗಲ್ಲ. ಅದನ್ನು ನೀವು ನೀವೇ ಬಗೆಹರಿಸಿ ಕೊಳ್ಳಿ' ಎಂದ ಮ್ಯಾನೇಜರ್.

'ನಾನು ಮಧ್ಯಸ್ಥಿಕೆ ಮಾತುಕತೆಗೆ ಕರೆ ಮಾಡಿದ್ದಲ್ಲ. ಅವಳು ಅವಾಗಿನಿಂದ ಕಿಟಕಿ ಬಾಗಿಲಿನ ಚಿಲಕ ತೆರೆಯದೆ ಕಷ್ಟಪಡುತ್ತಿದ್ದಾಳೆ. ಅದನ್ನು ಸಲೀಸಾಗಿ ತೆಗೆದುಕೊಟ್ಟು ಹೋಗು' ಎಂದ ಗಂಡ!

-ಪ. ರಾಮಕೃಷ್ಣ ಶಾಸ್ತ್ರಿ

***

ಅಜ್ಞಾನವೇ ಅಪಘಾತಕ್ಕೆ ಕಾರಣ!

ಗುಂಡ ವೇಗವಾಗಿ ಕಾರು ಚಲಾಯಿಸಿ 25 ಜನರನ್ನು ಗಾಯಗೊಳಿಸಿದ.

ನ್ಯಾಯಾಲಯದಲ್ಲಿ ನ್ಯಾಯಾಧೀಶರು ಪ್ರಶ್ನಿಸಿದರು. 'ನೀನು 25 ಜನರನ್ನು ಗಾಯ ಗೊಳಿಸಿರುವೆ. ನಿನ್ನ ಪರವಾಗಿ ಏನು ಹೇಳುವುದಿದೆ?'

'ಮೈಲಾರ್ಡ್. ನಾನು ವೇಗಮಿತಿಯಲ್ಲಿ ಕಾರು ಚಲಾಯಿಸುತ್ತಿದ್ದೆನಾದರೂ ಬ್ರೇಕ್ ಹಾಕಲು ಪ್ರಯತ್ನಿಸಿದಾಗ ಬ್ರೇಕ್ ಫೇಲ್ ಆಗಿರುವುದು ತಿಳಿಯಿತು. ಎದುರು ಒಂದು ಬದಿಯಲ್ಲಿ ಇಬ್ಬರು ನಡೆದುಕೊಂಡು ಹೋಗುತ್ತಿದ್ದರೆ ಇನ್ನೊಂದು ಬದಿಯಲ್ಲಿ ಮದುವೆ ದಿಬ್ಬಣ ಸಾಗುತ್ತಿತ್ತು. ನಾನೇನು ಮಾಡಲು ಸಾಧ್ಯವಿತ್ತು ಮೈ ಲಾರ್ಡ್?' ಎಂದು ಅಮಾಯಕವಾಗಿ ಗುಂಡ ವಿವರಿಸಿದ.

ನ್ಯಾಯಾಧೀಶರು, 'ಕಡಿಮೆ ಜನರಿದ್ದಲ್ಲಿ ಕಾರು ಚಲಾಯಿಸಿದ್ದರೆ ಕಡಿಮೆ ನಷ್ಟವಾಗುತ್ತಿತ್ತಲ್ಲವೆ?' ಎಂದು ಮರುಪ್ರಶ್ನಿಸಿದರು.

'ನಾನೂ ಹಾಗೆಯೇ ಯೋಚಿಸಿದ್ದೆ ಮೈ ಲಾರ್ಡ್. ಆದರೆ ಆ ಇಬ್ಬರು ನನ್ನ ಕಾರು ನೋಡಿ ಹೆದರಿ ಮದುವೆ ದಿಬ್ಬಣದೊಂದಿಗೆ ಸೇರಿಕೊಂಡರು’ ಎನ್ನುತ್ತಾ ಗುಂಡ ಪ್ರಾಮಾಣಿಕವಾಗಿ ತನ್ನ ಅಸಹಾಯಕತೆ ತೋಡಿಕೊಂಡಾಗ ಆತನ ಅಜ್ಞಾನಕ್ಕೆ ನ್ಯಾಯಾಧೀಶರು ಮರುಗಿದರು!

-ರಮಣ್ ಶೆಟ್ಟಿ ರೆಂಜಾಳ

***

ವೇಸ್ಟ್ ಏನಲ್ಲ!

ಮುನ್ನಿಯ ಅಜ್ಜಿ ಹಳ್ಳಿಯಿಂದ ಬಂದಿದ್ದರು. ಮುನ್ನಿ ಅವರೊಂದಿಗೆ ಹೆಚ್ಚು ಕಳೆಯಲಾರಂಭಿಸಿದಳು. ಅವರ ಮಾತುಗಳನ್ನೂ ಅನುಕರಿಸುತ್ತಿದ್ದಳು. ಅವರು ಊರಿಂದ ಬಂದ ದಿನ ಮುನ್ನಿಯ ಅಮ್ಮ, 'ಪ್ರಯಾಣ ತುಂಬಾ ಸುಸ್ತಾಯ್ತೇನೋ' ಎಂದಿದ್ದಕ್ಕೆ ಅಜ್ಜಿ, 'ಇಲ್ಲ, ನಿಮಗಿಂತ ಅದೇನ್ ದೊಡ್ಡದಲ್ಲ ಬಿಡವ್ವಾ' ಎಂದಿದ್ದರು.

ಅಜ್ಜಿ ಊರಿನ, ಬಗೆಬಗೆಯ ಸಾಂಪ್ರದಾಯಿಕ ತಿನಿಸುಗಳನ್ನು ಮಾಡಿದರು. ಅದನ್ನು ತಿನ್ನುವಾಗ, ಮುನ್ನಿಯ ಅಪ್ಪ 'ಅದ್ಯಾವುದೋ ಮುಖ್ಯ ಕಾರ್ಯಕ್ರಮಕ್ಕೆ ಹೋಗಬೇಕು ಅಂತ್ರಿದ್ರಿ. ತಿಂಡಿ ಮಾಡೋದರೊಳಗೆ ಅದೆಲ್ಲಾ ಮಿಸ್ ಆಯ್ತಲ್ಲಾ' ಅಂದರು. ಅದಕ್ಕೆ ಅಜ್ಜಿ 'ಬಿಡು ಅದು ನಿಮಗಿಂತ ಮುಖ್ಯವೇನಲ್ಲ' ಎಂದರು.

ಅಷ್ಟೊತ್ತಿಗೆ ಪಕ್ಕದ ಮನೆಯಾಕೆ. 'ಊರಿಂದ ತಂದ ತರಕಾರಿ ಅಷ್ಟೊಂದ್ ಕೊಡೋದಾ? ಸುಮೆ ವೇಸ್ಟ್ ಅಲ್ವೇನ್ರಿ' ಎನ್ನುತ್ತಾ ಬಂದರು. ಆಗ ಮುನ್ನಿ ಧಟ್ಟನೆ, 'ಬಿಡೀ ಆಂಟಿ ನಿಮಗಿಂತ ವೇಸ್ಟ್ ಏನಲ್ಲ!' ಅಂದುಬಿಡೋದೇ? ಎಲ್ಲರೂ ಒಮ್ಮೆಗೆ ನಕ್ಕರೂ ಪಕ್ಕದ ಮನೆಯಾಕೆಯ ಮುಖ ಪೆಚ್ಚಾಗಿತ್ತು.

-ಸಂದೇಶ್ ಎಚ್. ನಾಯ್ಕ್

ಕಲೆ: ಗಣೇಶ ಆಚಾರ್ಯ

(‘ಮಯೂರ’ ಅಕ್ಟೋಬರ್ ೨೦೨೫ರ ಸಂಗ್ರಹಿತ)