ಗಂಗೆ

ಶಿವನ ಜಟಾಜೂಟದಿಂದ

ಧಾರೆಯಾಗಿ ಇಳಿದ ಗಂಗೆ

ಭುವನದಲ್ಲಿ ದಿವ್ಯ ಜಲವ

ಹರಿಯಬಿಟ್ಟಳು ;

ಹರಿದ ಜಲವ ನುಂಗಿ ಭೂಮಿ

ಉದರದಲ್ಲಿ ಉಳಿಸಿಕೊಂಡು

ಅದರ ಭಾಗವನ್ನು ನಮಗೆ

ಬಳಸೆ ಕೊಟ್ಟಳು !

 

ಭೂಮಿಯಲ್ಲಿ ಜಲತರಂಗ-

ಗಾಮಿಯಾಗಿ ಪ್ರವಹಿಸುತ್ತ

ಸ್ವಾಮಿ ಜಟಾಜೂಟವನ್ನು

ನೆನೆಸಿಕೊಳ್ಳುತ ;

ಕಾಮಿಯಾಗಿ ಶುಭ್ರ ಜಲದ

ನೇಮಿಯಾಗಿ ಭದ್ರ ಬಲದ

ಭೂಮಿ ಸರ್ವ ಪರ್ವವಾಗಿ

ತೋರಿಕೊಳ್ಳುತ !

 

ಗುಪ್ತಗಾಮಿಯಾಗಿ ನಲಿದು

ಲಿಪ್ತವಾಗಿ ಭೂಮಿಗೊಲಿದು

ತೃಪ್ತವಾದ ಭಾವಕುಲಿವ

ದೃಶ್ಯಚಿತ್ರಣ ;

ಕ್ಲಪ್ತವಾದ ಸಮಯದಲ್ಲಿ

ಕ್ಷಿಪ್ರವಾಗಿ ಬೆಳೆದು ನಿಂದು

ಸ್ಪಷ್ಟವಾದ ನಿದರ್ಶನಕೆ

ಇದು ಸಮರ್ಪಣ

***

ಬಂದುದೆಲ್ಲಿಂದ ?

ಬಂದುದೆಲ್ಲಿಂದ ನೀ ಈಗೆಲ್ಲಿ ಪಯಣ ?

ಸಂದುದೆಲ್ಲವ ಸ್ಮರಿಸಿಕೊಳಲೆಷ್ಟು ಅಯನ ?

 

ವರ್ತಮಾನದ ಬದುಕು ನಿನಗೆಷ್ಟು ಗೊತ್ತು?

ಕರ್ತನಾದವನವನು ತಿಳಿಯುವದೆ ಅಷ್ಟು !

 

ಪ್ರಾರಬ್ಧವೆನ್ನುವುದು ಗಳಿಸಿರುವ ತೊಡುಗೆ

ಆರಬ್ಧವೆನ್ನುವುದು ಬಳುವಳಿಯ ಕೊಡುಗೆ !

 

ಗಳಿಸಿರುವ ಪ್ರಾರಬ್ಧ ಕಳೆದುಕೊಳಬೇಕು

ಉಳಿಸಿಕೊಳ್ಳದೆ ಎಲ್ಲವನು ತ್ಯಜಿಸು ಸಾಕು !

 

ಸಂಚಿತದ ಮೂಟೆಯನು ನೀ ಬರಿದು ಮಾಡು

ವಂಚಿಸದೆ ಮನವನ್ನು ನೀ ತಿರುಗಿ ನೋಡು !

 

ಗಳಿಸಿರುವ ಪ್ರಾರಬ್ಧವನು ಕಳೆದುಬಿಟ್ಟು

ಉಳಿದಿದ್ದ ಆರಬ್ಧವನು ಹಾಕು ಸುಟ್ಟು !

 

ಸಂಕಲ್ಪಗಳ ಶೃಂಕಲೆಯ ಬರಿದುಗೊಳಿಸು !

ಅಂತರಂಗದ ನೆಲೆಯ ಪರಿಶುದ್ಧಗೊಳಿಸು !

 

ಬಂದುದೆಲ್ಲಿಂದ ನೀ ಈಗೆಲ್ಲಿ ಪಯಣ ?

ಬಂದಲ್ಲಿಗೇ ತಿರುಗಿ ಸೇರುವುದೆ ಹರಣ !

***