ಗುರಿಯನರಿಯದ ಪಯಣಿಗ
ಗುರಿಯನರಿಯದ ಪಯಣಿಗನು ನಾ
ಬರಿಯ ಕಾಲನ ಸೇವಕ ;
ಸರಿಯೊ ತಪ್ಪೋ ತಿಳಿಯಲಾಗದ
ಪರಿಯ ಅಳಲಿನ ಶ್ರಾವಕ !
ನಡೆಯ ಹೆಜ್ಜೆಯನಿಡುವ ಸಜ್ಜಿಗೆ
ತಡೆಯ ತೊಡಕೊಂದಿರದಿರೆ ;
ಪಡೆಯುವಾಸೆಯ ಕಡೆಗೆ ಸೆಳೆದಿದೆ
ಇಡಿಯ ಅಭಿಲಾಷೆಯ ತೊರೆ !
ಗಮನ ಹರಿಸಲು ದಮನ ಸರಿಸಲು
ನಮಗೆ ಉಳಿದಿಹ ದಾರಿಗೆ ;
ಸುಮನ ದೃಷ್ಟಿಗೆ ಸಮಯ ಸೃಷ್ಟಿಗೆ
ಕಾಮನೆಯ ಕೊನೆ ಬಾರಿಗೆ !
ನಾವು ನಿರುಕಿಸಿದಂಥ ಸಾಧ್ಯವು
ಯಾವುದೋ ಕಡೆ ಹೊರಳಲು ;
ನಾವು ಬಯಸಿದ ಹಾಗೆ ಲಯಿಸುವ
ಕಾವು ಕಳೆಯುತ ತೆರಳಲು !
ಯಾವ ಗುರಿ ನಮಗಾವ ಪರಿ-
ಭಾವಿಸುವ ಮಾರ್ಗವ ನೀಡಿದೆ?
ಜೀವನದ ಜಂಜಾಟದಲಿ ನಮ-
ಗಾವ ದಾರಿಯು ಉಳಿದಿದೆ ?
***
ದಯೆಗೆ ದಯೆಯೆ ಉದಾಹರಣೆ
ದಯೆಗೆ ಸಾಟಿಯಾದ ಅನ್ಯ
ವಿಷಯವಿರಲು ಸಾಧ್ಯವೇ?
ದಯೆಗೆ ದಯೆಯೆ ಉದಾಹರಣೆ
ಸರ್ವರಿಗದು ಬೋಧ್ಯವೇ !
ದಯೆಯದಮ್ಯ ಧಾರ್ಷ್ಯಗಳನು
ಸಂಹರಿಸುವ ಶಸ್ತ್ರವು
ದಯೆಯನಿಷ್ಟ - ಕಷ್ಟಗಳನು
ಪರಿಹರಿಸುವ ಅಸ್ತ್ರವು !
ದಯೆಯ ಮುಂದೆ ಕ್ರೋಧ ಕೂಡ
ಕರಗಿ ಪೋಪುದಚ್ಚರಿ ;
ದಯೆಯ ಹಿಂದೆ ಧರ್ಮತತ್ವ
ಅಡಗಿಕೊಂಡ ಐಸಿರಿ !
ದಯೆಗೆ ದಯೆಯೆ ಉದಾಹರಣೆ
ಬೇರೆ ಬದಲು ಸಾಧ್ಯವೇ?
ದಯೆಗೆ ಸಾಟಿಯಾದ ಅನ್ಯ
ವಿಷಯವಿಲ್ಲ ! ವೇದ್ಯವೆ?
ದಯೆಗೆ ದಯೆಯೆ ಉದಾಹರಣೆ
ಹೃತ್ಪೂರ್ವಕ ಸ್ಪಂದನ
ದಯೆಯ ಸ್ಫುರಣ ಕೃಪಣ ಹರಣ
ಚಿತ್ ಕಾರಕ ಬಂಧನ !
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!