ಗಮನ ಹರಿಸು

ಗಮನ ಹರಿಸು ಒಳಿತಿನೆಡೆಗೆ

ದಮನಗೊಳಿಸು ಕೆಡುಕನು

ಸುಮನವೊಂದೆ ಸಕಲಕೆಲ್ಲ

ಬಗೆ ಹರಿಸಲು ತೊಡಕನು !

 

ಸರಲತನಕೆ ವಿರಲವೆನಿಪ

ಅತ್ಯಮೂಲ್ಯ ಬೋಧನೆ

ನಿರಾಳತೆಗೆ ನಿರಾವರಣ

ಸತ್ವಪೂರ್ಣ ಶೋಧನೆ !

 

ಹೃದಯದಲ್ಲಿ ಉದಯವಾಗೆ

ಶುದ್ಧವಾದ ಭಾವನೆ

ಬೆದೆಯ ಬಲಕೆ ಎದೆಯ ಛಲಕೆ

ಸಿದ್ಧಗೊಂಡ ಸ್ಪಂದನೆ !

 

ನಿಷ್ಕಲಂಕ ನಿರಾತಂಕ

ವಾದ ಸ್ಪಷ್ಟ ಚಿಂತನ

ಶುಷ್ಕವಾದ ಕ್ಲಿಷ್ಟ ಭೇದ-

ರಹಿತ ತತ್ವಮಂಥನ !

 

ನಿಷ್ಟೆಯಿಂ ಬಲಿಷ್ಟವಾದ

ಸತ್ವಪೂರ್ಣ ಧೋರಣೆ

ಇಷ್ಟವಾದ ನಿಷ್ಟವಾದ

ಶುಭ್ರ ತರದ ಪ್ರೇರಣೆ !

***

ಕತ್ತಲೆಗೆ

ಕತ್ತಲೆಯೆ ನಿನಗೇಕೆ ಬೆಳಕ ಜಯಿಸುವ ಚಿಂತೆ

ಬಿಟ್ಟು ಬಿಡು ಅದರ ಪಾಡಿಗೆ ಅದರನು 

ಬತ್ತಲೆಯ ನಿನ್ನ ಅಜಾನುಬಾಹುಗಳಲ್ಲಿ

ಹಿಡಿದಿಟ್ಟುಕೊಳ್ಳಲದು ಸಾಧ್ಯವೇನು?

 

ಕಗ್ಗತ್ತಲೆಯೆ ನಿನ್ನ ಕಪ್ಪು ಕಾಪುಗಳಲ್ಲಿ

ಹಿಗ್ಗುತ್ತಲಿದೆಯೇನು ಕಪ್ಪು ಠಾಕು?

ತಗ್ಗುತ್ತ ನಡೆಯಲಿದೆ ಕಪ್ಪು ಠಾಕಿನ ಠೀಕು

ಮುಗ್ಗರಿಸಲಿದೆ ಸ್ವಲ್ಪ ಸಮಯ ಬೇಕು !

 

ಅದೊ ಅಲ್ಲಿ ನೇಸರನ ಹೊಂಗಿರಣಗಳ ಸೆಳಕು

ಪಡಿಮೂಡಿ ಬರುತಲಿದೆ ಬುವಿಯ ಕಡೆಗೆ

ಆ ಬೆಳಕು ತವಕದಲಿ ಸರ್ವವನು ವ್ಯಾಪಿಸಿತು

ಕತ್ತಲೆಯ ಕೋದಲೆಯ ಕಾಪಿನೆಡೆಗೆ !

 

ಕತ್ತಲೆಗೆ ಬೆಳಕಿನಾಶ್ರಯ ಬೇಕು ಹಾಗೆಯೇ

ಬೆಳಕಿಗೂ ಕತ್ತಲೆಯ ಕಮನೀಯತೆ

ನಿತ್ಯ ಕತ್ತಲೆ ಬುವಿಯ ಹಿತ್ತಿಲಕೆ ಸರಿದೊಡನೆ

ಜಗದಂಗಳಕೆ ಹಗಲ ಕಮನೀಯತೆ !

***