ಬಡವನೆಂಬ ಅಳಲು
ಬಡವನೆಂಬ ಅಳಲನೇಕೆ
ತಳೆಯುತಿರುವೆ ನೀನು?
ಬಿಡದನೇಕ ತಳಮಳಕ್ಕೆ
ಬಳಲುತಿರುವೆಯೇನು?
ಪ್ರಕೃತಿ ತನ್ನ ಪರಾಪರಕ-
ಪಾರ ಕೊಡುಗೆ ನೀಡಿ
ಸುಕೃತಿಶೀಲ ಚರಾಚರದ
ಪೂರ ಸಾರವೂಡಿ ?
ತೋರುತಿರುವ ಪ್ರಕೃತಿ ಚೆಲುವಿ -
ನತ್ತ ದೃಷ್ಟಿ ಹರಿಸೆ
ಮೇರುತುಲ್ಯ ವೈಶಾಲ್ಯದ
ಸ್ಪಷ್ಟ ಚಿತ್ರ ಸ್ಫುರಿಸೆ !
ಸುಡುವ ಬಿಸಿಲ ಶಮನಗೊಳಿಸು-
ತಿರುವ ತಂಪು ಗಾಳಿ
ಇಡಗುತಿರುವ ಕಂಪನೆಸೆವ
ಹೂವುಗಳಿವೆ ಅರಳಿ !
ಯಾವ ಸಿರಿಗೆ ಕಡಿಮೆಯಿಲ್ಲ -
ದಂಥ ಸೃಷ್ಟಿ ಲೀಲೆ
ಭಾವ ಸ್ಫುರಣ ಜೀವಕರಣ
ವಿಠಲ ಚಿತ್ರ ಮಾಲೆ !
ಚಿಗುರೆಲೆಗಳ ನೆತ್ತಿಯಲ್ಲಿ
ಅರಳುತ್ತಿಹ ಹೂಗಳು
ಹಗುರವಾದ ತಂಗಾಳಿಗೆ
ತಲೆದೂಗುತ್ತಿವೆ ಈಗಲು !
ಬಡವನೆಂಬ ಅಳಲನೇಕೆ
ನೀನು ತಳಿಯಬೇಕು?
ಬಿಡದ ಸುಳಿಯ ಶೃಂಖಲೆಗಳ-
ನೆಲ್ಲ ತುಳಿಯ ಸಾಕು !
***
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!