ನನ್ನ ಪುಟ್ಟಿ
ಮುದವ ಸೂಸುವ ಮುದ್ದು ಮುಖದಲಿ
ಮಂದಹಾಸದ ಕಿರುನಗೆ
ಹೃದಯ ಸ್ಪಂದಿಪ ಪ್ರೇಮ ಬಂಧನ
ಮೃದುಲ ಭಾವದ ಹೊಸಬಗೆ !
ಪುಟ್ಟ ಹೆಜ್ಜೆಯನಿಟ್ಟ ಬಿಜ್ಜೆಗೆ
ಸಜ್ಜುಗೊಂಡಿಹ ತಳಮಳ
ಒಟ್ಟುಗೂಡಿದ ಲಜ್ಜೆಗಂಜುತ
ಹೆಚ್ಚಿಕೊಳ್ಳುವ ತಳಮಳ !
ತೊದಲು ಭಾಷೆಯನುಲಿವ ನಿರುಕಿಸೆ
ಹೃದಯಕೊಪ್ಪುವ ತೆರದಲಿ
ಮೃದುಲ ಭಾವಕೆ ಹಿಡಿದ ಕನ್ನಡಿ-
ಯದರ ಕೊಡುಗೆಯು ಭರದಲಿ !
ಇಟ್ಟ ಹೆಜ್ಜೆಗೆ ಪುಟ್ಟ ಗೆಜ್ಜೆಗೆ
ಕಟ್ಟಿಹಾಕಿದೆ ಬಂಧುರ
ಪಟ್ಟ ಪರಿಶ್ರಮ ದಿಟ್ಟ ಪರಿಕ್ರಮ
ಒಟ್ಟುಗೂಡಿದ ಸಂಭಮ !
ಸರಳ ಕಿರುನಗೆ ವಿರಳವಹ ಬಗೆ
ತುಂಟತನವನು ಕೂಡಿದೆ
ಕರುಳ ಕುಡಿ ಪಡಿಮೂಡಿಸುತ್ತಿದೆ
ನಂಟು - ನಂಟಿನ ಜಾಡಿಗೆ !
ತೊದಲು ಮಾತಿಗೆ ಮೊದಲು ಮಾಡಲು
ಬದಲು ಕಾಣದ ಅವಸರ
ಎದೆಯ ಅಳದಲುದಿಸಿ ಸಂತಸ
ಹೊರಗೆ ಹೊಮ್ಮುವ ಸಡಗರ !
ಕಣ್ಣುನೋಟದ ಮಣ್ಣಿನಾಟದ
ಚಲನವಲನದ ಚಂಚಲೆ
ಕಣ್ಣು ಮಿಟುಕಿಸಿ ಚೆನ್ನ ನಲಿಯುತ
ಆಟವಾಡುವ ಮಿಂಚಲೆ !
“ಅನನ್ಯ” ಹೆಸರಿಗೆ ಅನನ್ಯತೆಯ ಬೆರೆ-
ತಿರುವ ನನ್ನ “ಪುಟ್ಟಿ”
ಅನನ್ಯ ಭಾವದ ಅನನ್ಯ ಜೀವನ-
ದನುಪಮೇಯ ಸೃಷ್ಟಿ.
***
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!