ಗುರಿ

ಮಾಮರದ ತುದಿಯಲ್ಲಿ

ಮಾಗಿರುವ ಹಣ್ಣು

ಪರಿಮಳವ ಸೂಸುತ್ತ

ಸೆಳೆಯುತಿದೆ ಕಣ್ಣು !

 

ವಾಸನೆಯ ಆಧರಿಸಿ

ಇರುವೆಗಳ ಸಾಲು

ಏರುತಿದೆ ಮರವನ್ನು 

ಪಡೆಯಲಿಕೆ ಪಾಲು !

 

ಮರವನೇರಲು ಹೆಚ್ಚು 

ಸಮಯ ಬೇಕದಕೆ

ಗುರಿಯ ಮುಟ್ಟುವ ಮೊದಲೆ

ಹಣ್ಣುದುರೆ ಕೆಳಕೆ !

 

ವಿಫಲವಾಗುವುದಲ್ಲಿ

ಇರುವೆಗಳ ಹಿಂಡು

ಸಫಲತೆಯ ಸಾಧಿಸಲು

ಸೋಲುಂಡ ದಂಡು !

 

ಶುಕವೊಂದು ಹಣ್ಣುಗಳ

ಕಡೆ ಹರಿಸಿ ದೃಷ್ಟಿ

ಗುರಿಯೆಡೆಗೆ ದಾಳಿಯನು

ಮಾದುವುದು ಕುಟ್ಟಿ !

 

ಇರುವೆ - ಶುಕಗಳ ಬಯಕೆ

ಗುರಿ ಕೂಡ ಒಂದೆ

ದಾರಿ ಮಾತ್ರವೆ ಬೇರೆ

ಸಫಲತೆಯ ಹಿಂದೆ !

 

ಬಳಸುದಾರಿಗೆ ಇರುವೆ

ಗಳ ಶ್ರಮವು ವ್ಯರ್ಥ

ಗೊಳಿಸಿದರೆ ಶುಕ ಶೀಘ್ರ

ಸಾಧನೆಗೆ ಕರ್ತ:

 

ಸಂಕಲ್ಪ ಸಾಧನೆಗೆ 

ಇಹುದೆರಡು ದಾರಿ

ಒಂದು ಶುಕ, ಒಂದಿರುವೆ

ತುಳಿದಂಥ ದಾರಿ !

**

(ಈ ಕವನದೊಂದಿಗೆ ಕೆ ಪಿ ಭಟ್ಟರ ‘ಈ ಮರದ ನೆರಳಿನಲಿ’ ಕವನ ಸಂಕಲನದ ಕವಿತೆಗಳು ಮುಗಿದವು.)