ಕೀಮೋ - ಅನುಭವ ಕಥನ

“ಫಾತಿಮಾ ರಲಿಯಾ, ತಮ್ಮ ತಾಯಿಗೆ ಕ್ಯಾನ್ಸರ್ ಬೇನೆ ಬಂದಾಗ, ಅವರ ಜತೆಯಲ್ಲಿದ್ದು ಆಸ್ಪತ್ರೆಯಲ್ಲಿ ಕಳೆದ ಅನುಭವ ಕಥನವಿದು. ಆದರೆ ಇದರ ಪರಿಧಿ ಕೇವಲ ತಾಯಿಯ, ಕಾಯಿಲೆಯ ಮತ್ತು ಆಸ್ಪತ್ರೆಲೋಕದ ವಿವರಗಳಿಗೆ ನಿಲ್ಲುವುದಿಲ್ಲ. ತಾಯ ಕಥನದ ಜತೆಗೆ, ಆಸುಪಾಸಿನ ಬದುಕಿನಲ್ಲಿ ನಡೆದ ಹಲವು ವಿದ್ಯಮಾನಗಳನ್ನೂ, ಹಲವರ ವೇದನೆ ಮತ್ತು ಸಂತಸಗಳನ್ನು ಸಮುದಾಯ ಪ್ರಜ್ಞೆಯಲ್ಲಿ ಒಳಗೊಳ್ಳುತ್ತ, ಕಾದಂಬರಿಯಂತೆ ವಿಸ್ತರಣೆ ಪಡೆಯುತ್ತದೆ. ಹೀಗಾಗಿಯೇ ಇದು ಕರಾವಳಿಯ ಅಥವಾ ಭಾರತದ ಸಾಮಾಜಿಕ ಕಾಯಿಲೆಗಳ ಕಥನವಾಗುವುದಕ್ಕೆ ನಿಲ್ಲುವುದಿಲ್ಲ. ಇಲ್ಲಿನ ವ್ಯಕ್ತಿ ಮತ್ತು ಸ್ಥಳಗಳ ಹೆಸರನ್ನು ಬದಕಿಸಿದರೆ, ಎಲ್ಲ ದೇಶದ ಎಲ್ಲ ಕಾಲದ ಮನುಷ್ಯರ ಕಥನವೂ ಆಗುವಂತೆ ಅರಳಿಕೊಳ್ಳುತ್ತದೆ. ಈ ಕಥನದ ಮುಖ್ಯ ಪಾತ್ರವಾದ ಅಮ್ಮ, ಸಾವಿನ ಸಮೀಪಕ್ಕೆ ಹೋಗಿಬರುತ್ತ, ಮಗಳಿಗೆ ಬದುಕಿನ ಪಾಠಗಳನ್ನು ಕಲಿಸುತ್ತ, ಎಲ್ಲರ ತಾಯಿಯಾಗುತ್ತಾಳೆ. ದಾರ್ಶನಿಕಳಾಗುತ್ತಾಳೆ. ಇಲ್ಲಿನ ರೂಪಕ ಭಾಷೆಯ ಸೂಕ್ಷ್ಮ ಗದ್ಯವು ಕೆಲವೆಡೆ ಕವಿತೆ ಓದುವ ಅನುಭವ ಕೊಡುತ್ತದೆ. ಇಲ್ಲಿರುವ ವಿಷಾದ ಮತ್ತು ಉತ್ಕಟತೆಗಳು, ಸಾವಿನ ಸನ್ನಿಧಿಯಲ್ಲಿ ಚಿಗುರುವ ಜೀವನ ಮೀಮಾಂಸೆ ಆಗುತ್ತವೆ” ಎನ್ನುವ ಹೊಗಳಿಕೆಯ ಮಾತನ್ನು ಬೆನ್ನುಡಿಯಲ್ಲಿ ಹೇಳಿದ್ದಾರೆ ಖ್ಯಾತ ಲೇಖಕರಾದ ಡಾ. ರಹಮತ್ ತರೀಕೆರೆ.

ಈ ಕೃತಿಯ ಬಗ್ಗೆ ತಮ್ಮ ಅನಿಸಿಕೆಯನ್ನು ಗಿರಿಧರ್ ಭಟ್ ಅವರು ಹೀಗೆ ಹೇಳಿದ್ದಾರೆ… “ತಮ್ಮ ಬದುಕು ಎಷ್ಟು ಸುಂದರವಾಗಿದೆ ಎಂದು ಅಂದುಕೊಳ್ಳುತ್ತಿರುವಾಗಲೇ ಎಷ್ಟೋ ಜನರ ಬಾಳಲ್ಲಿ ಬಿರುಗಾಳಿ ಬೀಸುತ್ತದೆ. ಸರಾಗವಾಗಿ ಹೋಗುತ್ತಿದ್ದ ಬಾಳಿನಲ್ಲಿ ಕಷ್ಟಗಳ ಸರಮಾಲೆ ಬಂದೆರಗುತ್ತದೆ. ಕೆಲವು ಕಷ್ಟಗಳು ನಮ್ಮ ಸ್ವಯಂಕೃತ ಅಪರಾಧದಿಂದ ಬಂದಿದ್ದರೆ ಇನ್ನು ಕೆಲವು ನಮ್ಮ ಯಾವ ತಪ್ಪೂ ಇಲ್ಲದೇ ನಾವು ಊಹಿಸಲೂ ಸಾಧ್ಯವಿಲ್ಲದ ಕಡೆಗಳಿಂದ ಬರುತ್ತವೆ.

ಚಂದಕ್ಕೆ ಸಾಗುತ್ತಿದ್ದ ಪಿಯುಸಿಯ ಹುಡುಗಿ ಫಾತಿಮನ ಜೀವನದಲ್ಲಿ ಕೂಡಾ ಅವಳು ಕನಸಿನಲ್ಲಿ ಕೂಡಾ ಯೋಚಿಸದ ರೀತಿಯ ಬಿರುಗಾಳಿ ಅವಳಮ್ಮನಿಗೆ ಬಂದ ಕ್ಯಾನ್ಸರಿನ ರೂಪದಲ್ಲಿ ಬೀಸುತ್ತದೆ. ಅತ್ತ ಬಾಲ್ಯದ ಮುಗ್ಧತೆ ಪೂರ್ತಿಯಾಗಿ ಮಾಸಿರದ, ಇತ್ತ ಪೂರ್ಣ ಪ್ರಬುದ್ಧತೆಯೂ ಬಂದಿಲ್ಲದ ಪ್ರಾಯ ಅದು. ಆಂಗ್ಲದಲ್ಲಿ ಸರಳವಾಗಿ ಅದನ್ನು ಟೀನೇಜ್ ಅನ್ನುತ್ತಾರೆ. ನಾವೆಲ್ಲರೂ ಆ ಹರೆಯವನ್ನು ದಾಟಿ ಬಂದಿದ್ದೇವೆ ಆ ಸಮಯದಲ್ಲಿ ನಮ್ಮ‌ ಮಾನಸಿಕತೆ ಹೇಗಿರುತ್ತದೆ ಎಂದು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಈ ಹರೆಯದಲ್ಲಿ ತಾಯಿಗೆ ಕ್ಯಾನ್ಸರ್ ಬಂದಾಗ ಮಗಳಾಗಿ ತಾನು ಎದುರಿಸಿದ ಬಗ್ಗೆ, ತಾಯಿಗೆ ಬೆನ್ನುಲುಬಾಗಿ ನಿಂತ ಬಗ್ಗೆ, ತಾಯಿಯ ಜೊತೆಗಿನ ಆಸ್ಪತ್ರೆವಾಸದಲ್ಲಿ ಜೊತೆಗಾರರಾಗಿ ಸಿಕ್ಕವರ ಬಗ್ಗೆ ಫಾತಿಮಾ ತನ್ನ ಅನುಭವ ಕಥನದಲ್ಲಿ ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾಳೆ. ನಾವೇ ಕಷ್ಟವನ್ನು ಎದುರಿಸುವುದಕ್ಕೂ, ನಮ್ಮ ಪ್ರೀತಿಪಾತ್ರರಿಗೆ ಬಂದ ಕಷ್ಟಗಳಲ್ಲಿ ನಾವು ಭಾಗಿಯಾಗುವುದಕ್ಕೂ ವ್ಯತ್ಯಾಸಗಳಿವೆ.

ಇಲ್ಲಿ ಅದು ಹೆಚ್ಚು ಇದು ಕಮ್ಮಿ ಎಂದು ಹೋಲಿಸಲಾಗದು. ಆದರೆ ಇಂತಹ ಪರಿಸ್ಥಿತಿಗಳಿಗೆ ನಮ್ಮನ್ನು ಒಡ್ಡಿಕೊಳ್ಳಬೇಕಾಗಿ ಅದು ನಾವು ಬದುಕನ್ನು ನೋಡುವ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬದಲಿಸುತ್ತದೆ ಅನ್ನುವುದು ಮಾತ್ರ ಸತ್ಯ. ಎರಡು ದಶಕಗಳ ಹಿಂದೆ ನನ್ನಮ್ಮನಿಗಾದ ಅಪಘಾತ ಅದನ್ನು ಕಣ್ಣಾರೆ ಕಂಡ ನನ್ನ ತಮ್ಮನ ಸ್ವಭಾವವನ್ನೇ ಸಂಪೂರ್ಣವಾಗಿ ಬದಲಿಸಿತ್ತು. ಕ್ಯಾನ್ಸರ್ ವಿರುದ್ಧದ ಹೋರಾಟ ದಿನಗಳಲ್ಲಿ ಅಥವಾ ವಾರಗಳಲ್ಲಿ ಮುಗಿಯುವುದಿಲ್ಲ. ವರ್ಷಗಳ ಕಾಲ ಹಲ್ಲು ಕಚ್ಚಿ ಹೋರಾಡಬೇಕು. ರೋಗ ಬಂದೆರಗಿದವರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಡಿ ಹಿಪ್ಪೆ ಮಾಡಿದರೆ ಅದನ್ನು ಕಣ್ಣಾರೆ ನೋಡುವ ಅವರ ಪ್ರೀತಿಪಾತ್ರರ ಮನಸ್ಸಿನಲ್ಲಿ ಹೇಳಲಾರದಷ್ಟು ತಲ್ಲಣವನ್ನುಂಟು ಮಾಡುತ್ತದೆ. ಅದನ್ನು ಮೆಟ್ಟಿನಿಲ್ಲುವ ಧೈರ್ಯವನ್ನು ಯಾರಾದರೂ ಸರಿಯಾದ ರೀತಿಯಲ್ಲಿ ಕೊಡುತ್ತಿದ್ದರೆ ಮನಸ್ಸನ್ನು ಗಟ್ಟಿಮಾಡಿಕೊಂಡು ಹೋರಾಡಲು ಚೈತನ್ಯ ನೀಡುತ್ತದೆ. ಅದಕ್ಕೆ ಹತ್ತಿರದವರ ಆರೈಕೆಯ ಜೊತೆಗೆ ಇಂತಹ ಪುಸ್ತಕಗಳೂ ಸಹಕಾರಿಯಾಗುತ್ತವೆ. ಭಾರತಿ ಬಿ.ವಿ ಅವರ 'ಸಾಸಿವೆ ತಂದವಳು' ಹಲವಾರು ಜನರಿಗೆ ಧೈರ್ಯ ಕೊಟ್ಟಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಅಲ್ಲಿ ಭಾರತಿ ಅಕ್ಕ ತಮ್ಮದೇ ಅನುಭವ ಬರೆದಿದ್ದರೆ ಫಾತಿಮಾ ಮಗಳಾಗಿ ತನ್ನ ಅನುಭವ ಬರೆದಿದ್ದಾಳೆ. ೧೭ ವರ್ಷ ಹಿಂದಕ್ಕೆ ಹೋಗಿ ಗಾಯಗಳ ನೆನಪುಗಳನ್ನು ಕೆದಕಿ ಕೆದಕಿ ಯಾವುದನ್ನು ಹೇಳಬೇಕು,ಯಾವುದನ್ನು ಹೇಳಬಾರದು, ಹೇಳಬೇಕಾದ್ದನ್ನು ಎಷ್ಟು ಹೇಳಬೇಕು ಎಂದು ಲೆಕ್ಕಾಚಾರ ಹಾಕಿ ಸೋಸಿ ಅಕ್ಷರ ರೂಪಕ್ಕೆ ಇಳಿಸುವುದು ಸವಾಲಿನ ಕೆಲಸ. ಸ್ವಲ್ಪ ಹದ ತಪ್ಪಿದರೂ ಒಂದೋ ಗೋಳಿನ ಕತೆಯಾಗುತ್ತದೆ ಇಲ್ಲಾ ವಿಷಯದ ಗಂಭೀರತೆಯೇ ಹೊರಟುಹೋಗುತ್ತದೆ. ಆ ಸವಾಲನ್ನು ಎದುರಿಸಿ ಸರಿಯಾದ ಹದದಲ್ಲಿ ಕಥನವನ್ನು ಕಟ್ಟಿದ್ದಾಳೆ. ಇಲ್ಲಿ ಬರೀ ನೋವು ಮಾತ್ರವಲ್ಲದೇ ಖುಷಿ, ಉತ್ಸಾಹ, ನಗು ಎಲ್ಲವೂ ಇದೆ. ಇಂತಹ ಒಂದು ಅಪರೂಪದ ಕೃತಿಯ ಮೂಲಕ ಕನ್ನಡ ಸಾಹಿತ್ಯಕ್ಕೆ ಒಂದು ಒಳ್ಳೆಯ ಕೊಡುಗೆ ಕೊಟ್ಟಿದ್ದಾಳೆ.”