ಹೀಗೊಂದು ಸಂಭಾಷಣೆ
ಒಮ್ಮೆ ಅಮೆರಿಕದ ಪ್ರವಾಸಿಗ ಸ್ಟಾಕ್‌ಹೋಮ್‌ನಲ್ಲಿ ಬಸ್ಸಿನಲ್ಲಿ ಹೋಗುತ್ತಿದ್ದ. ಅವನ ಪಕ್ಕದಲ್ಲಿ ಸ್ವೀಡಿಷ್ ಪ್ರಜೆ ಕುಳಿತಿದ್ದ. ಇಬ್ಬರೂ ಪರಸ್ಪರ ಪರಿಚಿತರಾದರು. ಹರಟೆ ಹೊಡೆಯಲಾರಂಭಿಸಿದರು. ಅಮೆರಿಕನ್ ಪ್ರಜೆ ಬಡಾಯಿ ಕೊಚ್ಚಿಕೊಳ್ಳುತ್ತಿದ್ದ- ''ಜಗತ್ತಿನಲ್ಲಿಯೇ ಅಮೆರಿಕದಂಥ ಪ್ರಜಾಸತ್ತಾತ್ಮಕ ದೇಶ ಮತ್ತೊಂದಿಲ್ಲ. ವೈಟ್ ಹೌಸಿಗೆ ಹೋಗಿ ಅಧ್ಯಕ್ಷನನ್ನು ಭೇಟಿ ಮಾಡಬಹುದು. ಅವನ ಜತೆ ಕೈಕುಲುಕಬಹುದು. ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಬಹುದು. ಇವೆಲ್ಲಾ ಬೇರೆ ದೇಶಗಳಲ್ಲಿ ಸಾಧ್ಯವಿಲ್ಲ. ಅದರಲ್ಲೂ ನಿಮ್ಮ ದೇಶದಲ್ಲಂತೂ ಸಾಧ್ಯವೇ ಇಲ್ಲವೇನೋ?''.
ಇದೇನು ಅಮೆರಿಕನ್ ಪ್ರವಾಸಿಗ ತನ್ನ ದೇಶದ ಬಗ್ಗೆ ಬಹಳ ಬಡಾಯಿ ಕೊಚ್ಚಿಕೊಳ್ಳುತ್ತಾನಲ್ಲ ಎಂದು ಸ್ವೀಡಿಷ್ ಪ್ರಜೆಗೆ ಅನಿಸಿತು. ಆತ ಅಷ್ಟು ಹೇಳಿದ ನಂತರ ತಾನೂ ತನ್ನ ದೇಶದ ಬಗ್ಗೆ ಹೇಳದಿದ್ದರೆ ಹೇಗೆ ಎಂದು ಅನಿಸಿತು. ''ನಿಮ್ಮದೇನು ಮಹಾ? ನಮ್ಮ ದೇಶದಲ್ಲಿ ರಾಜ ಮತ್ತು ಶ್ರೀಸಾಮಾನ್ಯ ಒಂದೇ ಬಸ್ಸಿನಲ್ಲಿ ಕುಳಿತುಕೊಂಡು ಪ್ರಯಾಣ ಮಾಡುತ್ತಾರೆ, ಗೊತ್ತಾ?'' ಎಂದ ಸ್ವೀಡಿಷ್ ಪ್ರಜೆ. ಅಷ್ಟೊತ್ತಿಗೆ ಮುಂದಿನ ಸ್ಟಾಪ್ ಬಂತು. ಸ್ವೀಡಿಷ್ ಪ್ರಜೆ ಬಸ್ಸಿನಿಂದ ಇಳಿದು ಹೋದ. ಅವರಿಬ್ಬರ ಸಂಭಾಷಣೆಯನ್ನು ಮತ್ತೊಬ್ಬ ಕೇಳಿಸಿಕೊಳ್ಳುತ್ತಿದ್ದ.
"ನಿಮ್ಮ ಪಕ್ಕದಲ್ಲಿ ಕುಳಿತಿದ್ದವ ಯಾರು ಗೊತ್ತಾಯಿತಾ?" ಎಂದು ಕೇಳಿದಕ್ಕೆ ಅಮೆರಿಕದ ಪ್ರವಾಸಿಗ ಗೊತ್ತಿಲ್ಲ ಎಂದು ತಲೆ ಅಲ್ಲಾಡಿಸಿದ.
"ಆತನೇ ಸ್ವೀಡನ್‌ನ ಆರನೇ ರಾಜ ಗುಸ್ತಾಫ್ ಅಡಾಲ್ಫ್”!
***
ಆರೋಗ್ಯ
ಶ್ರೀಮತಿ: ತವರಿಂದ ಬಂದ ಮೇಲೆ ಈಗ ನಿನ್ನ ಆರೋಗ್ಯ ಹೇಗಿದೆ?
ತಾರಾ: ಪರವಾಗಿಲ್ಲ ಈಗ ಸುಧಾರಿಸಿದೆ. ತವರಲ್ಲಿ ಎಲ್ಲ ಕೆಲಸ ನಾನೇ ಮಾಡಿ, ಮಾಡಿ ಆರೋಗ್ಯ ಹದಗೆಟ್ಟಿತ್ತು. ಈಗ ಗಂಡನ ಮನೆಯಲ್ಲಿ ಎಲ್ಲವನ್ನು ಅವರೇ ಮಾಡೋದ್ರಿಂದ ಆರಾಮಾಗಿದ್ದೀನಿ.
***
ಮಾವನ ಸಲುವಾಗಿ
ಶ್ರೀಮತಿ: ರೀ, ವಕ್ಕದ್ಮನೆ ತಾರಾಳ ಗಂಡ ದಿನಾಲೂ ಸೂಟ್ ಕೇಸ್ ತುಂಬ ಲಂಚದ ಹಣ ತರ್ತಾರೆ. ನೀವೂ ಇದೀರಾ, ಒಂದು ದಿನಾನೂ ನಯಾ ಪೈಸೆ ತರಲ್ಲ.
ಸೂರಿ: ಅವನು ಮಾವನ ಸಲುವಾಗಿ ದುಡ್ಡು ಕೂಡಿಸ್ತಿದಾನೆ ಕಣೇ.
ಶ್ರೀಮತಿ: ಅವರ ಮಾವ ಯಾರು?
ಸೂರಿ: ಲೋಕಾಯುಕ್ತದವರು. ಹೀಗೆ ಸೂಟ್‌ಕೇಸ್ ಮೇಲೆ ಸೂಟ್‌ಕೇಸ್ ತಂದ್ರೆ ಅದನ್ನು ಎಕ್ಕೊಂಡು ಹೋಗೋಕೆ ಬರ್ತಾರೆ !
***
ಒಪ್ಪಬೇಕಲ್ಲ
ಗಾಂಪ: ನೋಡೊ, ಪಕ್ಕದ್ಮನೆ ತಾರಾ ಗಂಡನ ಜೊತೆ ವಾರಕ್ಕೊಮ್ಮೆಯಾದ್ರೂ ಸಿನಿಮಾ ನೋಡೋಕೆ ಹೋಗ್ತಾಳೆ. ನೀನ್ಯಾಕೆ ಹೋಗಬಾರದು?
ಸೂರಿ: ಹೋಗಬೇಕು ಅಂತ ನನಗೂ ಆಸೆ ಇದೆ. ಆದರೆ, ತಾರಾ ಒಪ್ಪಬೇಕಲ್ಲ.
***
ಶಬ್ಧ
ಸೂರಿ: ಮುಂಜಾನೆ ನಿಮ್ಮ ಮನೆಯಲ್ಲೇನೋ ಶಬ್ದ ಬಂತಲ್ಲ, ಏನದು?
ಗಾಂಪ: ಆದಾ? ನನ್ನ ಹೆಂಡತಿ ಬೈತಾ ಇದ್ಲು ಅದಕ್ಕೆ ಹೊರಗೆ ಕೇಳಿಸ್ತದೆ ಅಂತ ಡಬ್ಬ ಬಾರಿಸ್ತಿದ್ದೆ.
***
ದೀಪಾವಳಿ
ಶ್ರೀಮತಿ: ಪಕ್ಕದ ಮನೆ ತಾರಾ ಈ ಸಲ ದೀಪಾವಳಿಗೆ ತವರು ಮನೆಗೆ ಹೋಗಲ್ಲ ಅಂತೆ ರೀ.
ಸೂರಿ: ಪರವಾಗಿಲ್ಲ ಅವಳು ಹೋಗದಿದ್ದರೆ ಏನಾಯ್ತು, ನೀನು ಹೋಗು.
ಶ್ರೀಮತಿ: ಅಯ್ಯೋ, ನಾನೂ ಹೋಗಲ್ಲ ರೀ,
ಸೂರಿ: ಯಾಕೆ?
ಶ್ರೀಮತಿ: ನೀವು ಇಲ್ಲೇ ಇರ್ತೀರಲ್ಲ ಅದಕ್ಕೆ !
***
ಮಾರಾಟ
ಸೂರಿ: ಮೊನ್ನೆ ನಿಮ್ಮ ಕವನ ಸಂಕಲನ ಬಿಡುಗಡೆ ಆಯ್ತಲ್ಲ, ಅದನ್ನು ಎಷ್ಟು ಮಂದಿ ತೆಗೆದುಕೊಂಡರು?
ಗಾಂಪ: ಅಂದಾಜು ನೂರು ಪ್ರತಿ.
ಸೂರಿ: ಅಬ್ದಾ, ಅಷ್ಟು ಮಂದಿ ಕೊಂಡುಕೊಂಡರಾ?
ಗಾಂಪ: ಇಲ್ಲ, ವೇದಿಕೆಯ ಮೇಲಿದ್ದವರಿಗೆ ಹೋದವು.
(ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!